ಬೆಂಗಳೂರು: ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ. 7 ಜನ ಆಯ್ಕೆಯಾಗಬೇಕಿರುವ ಹಿನ್ನೆಲೆಯಲ್ಲಿ8 ಜನ ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. ಹೀಗಾಗಿ ನಾಳೆ ನಡೆಯಬೇಕಿರುವ ಕಾಂಗ್ರೆಸ್ ಶಾಸಕರ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ. ನಾಳೆ ಸಂಜೆ 6 ಗಂಟೆಗೆ ಬಿಡದಿ ಸಮೀಪವಿರುವ ವಂಡರ್ಲಾ ರೆಸಾರ್ಟ್ನಲ್ಲಿ ಶಾಸಕರಿಗಾಗಿ 140 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆಯುತ್ತಿರುವ ಮೊದಲನೇ ಶಾಸಕಾಂಗ ಸಭೆ ಇದಾಗಿದೆ.
ಈ ತಿಂಗಳ 18ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಜಡಿಎಸ್ ಹಾಗೂ ಕಾಂಗ್ರೆಸ್ನ ಐದನೇ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ನಡೆದಿದೆ. ಈ ಹಿನ್ನೆಲೆಯಲ್ಲಿ ಎರಡು ಪಕ್ಷಗಳಿಗೆ ಈ ಚುನಾವಣೆ ಭಾರೀ ಪ್ರತಿಷ್ಠೆಯಾದ್ದಾಗಿದೆ. ಈಗಾಗಲೇ ಕಾಂಗ್ರೆಸ್ನ ಸುಮಾರು 14 ಶಾಸಕರು ಹಾಗೂ ಮೂವರು ಪಕ್ಷೇತರರನ್ನು ಜೆಡಿಎಸ್ ಶಾಸಕರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಅಡ್ಡ ಮತದಾನವಾಗ ಬಹುದು ಎಂಬ ಭೀತಿಯಲ್ಲಿ ಎಲ್ಲಾ ಶಾಸಕರನ್ನು ರೆಸಾರ್ಟ್ಗೆ ಕರೆದೊಯ್ಯಲಾಗುತ್ತಿದೆ.



