ದೇವನಹಳ್ಳಿ: ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ ಜೊತೆಗೆ 2047ರ ವಿಕಸಿತ ಭಾರತದ ಸಂಕಲ್ಪವನ್ನು ಈಡೇರಿಸಲು ದೇಶ ಸಜ್ಜಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.ದೇವನಹಳ್ಳಿ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜಿಟಲ್ ಪಾವತಿ ವ್ಯವಸ್ಥೆ, ದೇಶಾದ್ಯಂತ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಅಭಿವೃದ್ಧಿ ಹಾಗೂ ವಾಯುಕ್ಷೇತ್ರದ ಸಂಪರ್ಕದಲ್ಲಿನ ಕ್ರಾಂತಿ- ಇವು ನರೇಂದ್ರ ಮೋದಿಜೀ ಸರಕಾರದ ಪ್ರಮುಖ ಕ್ರಾಂತಿಕಾರಿ ಸಾಧನೆಗಳು ಎಂದು ವಿಶ್ಲೇಷಿಸಿದರು. ಅಮೆರಿಕವು ಬಡ್ಡಿ ದರ ಕಡಿಮೆ ಮಾಡುವುದು, ಅಮೆರಿಕದ ಹಣಕಾಸು ಕ್ಷೇತ್ರದ ಕ್ರಮಗಳು ಕೂಡ ರೂಪಾಯಿಯ ವಿನಿಮಯ ದರ ಏರುಪೇರಿಗೆ ಕಾರಣವಾಗಿದೆ. ಜಪಾನ್ ಯೆನ್ ಕೂಡ ಡಾಲರ್ ಎದುರು ಮೌಲ್ಯ ಕಳೆದುಕೊಂಡಿದೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.ನಾವು ಕಚ್ಚಾ ತೈಲ, ಗ್ಯಾಸ ಅನ್ನು ಹೊರಗಿನಿಂದ ತರಿಸಿಕೊಳ್ಳಬೇಕಿದೆ. ಈ ವಿಚಾರದಲ್ಲಿ ನಾವು ಸ್ವಾವಲಂಬಿಗಳಲ್ಲ. ಇದಕ್ಕೆ ಪಾವತಿಯನ್ನು ಡಾಲರ್ನಲ್ಲೇ ಮಾಡಬೇಕಿದೆ. ಎರಡನೇಯದಾಗಿ ಗರಿಷ್ಠ ಪ್ರಮಾಣದ ರಸಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತೇವೆ. ರಸಗೊಬ್ಬರದ ಆಮದು ವೆಚ್ಚ ಹೆಚ್ಚಾಗುತ್ತಿದೆ. ಕೋವಿಡ್ ಅವಧಿಯಲ್ಲಿ ನಾವು ರಸಗೊಬ್ಬರದ ಬ್ಯಾಗ್ಗೆ ಸುಮಾರು 300 ರೂ. ದರ ನಿಗದಿಪಡಿಸಿದ್ದೇವೆ. ಅದೇ ಬ್ಯಾಗ್ ಆಮದು ದರ 3 ಸಾವಿರಕ್ಕೆ ಏರಿದೆ. ಇದರಿಂದ 2700 ರೂ. ಸಬ್ಸಿಡಿಯನ್ನು ಕೇಂದ್ರವು ನೀಡಬೇಕಿದೆ ಎಂದು ವಿವರಿಸಿದರು.ಇದಲ್ಲದೇ, ಚಿನ್ನದ ಆಮದು ಮಾಡಿಕೊಂಡು ಡಾಲರ್ನಲ್ಲಿ ಪಾವತಿ ನಡೆಯುತ್ತಿದೆ. ಚಿನ್ನದ ಪ್ರತಿ ಔನ್ಸ್ ದರ ರಾಕೆಟ್ನಂತೆ ತೀವ್ರವಾಗಿ ಏರುತ್ತಿದೆ. ಇದೇ ಕಾರಣಕ್ಕೆ ಪ್ರಧಾನಿಯವರು ಕಾರ್ ಪೂಲಿಂಗ್ನಂಥ ಕ್ರಮಕ್ಕೆ ಮುಂದಾಗಲು ಮನವಿ ಮಾಡಿದ್ದಾಗಿ ವಿವರ ನೀಡಿದರು.ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ ಸಂಗ್ರಹವಾದ ತೆರಿಗೆಯನ್ನೆಲ್ಲ ಬೆಂಗಳೂರಿಗೇ ಬಳಸಬೇಕೆಂದು ಭಾವಿಸಿದರೆ, ಯಾದಗಿರಿ, ಕಲಬುರ್ಗಿ ಅಭಿವೃದ್ಧಿಗೆ ಕರ್ನಾಟಕ ಸರಕಾರ ಎಲ್ಲಿಂದ ಅನುದಾನ ಕೊಡಬೇಕು? ಎಂದು ಪ್ರಶ್ನಿಸಿದ ಅವರು, ಕರ್ನಾಟಕ ಹೆಚ್ಚು ತೆರಿಗೆ ನೀಡುತ್ತಿದ್ದು, ಇಲ್ಲಿಗೆ ಹೆಚ್ಚು ಅನುದಾನ ಬರಬೇಕೆಂಬ ತತ್ವ- ಚಿಂತನೆ ಸರಿಯಲ್ಲ ಎಂದು ಹೇಳಿದರು. ಇದೆಲ್ಲವನ್ನು ಹಣಕಾಸು ಆಯೋಗ ನಿರ್ಧರಿಸುತ್ತದೆ. ಕರ್ನಾಟಕದಲ್ಲಿರುವ ಹಿರಿಯ ಕಾಂಗ್ರೆಸ್ ನಾಯಕರು ಇದೆಲ್ಲವನ್ನೂ ತಿಳಿದಿದ್ದಾರೆ. ಆದರೂ, ಅವರು ಸದ್ದುಗದ್ದಲ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.ಮನೆಗಳ ನಿರ್ಮಾಣ, ಶೌಚಾಲಯ ನಿರ್ಮಾಣ, ಮನೆಮನೆಗೆ ನಳ್ಳಿ ನೀರು ಮೊದಲಾದ ಯೋಜನೆಗಳ ಮೂಲಕ ಜನಸಾಮಾನ್ಯರಿಗೆ ಕೇಂದ್ರವು ನೆರವಾಗುತ್ತಿದೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.ಅಣ್ಣಾಮಲೈ ಅವರು ಪಕ್ಷ ತೊರೆದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಕೇಡರ್ ಆಧರಿತ ಪಕ್ಷ. ಜನಸಂಘದ ಸ್ಥಾಪಕರಾದ ಬಾಲರಾಜ ಮಧೋಕ್ ಅವರು ಕೆಲಸಮಯದ ಬಳಿಕ ಪಕ್ಷ ತೊರೆದಿದ್ದರು. ಕಲ್ಯಾಣ್ ಸಿಂಗ್ ಅವರೂ ಪಕ್ಷ ತೊರೆದು ಕೆಲಸಮಯದ ಬಳಿಕ ಪಕ್ಷಕ್ಕೆ ಮರಳಿದ್ದಾರೆ. ಉಮಾಭಾರತಿಯವರು, ಯಡಿಯೂರಪ್ಪನವರು ಒಂದು ಸಂದರ್ಭದಲ್ಲಿ ಪಕ್ಷ ತೊರೆದಿದ್ದರು. ಆದರೆ, ಪಕ್ಷ ಮುಂದುವರೆಯಿತು. ಯಡಿಯೂರಪ್ಪನವರು ಪಕ್ಷಕ್ಕೆ ಮರಳಿದಾಗ ನಾವು ಸಂತಸಪಟ್ಟೆವು ಎಂದು ವಿಶ್ಲೇಷಿಸಿದರು.
ಮೋದಿಜೀ ಅವರ ನೇತೃತ್ವದ 12 ಪೂರ್ಣ ವರ್ಷಗಳ ಕಾರ್ಯನಿರ್ವಹಣೆಯು ದಾಖಲೆಗಳ ಅವಧಿ ಎಂದು ತಿಳಿಸಿದರು. ಪ್ರಧಾನಿಯಾಗಿ 4,399 ದಿನಗಳ ಆಡಳಿತದ ಗರಿಷ್ಠ ದಾಖಲೆಯನ್ನೂ ಮೋದಿಯವರು ಮಾಡಿದ್ದಾರೆ ಎಂದು ತಿಳಿಸಿದರು. ಈ ಮೂಲಕ ನೆಹರೂ ಅವರ ಚುನಾಯಿತ ಪ್ರಧಾನಿಯಾಗಿ ಅವಧಿಯ ದಾಖಲೆಯನ್ನು ಮುರಿದಿದ್ದಾರೆ ಎಂದರು.ಕರ್ನಾಟಕದಲ್ಲಿ ಶೇ 96ರಷ್ಟು ವಿದ್ಯುದೀಕೃತ ರೈಲ್ವೆ ವ್ಯವಸ್ಥೆ ಈಗ ಸಾಧ್ಯವಾಗಿದೆ. ಹೊಸ ವಂದೇ ಭಾರತ್ ಎಕ್ಸೆ÷್ಪçಸ್ಗಳನ್ನು ಆರಂಭಿಸಲಾಗಿದೆ. ಏಮ್ಸ್, ಐಐಟಿಗಳನ್ನು ದೇಶಾದ್ಯಂತ ಆರಂಭಿಸಿದ್ದೇವೆ ಎಂದು ಅವರು ಮೋದಿಯವರ ಸರಕಾರದ ಕ್ರಾಂತಿಕಾರಿ ಸಾಧನೆಗಳ ವಿವರ ನೀಡಿದರು.ಆದಾಯ ತೆರಿಗೆ ಮಿತಿ 2014ರಲ್ಲಿ 2.5 ಲಕ್ಷ ಆಗಿತ್ತು. ಅದನ್ನು ಈಗ 12.75 ಲಕ್ಷಕ್ಕೆ ಏರಿಸಿದ್ದೇವೆ. ಇದು ಮಧ್ಯಮ ವರ್ಗದವರಿಗೆ ಕೊಟ್ಟ ಕೊಡುಗೆ ಎಂದು ತಿಳಿಸಿದರು. ಜಿಎಸ್ಟಿಯಿಂದಾಗಿ ತೆರಿಗೆ ವ್ಯವಸ್ಥೆಯ ಸುಧಾರಣೆ ಎಂದು ಅವರು ಹೇಳಿದರು.
ಬಿಜೆಪಿ ರಾಜ್ಯಧ್ಯಕ್ಷರಾದ ವಿಜಯೇಂದ್ರ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ದಾಖಲೆಯನ್ನು ಮುರಿದಿದ್ದಾರೆ, ಕೇವಲ ದಿನಗಳಲ್ಲಿ ಸಾಧನೆಯಲ್ಲ ,ಜಾಗತಿಕ ಮಟ್ಟದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಸಾಧಿಸಿದ್ದಾರೆ .ಜಗತ್ತಿನ ನಾಲ್ಕನೇ ಶಕ್ತಿಯುತ ರಾಷ್ಟçವಾಗಿ ಬೆಳೆಯಲು ಕೇವಲ ಭಾಷಣದಿಂದ ಮಾತ್ರ ಸಾಧ್ಯವಿಲ್ಲ ಅವರ ನಾಯಕತ್ವದಿಂದ ಇದೆಲ್ಲವು ಸಾಧ್ಯ ಎಂದು ಹೇಳಿದರು.
ಸಂಸದರಾದ ಡಾ.ಕೆ.ಸುಧಾಕರ್ ಮಾತನಾಡಿ ಮುಂಬರುವ ಚುನಾವಣೆಗಳಿಗೆ ಕಾಲಾವಕಾಶ ಕಡಿಮೆ ಇದ್ದು,ಪಕ್ಷವು ಸ್ವಕ್ಷೇತ್ರದ ಅಭ್ಯರ್ಥಿಗಳಿಗೆ ಅವಕಾಶ ಕೊಡಬೇಕು, ಅಹಿಂದ ನಾಯಕತ್ವಕ್ಕೆ ತಿಲಾಂಜಲಿ ಇಟ್ಟಿರುವ ಕಾಂಗ್ರೆಸ್ ಸರ್ಕಾರ ಅಹಿಂದರನ್ನು ಮತ್ತು ದಲಿತರನ್ನು ಮತಗಳಿಗೆ ಮಾತ್ರ ಸೀಮಿತವಾಗಿಸಿದ್ದಾರೆ, ಆದರೆ ಬಿಜೆಪಿ ಪಕ್ಷ ಜಾತ್ಯಾತೀತವಾಗಿ ಈ ದೇಶದ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವುದಾಗಿದೆ ಅದರಿಂದ ಪಕ್ಷ ಸಂಘಟನೆಗೆ ಇನ್ನಷ್ಟು ಚುರುಕಾಗಿ ಶ್ರಮಿಸಬೇಕು ಮತ್ತೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸ್ಥಾಪನೆ ಮಾಡಬೇಕಾಗಿದೆ ಎಂದರು.
ದೇವನಹಳ್ಳಿ ತಾಲೂಕಿನ ಚಪ್ಪರದಕಲ್ಲು ಹತ್ತಿರ ದಾಬಸ್ ಪೇಟೆ-ಚನ್ನೈ ಎಕ್ಸ್ ಪ್ರೆಸ್ ರಾಷ್ಟ್ರೀಯ ಹೆದ್ದಾರಿಯ ಕೇಂದ್ರ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ವೀಕ್ಷಣೆ ಮಾಡಿದರು.ನಂತರ ದೇವನಹಳ್ಳಿ ಪಟ್ಟಣದಲ್ಲಿರುವ ಬಿಜೆಪಿ ಪಕ್ಷದ ಕಚೇರಿಯನ್ನು ಉದ್ಘಾಟಿಸಿ ಪತ್ರಿಕಾಗೋಷ್ಠಿ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಸಂಸದ ಡಾ. ಕೆ.ಸುಧಾಕರ್, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಮಾಜಿ ಶಾಸಕ ಚಂದ್ರಣ್ಣ, ದೇವನಹಳ್ಳಿ ಮಂಡಲದ ಅಧ್ಯಕ್ಷ ಅಂಬರೀಷ್ ಗೌಡ, ವಿಭಾಗ ಪ್ರಭಾರಿ ಬ್ಯಾಟರಂಗೇಗೌಡ, ವಿಧಾನಪರಿಷತ್ ಸದಸ್ಯ ಎಸ್. ಕೇಶವ ಪ್ರಸಾದ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಪ್ರಮುಖರು ಇದ್ದರು.
ವಿಕಸಿತ ಭಾರತ ಸಂಕಲ್ಪ: ನಿರ್ಮಲಾ ಸೀತಾರಾಮನ್ ಕರ್ನಾಟಕ ಹೆಚ್ಚು ತೆರಿಗೆ ನೀಡುತ್ತಿದ್ದು, ಇಲ್ಲಿಗೆ ಹೆಚ್ಚು ಅನುದಾನ ಬರಬೇಕೆಂಬ ತತ್ವ- ಚಿಂತನೆ ಸರಿಯಲ್ಲ



