ರಾಮನಗರ: ನಗರದ ಮಂಡೀಪೇಟೆಯಲ್ಲಿ ಭಕ್ತಸಂರಕ್ಷಣಾರ್ಥವಾಗಿ ನೆಲೆಸಿರುವ ಶಕ್ತಿ ದೇವತೆ ಬನ್ನಿಮಹಾಂಕಾಳಿ ಅಮ್ಮನವರ ಕರಗ, ಅಗ್ನಿಕೊಂಡ ಮಹೋತ್ಸವ ಬುಧವಾರ ವಿಜೃಂಭಣೆಯಿAದ ಸಾವಿರಾರು ಭಕ್ತ ಜನಸಾಗರದ ನಡುವೆ ಜೈ ಬನ್ನಿ ಮಹಾಂಕಾಳಿ ಜಯಘೋಷದೊಡನೆ ವಿಜೃಂಭಣೆಯಿAದ ನೆರವೇರಿತು.ಕಳೆದ 22 ವರ್ಷಗಳಿಂದ ಆರ್.ಎನ್.ಯೋಗೇಶ್ ಎಂಬುವರು ಕರಗ ಧಾರಣೆ ಮಾಡುತ್ತಾ ಬಂದಿದ್ದಾರೆ. ಮಂಗಳವಾರ ಸಂಜೆ ಮಲ್ಲಿಗೆ ಮೊಗ್ಗಿನಿಂದ ಶೃಂಗಾರಗೊAಡ ಕರಗಕ್ಕೆ ಭಕ್ತರು ಪೂಜೆ ಸಲ್ಲಿಸಿ ಭಕ್ತಿಯಲ್ಲಿ ಮಿಂದೆದ್ದರು. ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದವರೆಗೂ ಕರಗ ಮೆರವಣಿಗೆ ನಡೆಯಿತು.ಮೆರವಣಿಗೆ ನಂತರ ದೇವಾಲಯ ಆವರಣಕ್ಕೆ ಬಂದ ಕರಗ ಬುಧವಾರ ಮಧ್ಯಾಹ್ನ 1-05 ಗಂಟೆ ವೇಳೆಗೆ ಅಗ್ನಿಕೊಂಡ ಪ್ರವೇಶಿತು. ಕರಗ ಹೊತ್ತ ಯೋಗೇಶ್ ಅಗ್ನಿಕೊಂಡ ಪ್ರವೇಶ ಮಾಡಿದರು. ನೆರೆದಿದ್ದ ಸಾವಿರಾರು ಜನರು ಜೈ ಬನ್ನಿ ಮಹಾಂಕಾಳಿ ಗೋವಿಂದ ಗೋವಿಂದ ನಾಮಸ್ಮರಣೆ ಮಾಡುತ್ತಾ ಅಗ್ನಿಕೊಂಡೋತ್ಸವಕ್ಕೆ ಸಾಕ್ಷಿಯಾದರು 400 ವರ್ಷಗಳ ಇತಿಹಾಸ : ಬನ್ನಿಮಹಾಂಕಾಳಿ ಅಮ್ಮನವರಿಗೆ ಪ್ರತೀ ವರ್ಷ ಆಷಾಢ ಮಾಸದಲ್ಲಿ ಕರಗ ಮಹೋತ್ಸವ ಅಗ್ನಿಕೊಂಡ ನಡೆಯುತ್ತಾ ಬಂದಿದೆ. ಬಂಡಿ ಮಹಾಂಕಾಳಿ, ಬನ್ನಿ ಮಹಾಂಕಾಳಿ ಅಮ್ಮ ಎಂದು ದೇವಾಲಯ ಪ್ರಸಿದ್ದಿ ಪಡೆದಿದ್ದು ನಗರ ದೇವತೆ ಶಕ್ತಿ ದೇವತೆ ಎಂದು ಮನೆ ಮಾತಾಗಿದೆ. ದೇವಾಲಯ ಸುಮಾರು 400 ವರ್ಷಗಳಿಂದಲೂ ಮೈಸೂರು ಮಹಾರಾಜರ ಕಾಲದಿಂದಲೂ ಪ್ರಖ್ಯಾತಿ ಪಡೆದಿದೆ. ಕರಗ ಮಹೋತ್ಸವ ರಾಮನಗರ ಸುತ್ತಮುತ್ತಲ ಭಕ್ತರಿಗೆ ವೈಭವದ ವಿಜೃಂಭಣೆ ಹಬ್ಬವಾಗಿದೆ. ಬನ್ನಿಮಹಾಂಕಾಳಿ ಅಮ್ಮನವರನ್ನು ಸ್ಥಳೀಯ ಭಕ್ತರು ಆರಾಧಿಸುತ್ತಾ ಬಂದಿದ್ದಾರೆ. ಕರಗ ಸಂಚಾರ : ಮಂಗಳವಾರ ರಾತ್ರಿ 8 ಗಂಟೆಗೆ ಮಂಡೀಪೇಟೆ ದೇವಾಲಯದ ಆವರಣದಿಂದ ಹೊರಟ ಕರಗ ತಿಗಳರಬೀದಿ, ರಾಘವೇಂದ್ರ ಕಾಲೋನಿ, ಐಜೂರು, ಛತ್ರದಬೀದಿ, ಅಗ್ರಹಾರ, ಕಾಯಿಸೊಪ್ಪಿನಬೀದಿ, ಚಾಮುಂಡೇಶ್ವರಿ ದೇವಾಲಯದಲ್ಲಿ ಮಂಗಳಾರತಿ ಸ್ವೀಕರಿಸಿ ಗಾಂಧೀನಗರ, ಪೋಲೀಸ್ ಕ್ವಾಟ್ರಸ್, ಡಾ. ಬಿ.ಆರ್. ಅಂಬೇಡ್ಕರ್ ಕಾಲೋನಿ, ಶೆಟ್ಟಹಳ್ಳಿಬೀದಿ, ಎಂ.ಜಿ. ರಸ್ತೆ, ಹಳೇ ಬಿ.ಎಂ. ರಸ್ತೆ, ಟ್ರೂಫ್ಲೆöÊನ್, ಅರ್ಕೇಶ್ವರ ಕಾಲೋನಿ, ನೇರಳೇಕೇರಿ, ಬಾಲಗೇರಿಗಳಲ್ಲಿ ಸಂಚರಿಸಿ ಕರಗದಬೀದಿ ಮೂಲಕ ಮುಖ್ಯರಸ್ತೆಗೆ ಬಂದು ಬಲಮುರಿ ಗಣೇಶ ದೇವಾಲಯದಲ್ಲಿ ಪೂಜೆ ನಂತರ ದೇವಾಲಯದ ಆವರಣಕ್ಕೆ ಬಂದು ಅಗ್ನಿಕೊಂಡ ಪ್ರವೇಶ ಮಾಡಿತು.ಶೃಂಗಾರಗೊಂಡ ಬೀದಿಗಳು : ವಿಶೇಷವಾಗಿ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಬೀದಿಗಳನ್ನು ಅಲಂಕಾರ ಮಾಡಲಾಗಿತ್ತು. ಜೊತೆಗೆ ಛತ್ರದಬೀದಿ, ಹಳೇ ಬಸ್ ನಿಲ್ದಾಣ, ಎಂ.ಜಿ. ರಸ್ತೆ, ಬಾಲಗೇರಿ, ಕರಗದಬೀದಿ ಮತ್ತಿತರ ವೃತ್ತಗಳಲ್ಲಿ ಕರಗ ಬರುವ ಬೀದಿ ಬೀದಿಗಳಲ್ಲಿ ಹೂ ಅಲಂಕಾರ ಮಾಡಿ ವಿಶೇಷವಾಗಿ ಶೃಂಗರಿಸಿ ಕರಗ ಹಬ್ಬಕ್ಕೆ ಮತ್ತಷ್ಟು ಮೆರಗು ಹೆಚ್ಚಿಸಿತ್ತು.ಹಸಿ ಕರಗ : ಮುಂದಿನ ಮಂಗಳವಾರ ನಡೆಯಲಿರುವ ಚಾಮುಂಡೇಶ್ವರಿ ಮತ್ತು ಮಗ್ಗದಕೇರಿ ಮಾರಮ್ಮ, ಶೆಟ್ಟಳ್ಳಿಬೀದಿ, ಐಜೂರು, ಕೊಂಕಾಣಿದೊಡ್ಡಿ ಆದಿಶಕ್ತಿ, ಮುತ್ತುಮಾರಮ್ಮ, ಭಂಡಾರಮ್ಮ ಕರಗ ನಡೆಯಲಿದ್ದು ಹಸಿಕರಗಗಳಿಗೆ ಮಂಗಳವಾರ ಸಂಜೆ ಚಾಲನೆಗೊಂಡವು.ಕುಣಿದ ಚಿಣ್ಣರು, ಯುವಕರು : ಕರಗ ಮಹೋತ್ಸವದ ಜೊತೆಯಲ್ಲಿ ಯುವಕರು, ಚಿಣ್ಣರ ದಂಡೇ ಇಡೀ ರಾತ್ರಿ ಜೊತೆಗಿದ್ದು ಜೈಕಾರ ಹಾಕುತ್ತಾ ಕರಗದ ಜೊತೆಯಲ್ಲಿ ಸಾಗಿ ಕರಗ ಮಹೋತ್ಸವಕ್ಕೆ ಮತ್ತಷ್ಟು ರಂಗು ಹೆಚ್ಚಿಸಿದ್ದರು. ವೀರಮಕ್ಕಳ ಕುಣಿತ ಕರಗದಾರಕರ ಕುಣಿತ, ತಮಟೆ ಸದ್ದು ಅದ್ದೂರಿ ಕರಗ ಮಹೋತ್ಸವಕ್ಕೆ ಸಾಕ್ಷಿಯಾದವು.ಪ್ರಸಾದ ವಿತರಣೆ ಕರಗ ಅಗ್ನಿಕೊಂಡ ಪ್ರವೇಶ ಮಾಡುತ್ತಲೇ ನಗರದ ಕರಗದಬೀದಿ, ಮಂಡೀಪೇಟೆ, ಮುಖ್ಯರಸ್ತೆ, ಎಂ.ಜಿ. ರಸ್ತೆಗಳಲ್ಲಿ ಯುವಕರು, ಭಕ್ತರು ಅನ್ನ ಪ್ರಸಾದ ವಿತರಣೆ ನಡೆಸಿದರು.ಬಂದೋಬಸ್ತ್ : ಡಿಎಸ್ಪಿ ಶ್ರೀನಿವಾಸ್, ರಾಮನಗರ ನಗರ ಠಾಣೆ ವೃತ್ತ ನಿರೀಕ್ಷಕ ರಮೇಶ್, ಗ್ರಾಮಾಂತರ ಠಾಣೆ ಮುರಳಿ, ನಗರ ಠಾಣೆ ಸಬ್ಇನ್ಸ್ಪೆಕ್ಟರ್ ತನ್ವೀರ್ ಕರಗ ಮೆರವಣಿಗೆ ಮಾರ್ಗಗಳಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಬಂದೋಬಸ್ತೆ÷್ಗ ನೂರಾರು ಪೋಲೀಸರ ನಿಯೋಜನೆ ಮಾಡಲಾಗಿತ್ತು. ಜಿಲ್ಲಾಧಿಕಾರಿ ಯಶ್ವಂತ್ ವಿ. ಗುರುಕರ್, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಶ್ರೀನಿವಾಸ್ಗೌಡ ಕರಗ ಉತ್ಸವ ಸಂಧರ್ಭದಲ್ಲಿ ಹಾಜರಿದ್ದು ದೇವಿ ಮತ್ತು ಕರಗ ದರ್ಶನ ಪಡೆದರು. ದೇವಾಲಯದಲ್ಲಿ ದೇವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಮಂಗಳವಾರ ಬೆಳಗಿನಿಂದಲೇ ದೇವಾಲಯದಲ್ಲಿ ಹೆಣ್ಣುಮಕ್ಕಳು ತಂಬಿಟ್ಟಿನ ಆರತಿಯೊಡನೆ ಪೂಜೆ ಸಲ್ಲಿಸಿದರು. ಸಾವಿರಾರು ಹೆಣ್ಣುಮಕ್ಕಳು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.



