ರಾಮನಗರ: ಜಿಬಿಡಿಎ ಟೌನ್ಶಿಪ್ ಭೂಸ್ವಾಧೀನ ವಿಚಾರವಾಗಿ ದರ್ಪ, ದೌರ್ಜನ್ಯ ತೋರಿಸಿ ಅಧಿಕಾರಿಗಳು ಬಲವಂತವಾಗಿ ರೈತರ ಭೂಮಿ ಕಿತ್ತುಕೊಳ್ಳಲು ಹೊರಟಿರುವುದನ್ನು ಕರ್ನಾಟಕ ನವ ನಿರ್ಮಾಣ ಸೇನೆ ಖಂಡಿಸುತ್ತದೆ. ನಿನ್ನೆ ರೈತ ಮಹಿಳೆಯರು ಪೊರಕೆ ಸೇವೆ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಒನಕೆ ಸೇವೆ ಮಾಡುತ್ತಾರೆ ಎಂದು ಸಂಘಟನೆ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್ ತಿಳಿಸಿದರು.
ಮಂಗಳವಾರ ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಮಂಡಲಹಳ್ಳಿಯಲ್ಲಿ ರೈತರು ನಡೆಸಿದ ಹೋರಾಟ ಆಕ್ರೋಶದ ಕಿಚ್ಚಲ್ಲ, ಸ್ವಾಭಿಮಾನದ ಕಿಚ್ಚು. ತಮ್ಮ ಭೂಮಿ ಯನ್ನು ಕಿತ್ತುಕೊಳ್ಳಲು ಅಧಿಕಾರಿಗಳು ಬಂದಾಗ ಸ್ವಾಭಿಮಾನ ದಿಂದ ಹೋರಾಟ ನಡೆಸಿರುವ ರೈತರ ಮೇಲೆ ಯಾವುದೇ ಪ್ರಕರಣಗಳನ್ನು ದಾಖಲು ಮಾಡದೆ, ರೈತರಿಗೆ ಸರ್ಕಾರ ನೈತಿಕ ದೈರ್ಯ ಹೇಳಬೇಕಾಗಿದೆ ಎಂದರು.ಅಭಿವೃದ್ಧಿ ಹೆಸರಲ್ಲಿ ಬಲವಂತವಾಗಿ ಭೂಮಿಯನ್ನು ಕಸಿದುಕೊಂಡು ರೈತರನ್ನು ಬೀದಿಗೆ ತಳ್ಳುವುದು ಸರಿಯಲ್ಲ. ಅಭಿವೃದ್ದಿ ಹೆಸರಿನಲ್ಲಿ ವಶಪಡಿಸಿಕೊಂಡಿರುವ ರೈತರ ಜಮೀನುಗಳು ಏನಾಗಿದೆ ಎಂಬ ದಾಖಲೆ ನಮ್ಮ ಕಣ್ಣಮುಂದಿದೆ. ಕೆಐಡಿಬಿ, ಕೆಎಚ್ಬಿ ಹೀಗೆ ಅನೇಕ ಯೋಜನೆಗಳಿಗಾಗಿ ರೈತರ ಭೂಮಿ ಯನ್ನು ಕಸಿದುಕೊಂಡು ಮೋಸ ಮಾಡಲಾಗಿದೆ. ಬಿಡದಿ ಭಾಗದ ಸಂತ್ರಸ್ತ ರೈತರ ಪರ ಕರ್ನಾಟಕ ನವನಿರ್ಮಾಣ ಸೇನೆ ಬೆಂಬಲವಾಗಿ ನಿಲ್ಲುವ ಜತೆಗೆ ನ್ಯಾಯ ದೊರಕಿಸಲು ಕಾನೂನು ಹೋರಾಟ ಮಾಡಲಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೂಸ್ವಾಧೀನ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.ಟೌನ್ಶಿಪ್ ಯಾರಿಗೆ ಬೇಕು?: ಅಭಿವೃದ್ದಿ ಹೆಸರಿನಲ್ಲಿ ಫಲವತ್ತಾದ ಭೂಮಿಯನ್ನು ರೈತರಿಂದ ಕಿತ್ತುಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ರಾಜ್ಯ ಸರ್ಕಾರ ರೈತ ಪರ, ಕನ್ನಡಿಗರ ಪರ ಇರಬೇಕು. ರಿಯಲ್ ಎಸ್ಟೇಟ್ ಸರ್ಕಾರ ಆಗಬಾರದು. ಬಿಡದಿಯಿಂದ ಕನ್ನಡಿಗರನ್ನು ಒಕ್ಕಲಿಬ್ಬಿ ಸುವುದು ಬೇಡ, ಆ ಜಾಗಕ್ಕೆ ಹೊರ ರಾಜ್ಯದ ಅನ್ಯಭಾಷಿಕರನ್ನು ತಂದು ಕೂರಿಸುವುದು ಏಕೆ? ಇದು ಹೀಗೆ ಮುಂದುವರೆದರೆ ಕನ್ನಡ ನಾಡಿನಲ್ಲಿ ಕನ್ನಡಿಗರು ಕಣ್ಮರೆ ಆಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.ಸರ್ಕಾರ ಕೂಡಲೇ ಭೂಸ್ವಾಧೀನ ಕೈಬಿಡಬೇಕು. ರೈತರ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಇಲ್ಲಿದಿದ್ದರೆ ನಲಗುಂದ ಮಾದರಿಯಲ್ಲಿ ರೈತರು ಉಗ್ರ ಹೋರಾಟಕ್ಕೆ ಮುಂದಾಗು ತ್ತಾರೆ. ಮುಖ್ಯಮಂತ್ರಿಗಳು ತಮ್ಮ ತವರು ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಲೂಟಿಗೆ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದರು.ರೈತರಿಗೆ ಇದೇ ರೀತಿ ತೊಂದರೆ ನೀಡಿದರೆ ಇದು ಸರ್ಕಾರದ ಅವನತಿಗೆ ಕಾರಣವಾಗಲಿದೆ. ರೈತರಿಗೆ ಅನ್ಯಾಯ ಆಗಲು ಕರ್ನಾಟಕ ನವ ನಿರ್ಮಾಣ ಸೇನೆ ಬಿಡುವುದಿಲ್ಲ. ಕೂಡಲೇ ಜಮೀನು ಸರ್ವೆ ಕಾರ್ಯವನ್ನು ನಿಲ್ಲಿಸಬೇಕು. ಇದು ಸ್ವಾಬಿಮಾನಿ ರೈತರ ಹೋರಾಟ, ತಲೆಮಾರಿನಿಂದ ಕಾಪಾಡಿಕೊಂಡು ಬಂದ ತಮ್ಮ ಭೂಮಿಯನ್ನು ಕಳೆದುಕೊಳ್ಳುವ ರೈತರು ನೋವು, ಆಕ್ರೋಶ, ಆತಂಕದಿAದ ಪೊರಕೆ ಸೇವೆ ಮಾಡಿದ್ದಾರೆ. ಇವರ ವಿರುದ್ಧ ಸರ್ಕಾರ ಯಾವುದೇ ಕಾರಣಕ್ಕೂ ಕಾನೂನು ಕ್ರಮ ಕೈಗೊಳ್ಳಬಾರದು ಎಂದರು. ರೈತರು ಪಕ್ಷಾತೀತವಾಗಿ ಹೋರಾಟ ಮಾಡಬೇಕು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂದು ಬಣಗಳಾದರೆ ಅನ್ಯಾಯ ಆಗಲಿದೆ. ರಾಜಕಾರಣಿಗಳ ಪ್ರಚೋದನೆಗೆ ಒಳಪಟ್ಟು ಭೂಮಿಯನ್ನು ಭ್ರಷ್ಟ ವ್ಯವಸ್ಥೆಯ ಕೈಗೆ ಕೊಟ್ಟು ಬದುಕನ್ನು ನಾಶ ಮಾಡಿಕೊಳ್ಳಬೇಡಿ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ನಾರಾಯಣಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಗೋವಿಂದರಾಜು, ನೆಲಮಂಗಲ ತಾಲೂಕು ಅಧ್ಯಕ್ಷ ನಾರಾಯಣಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರೈತರು ನಡೆಸುವ ಹೋರಾಟ ಆಕ್ರೋಶದ ಕಿಚ್ಚಲ್ಲ, ಸ್ವಾಭಿಮಾನದ ಕಿಚ್ಚು



