ರಾಮನಗರ: ಬಿಡದಿ ಟೌನ್ಶಿಪ್ ಯೋಜನೆಗೆ ಭೂಸ್ವಾಧೀನ ಸಂಬಂಧ ಮಂಡಲಹಳ್ಳಿ ಗ್ರಾಮದಲ್ಲಿ ಜಂಟಿ ಅಳತೆ (ಜೆಎಂಸಿ) ಮತ್ತು ಸರ್ವೇ ಕಾರ್ಯಕ್ಕೆ ಬಂದಿದ್ದ ಜಿಬಿಡಿಎ ಅಧಿಕಾರಿಗಳ ಮೇಲೆ ರೈತ ಮಹಿಳೆಯರು ಪೊರಕೆಯಿಂದ ಹಲ್ಲೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡಲಹಳ್ಳಿ ಗ್ರಾಮದಲ್ಲಿ ರೈತರು ಮತ್ತು ರೈತ ಮಹಿಳೆಯರು ಅಧಿಕಾರಿಗಳಿಗೆ ಹಾಗೂ ಅವರ ವಾಹನಗಳಿಗೆ ಪೊರಕೆಯಿಂದ ಹೊಡೆದು, ಇಟ್ಟಿಗೆ ಹಾಗೂ ಕಲ್ಲು ತೂರಾಟ ನಡೆಸಿದ ಪರಿಣಾಮ ಎರಡು ಕಾರುಗಳು ಜಖಂಗೊಂಡಿದ್ದು, ಗಾಜುಗಳು ಪುಡಿಪುಡಿಯಾಗಿವೆ.ಜೆಎಂಸಿ ಸರ್ವೇ ನಡೆಸದಂತೆ ಮಂಡಲಹಳ್ಳಿ ಗ್ರಾಮದ ರೈತರು ಎಚ್ಚರಿಕೆ ನೀಡಿದ್ದರು. ಎಚ್ಚರಿಕೆ ಹೊರತಾಗಿಯೂ ಸರ್ವೇ ನಡೆಸಲು ಮುಂದಾದ ಅಧಿಕಾರಿಗಳಿಗೆ ರೈತ ಮಹಿಳೆಯರು ಪೊರಕೆ ಏಟು ಕೊಟ್ಟಿದ್ದಾರೆ. ಸರ್ವೆಗೆ ಬಂದ ಅಧಿಕಾರಿಗಳ ಕಾರನ್ನು ಸುತ್ತುವರಿದು, ಪೊರಕೆ, ಕಲ್ಲುಗಳಿಂದ ಥಳಿಸಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಪೊಲೀಸರು ಇದ್ದರೂ ರೈತರ ಆಕ್ರೋಶ ತಡೆಯಲು ಸಾಧ್ಯವಾಗಲಿಲ್ಲ. ಜಮೀನುಗಳಲ್ಲಿ ನಿಂತು ಸರ್ವೆ ಮಾಡುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ರೈತರು ಅಟ್ಟಾಡಿಸಿದರಲ್ಲದೆ, ಅವರನ್ನು ಹಿಡಿದು ಎಳೆದಾಡಿದರು. ರೈತ ಮಹಿಳೆಯರು ಅಧಿಕಾರಿಗಳ ಮೇಲೆ ಪೊರಕೆಯಿಂದ ಹಲ್ಲೆ ನಡೆಸಿದರೆ, ಉದ್ರಿಕ್ತ ಗುಂಪು ಕಲ್ಲು ತೂರಿತು.ಅಧಿಕಾರಿಗಳ ರಕ್ಷಣೆಗೆ ನಿಂತ ಪೊಲೀಸರ ವಿರುದ್ಧ ರೈತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾಕಾರರು ಅಧಿಕಾರಿಗಳು ಸ್ಥಳವನ್ನು ತಕ್ಷಣ ತೊರೆಯಬೇಕು ಎಂದು ಒತ್ತಾಯಿಸಿದರು. ಕೆಲ ಮಹಿಳೆಯರು ಪೊರಕೆ ಹಿಡಿದು ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಮ್ಮನ್ನು ಬೇಕಾದರೆ ಬಂಧಿಸಿ, ಸಾಯಿಸಿ. ಆದರೆ ಬಿಡದಿ ಟೌನ್ಶಿಪ್ ಯೋಜನೆಗೆ ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ರೈತರು ತಮ್ಮ ಆಕ್ರೋಶವನ್ನು ಹೊರಹಾಕಿದರು.ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಬೇಡಿ, ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ರೆ ನಾವು ಸುಮ್ಮನೆ ನೋಡ್ತಾ ಕೂರಲ್ಲ. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬೇಡಿ ಎಂದು ರೈತರಿಗೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದರು. ಇದರ ಹೊರತಾಗಿಯೂ ರೈತರು ಪ್ರತಿಭಟನೆ ಮುಂದುವರೆಸಿದರು.ಮಂಡಲಹಳ್ಳಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಹಾಗೂ ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರೆಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.



