ಬೆಂಗಳೂರು/ರಾಮನಗರ: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಬಿದ್ದು 7 ಕೂಲಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣ ಗ್ರಾಮದ ಬಳಿ ನಡೆದಿದೆ. ಮುಂಜಾನೆ 5 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.ಬಂಡೆಕೊರೆಯುವ ಕೆಲಸದ ವೇಳೆ ನಡೆದ ದುರ್ಘಟನೆಯಲ್ಲಿ ಸಾವನ್ನಪ್ಪಿರುವವರು ಬಿಹಾರ ಮೂಲದ ಕೂಲಿಕಾರ್ಮಿಕರು ಎನ್ನಲಾಗಿದೆ. ಈ ಪೈಕಿ ರಾಜ್ಯದ ಇಬ್ಬರು ಕಾರ್ಮಿಕರು ಸಹ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಐದಾರು ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆರ್ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಕುಸಿದುಬಿದ್ದ ಬಂಡೆ ಜಾಗದಲ್ಲಿ ನಡೆಯುತ್ತಿದ್ದ ಕಾಮಗಾರಿ ಕಾವೇರಿ ಕ್ರಷರ್ನವರಿಂದ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಅಧಿಕೃತವಾಗಿಯೇ ಕಾಮಗಾರಿ ನಡೆಯುತ್ತಿತ್ತು ಎಂದು ತಿಳಿದುಬಂದಿದೆ ಎಂದು ಸ್ಥಳಕ್ಕೆ ಹೋಗುವುದಾಗಿ ಹೇಳಿರುವ ಶಾಸಕ ಎಸ್ಟಿ ಸೋಮಶೇಖರ್ ಈ ಭಾಗದಲ್ಲಿ ಸಾಕಷ್ಟು ಅಕ್ರಮವಾಗಿ ಕಲ್ಲು ಸ್ಫೋಟಿಸುವ ಕಾಮಗಾರಿಗಳು ನಡೆಯುತ್ತವೆ ಎಂದು ಆರೋಪಿಸಿದ್ದಾರೆ. ಈ ಹಿಂದೆ ತಾವು ಈ ಜಾಗದಲ್ಲಿ ಅಕ್ರಮವಾಗಿ ಬಂಡೆ ಸ್ಪೋಟಿಸುವ ಕೆಲಸ ಮಾಡದಂತೆ ಕ್ವಾರಿ ಮಾಲೀಕರ ಸಭೆಯಲ್ಲಿ ತಿಳಿಸಿದ್ದೆ ಎಂದು ಹೇಳಿರುವ ಅವರುಈ ಬಗ್ಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡುವುದಾಗಿ ಹೇಳಿದ್ದಾರೆ. ಮೃತಪಟ್ಟಿರುವ ಕಾರ್ಮಿಕರ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಲು ಒತ್ತಾಯಿಸುವುದಾಗಿ ತಿಳಿಸಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಘಟನೆ ಬಗ್ಗೆ ಮಾಹಿತಿ ಪಡೆದು ತಮ್ಮ ಇಲಾಖೆ ಪಾತ್ರವಿದ್ದರೆ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಎಕ್ಸ್ ಮೂಲಕ ಪ್ರತಿಕ್ರಿಯಿಸಿ ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸಿ ಘಟನೆಯ ಬಗ್ಗೆ ಸಮಗ್ರ ವರದಿ ತರಿಸಿಕೊಂಡು ಪರಿಶೀಲನೆ ನಡೆಸುತ್ತೇನೆ ಎಂದಿದ್ದಾರೆ.ಘಟನೆ ಉತ್ತರ ಕ್ಷೇತ್ರದ ವ್ಯಾಪ್ತಿಯಲ್ಲಿ ಆಗಿರುವುದರಿಂದ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯ ವಿಚಾರಿಸಲು ಆ ಭಾಗದ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ತೆರಳಿದ್ದಾರೆ. ಸುಮಾರು 40 ಅಡಿ ಮೇಲಿಂದ ಬಂಡೆ ಬಿದ್ದ ಪರಿಣಾಮ ದೊಡ್ಡ ಪ್ರಮಾಣ ಸಾವುನೋವು ಉಂಟಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ದುರಂತ ಸ್ಥಳದಲ್ಲಿ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಕಾವೇರಿ ಕ್ರಷರ್ನಲ್ಲಿ ಘಟನೆ ನಡೆದಿದ್ದು, ಈ ವೇಳೆ 10-15 ಜನ ಬಿಹಾರದವರು, 2-3 ಸ್ಥಳೀಯರು ಕೆಲಸ ಮಾಡುತ್ತಿದ್ದರು. ಹಿಟಾಚಿಯಿಂದ ಕೆಲಸ ಮಾಡುತ್ತಿದ್ದಾಗ ದುರಂತ ಸಂಭವಿಸಿದೆ ಎನ್ನಲಾಗಿದ್ದು, ಘಟನೆಯಲ್ಲಿ 5 ಜನ ಕೂಲಿ ಕಾರ್ಮಿಕರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆರ್.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಏಕಾಏಕು ಬಂಡೆ ಬಿದ್ದಿದೆ. ತಾನು ಕೆಲಸ ಮಾಡುತ್ತಿದ್ದ ಸ್ಥಳದಿಂದ ಕೇವಲ 10 ಅಡಿ ದೂರದಲ್ಲಿ ಘಟನೆ ನಡೆದಿದೆ ಎಂದು ಮಾದಪಟ್ಟಣ ಗ್ರಾಮದ ಬಳಿ ಮಾಧ್ಯಮವೊಂದಕ್ಕೆ ಹಿಟಾಚಿ ಆಪರೇಟರ್ ತಿಳಿಸಿದ್ದಾರೆ.ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರಯವ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ, ಅನುಮತಿ ಪಡೆದೇ ಬಂಡೆ ಸ್ಫೋಟಿಸಿದ್ದಾರೆ. ಆದರೆ ಹೇಗೆ ದುರಂತ ಸಂಭವಿಸಿತು ಎಂದು ಕಾರಣ ಗೊತ್ತಿಲ್ಲ. ಸ್ಥಳ ಪರಿಶೀಲನೆ ಬಳಿಕ ಅವಘಡಕ್ಕೆ ಕಾರಣ ಗೊತ್ತಾಗಲಿದೆ ಎಂದವರು ತಿಳಿಸಿದ್ದಾರೆ. ಮತ್ತೊಂದೆಡೆ ದುರಂತ ಸ್ಥಳದಲ್ಲಿ ಮೃತಪಟ್ಟವರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಹೊಟ್ಟೆಪಾಡಿಗಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ಬಂದಿದ್ದೇವೆ. ಕಳೆದ ಒಂದು ವರ್ಷದಿಂದ ಇಲ್ಲಿಗೆ ಬಂದು ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ ಎಂದು ಅಲವತ್ತುಕೊಂಡಿದ್ದಾರೆ.
ಘೋರ ದುರಂತ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಮಂದಿ ದಾರುಣ ಸಾವು



