ಲಹರಿ ಫಿಲಂಸ್ ನಿರ್ಮಾಣದ, ದೇವನೂರು ಚಂದ್ರು ರಚನೆ – ನಿರ್ದೇಶನದ ಹಾಗೂ ವಿನಯ್ ರಾಜಕುಮಾರ್ – ಮೇಘ ಶೆಟ್ಟಿ ನಾಯಕ – ನಾಯಕಿಯಾಗಿ ಅಭಿನಯಿಸಿರುವ “ಗ್ರಾಮಾಯಣ” ಚಿತ್ರದ ಟ್ರೇಲರ್ ಬಿಡುಗಡೆ ಹಾಗೂ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ದುನಿಯಾ ವಿಜಯ್ ಹಾಗೂ ನಟಿ ಅಪರ್ಣ ಅವರ ಪತಿ ನಾಗರಾಜ್ ವಸ್ತಾರೆ ಅವರಿಂದ “ಗ್ರಾಮಾಯಣ”ದ ಟ್ರೇಲರ್ ಅನಾವರಣವಾಯಿತು. ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ಸಂಗೀತ ನಿರ್ದೇಶಕ ಹಂಸಲೇಖ, ಯವ ರಾಜಕುಮಾರ್, ನಟ ನವೀನ್ ಶಂಕರ್, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ, ” ಗ್ರಾಮಾಯಣ”ಕ್ಕೆ ಶುಭ ಕೋರಿದರು. ನನಗೆ ವಿನಯ್ ರಾಜಕುಮಾರ್ ಎಂದರೆ ಬಹಳ ಇಷ್ಟ ಎಂದು ಟ್ರೇಲರ್ ಬಿಡುಗಡೆ ಮಾತನಾಡಿದ ನಟ ದುನಿಯಾ ವಿಜಯ್, ಟ್ರೇಲರ್ ಅದ್ಭುತವಾಗಿದೆ. ದೇವ ನೂರು ಚಂದ್ರು ಉತ್ತಮ ನಿರ್ದೇಶಕ. ನಾನು ಅವರನ್ನು ಎರಡನೇ ಸೂರಿ ಅಂತಲೇ ಕರೆಯುತ್ತೇನೆ. ಈ ಚಿತ್ರವನ್ನು ನಿರ್ಮಾಣ ಮಾಡಿರುವ ಲಹರಿ ಸಂಸ್ಥೆಗೆ ಹಾಗೂ ಇಡೀ “ಗ್ರಾಮಾಯಣ” ತಂಡಕ್ಕೆ ಒಳ್ಳೆಯದಾಗಲಿ ಎಂದರು.ಅಪರ್ಣ, “ಗ್ರಾಮಾಯಣ” ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಬಂದ ಮೇಲೆ ಅಲ್ಲಿನ ವಿಷಯಗಳನ್ನು ನನ್ನ ಬಳಿ ಹಂಚಿಕೊಳ್ಳುತ್ತಿದ್ದರು. ಇಂದು ಅವರಿಲ್ಲದೆ ಅವರ ಅಭಿನಯದ ಚಿತ್ರದ ಟ್ರೇಲರ್ ಅನಾವರಣ ಮಾಡಿದ್ದು, ಬಹಳ ಬೇಸರವಾಗಿದೆ. “ಗ್ರಾಮಾಯಣ” ಯಶಸ್ವಿಯಾಗಲಿ ಎಂದು ನಟಿ ಅಪರ್ಣ ಪತಿ ನಾಗರಾಜ್ ವಸ್ತಾರೆ ಹೇಳಿದರು. ಈ ಚಿತ್ರದ ಬಗ್ಗೆ ನಾವು ಹೇಳುದಕ್ಕಿಂತ ಅಭಿಮಾನಿಗಳು ಹೇಳಬೇಕು. ಜುಲೈ 3 ಚಿತ್ರ ತೆರೆಗೆ ಬರುತ್ತಿದೆ. ಎಲ್ಲರೂ ನೋಡಿ. ಪ್ರೋತ್ಸಾಹ ನೀಡಿ ಎಂದರು ನಟ ರಾಘವೇಂದ್ರ ರಾಜಕುಮಾರ್. ಅಣ್ಣನ ಚಿತ್ರ ಯಶಸ್ವಿಯಾಗಲೆಂದು ಯುವ ರಾಜಕುಮಾರ್ ಹಾರೈಸಿದರು. ನಿರ್ದೇಶಕ ಸಿಂಪಲ್ ಸುನಿ ಚಿತ್ರದ ಮೊದಲ ಪ್ರದರ್ಶನಕ್ಕೆ ಒಂದು ಆಡಿಯನ್ನೇ ಬುಕ್ ಮಾಡುವುದಾಗಿ ಹೇಳಿದರು. ನಟ ನವೀನ್ ಶಂಕರ್ ಕೂಡ “ಗ್ರಾಮಾಯಣ”ಕ್ಕೆ ಶುಭ ಕೋರಿದರು. ಲಹರಿ ಸಂಸ್ಥೆಯ ಸ್ಥಾಪಕ ಮನೋಹರ್ ನಾಯ್ಡು ಹಾಗೂ ಅವರ ಸಹೋದರ ರಮೇಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಚಿತ್ರದ ಬಗ್ಗೆ ನಾನು ಹೇಳುವುದೇನು ಇಲ್ಲ. ಒಂದಂತೂ ಹೇಳುತ್ತೇನೆ. ಕೊಟ್ಟ ದುಡ್ಡಿಗೆ ಮೋಸವಾಗದ ಚಿತ್ರವಿದು. ಒಂದೊಳ್ಳೆ ಚಿತ್ರ ಮೂಡಿಬರಲು ಸಹಕಾರ ನೀಡಿದ ನಿರ್ಮಾಪಕರಿಗೆ, ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಧನ್ಯವಾದ ಎಂದು ಹೇಳಿದ ನಿರ್ದೇಶಕ ದೇವನೂರು ಚಂದ್ರು ತುಂಬಾ ಭಾವುಕರಾದರು.ನಟಿ ಮೇಘ ಶೆಟ್ಟಿ ಕೂಡ ಎಲ್ಲರಿಗೂ ಧನ್ಯವಾದ ತಿಳಿಸಿದರು. ನಟ ಅರುಣ್ ಸಾಗರ್, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಹಾಗೂ ಗೀತರಚನೆಕಾರ ಪ್ರಮೋದ್ ಮರವಂತೆ ಮುಂತಾದವರು “ಗ್ರಾಮಾಯಣ” ಚಿತ್ರದ ಕುರಿತು ಮಾತನಾಡಿದರು. ವಿನಯ್ ರಾಜಕುಮಾರ್, ಮೇಘ ಶೆಟ್ಟಿ, ಲೂಸ್ ಮಾದ ಯೋಗೀಶ್, ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ಅಪರ್ಣ ವಸ್ತಾರೆ, ಸೀತಾ ಕೋಟೆ, ಪ್ರಶಾಂತ್ ಹೊನ್ನಾಳಿ, ಅವಿನಾಶ್ ರೈ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.



