ಬೆಂಗಳೂರು; ವಿಧಾನಸಭೆ ಚುನಾವಣೆ ಬರಲು ಸನಿಹದಲ್ಲಿರುವುದರಿಂದ ಪಕ್ಷದ ಎಲ್ಲರೂ ಒಗ್ಗೂಡಿ ಸೌಹಾರ್ದತೆಯಿಂದ ಪರಸ್ಪರ ಕಾರ್ಯನಿರ್ವಹಿಸಿ ಪಕ್ಷ ಸಂಘಟನೆ ನಡೆಸಲು ಮುಂದಾಗಿ ಎಂದು ಸಂಘ ಪರಿವಾರದ ಪ್ರಮುಖರು ರಾಜ್ಯ ಬಿಜೆಪಿ ನಾಯಕರಿಗೆ ಸಲಹೆ ಮಾಡಿದ್ದಾರೆ. ನಿನ್ನೆ ನಡೆದ ರಾಜ್ಯ ಬಿಜೆಪಿ ಮುಖಂಡರು ಹಾಗೂ ಸಂಘ ಪಾರಿವಾರದ ಪ್ರಮುಖರ ಸಮನ್ವಯ ಸಭೆಯಲ್ಲಿ ಎಲ್ಲರೂ ಒಗ್ಗೂಡಿ ಪಕ್ಷದ ವತಿಯಿಂದ 150 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚನೆ ಮಾಡಲು ಒಂದಾಗಬೇಕು ಎಂದು ಕಿವಿ ಮಾತು ಹೇಳಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಪಕ್ಷದ ಕೆಲ ನಾಯಕರು ಪರಸ್ಪರ ಕಚ್ಚಾಟದಲ್ಲಿ ತೊಡಗಿರುವುದರಿಂದ ಪಕ್ಷಕ್ಕೆ ಸಾಕಷ್ಟು ಹಿನ್ನಡೆಯಾಗುತ್ತಿದೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು. ಯಾರೂ ಕೂಡ ಬಹಿರಂಗವಾಗಿ ತಮ್ಮ ತಮ್ಮಲ್ಲಿರುವ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಾರದು. ಬಹಿರಂಗ ಹೇಳಿಕೆಗಳನ್ನು ನಿಲ್ಲಿಸುವುದು ಸೂಕ್ತವಾಗಿದೆ. ಯಾರೇ ಆಗಲಿ ಬಹಿರಂಗ ಹೇಳಿಕೆಗಳನ್ನು ನೀಡುವುದು ಪಕ್ಷದ ಬೆಳವಣಿಗೆಗೆ ಸಾಕಷ್ಟು ಹಿನ್ನಡೆ ಉಂಟುಮಾಡಲಿದೆ. ಹಾಗಾಗಿ ಎಲ್ಲರೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ವಿನಾಕಾರಣ ಕಾಂಗ್ರೆಸ್ ವಿರುದ್ಧ ಮಾತನಾಡುವ ಸಂದರ್ಭದಲ್ಲಿ ಜಾಗೃತಿ ವಹಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಘ ಪರಿವಾರದ ಬಗ್ಗೆ ನೀಡುತ್ತಿರುವ ಹೇಳಿಕೆಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಈ ವಿಷಯದಲ್ಲಿ ಯಾರೂ ಕೂಡ ಮಾತನಾಡದೆ ಸುಮ್ಮನಿರಿ, ನಾವು ಅದನ್ನು ನ್ಯಾಯಾಲಯ ಅಥವಾ ಮತ್ತೊಂದು ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಈ ಬಗ್ಗೆ ಯಾರೂ ಏನು ಮಾತನಾಡಬೇಡಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.



