ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದ ಕ್ರಷರ್ ಕ್ವಾರಿಯಲ್ಲಿ ಬಂಡೆ ಕುಸಿದು ಏಳು ಮಂದಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಅತ್ಯಂತ ಆಘಾತಕಾರಿ ಮತ್ತು ನೋವಿನ ಸಂಗತಿಯಾಗಿದೆ ಎಂದು ವಿಧಾನಪರಿಷತ್ನ ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ. ಈ ಸಂಬಂಧ ಎಕ್ಸ್ನಲ್ಲಿ ಸಂತಾಪ ಸೂಚಿಸಿರುವ ಅವರು, ಮೃತರಾದ ಕಾರ್ಮಿಕರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಭಗವಂತನು ಅಗಲಿದ ಆತ್ಮಗಳಿಗೆ ಚಿರಶಾಂತಿ ನೀಡಲಿ, ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಹಾಗೂ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.ಈ ದುರಂತವು ಕ್ವಾರಿಗಳಲ್ಲಿ ಸುರಕ್ಷತಾ ನಿಯಮಗಳ ಅನುಷ್ಠಾನ ಹಾಗೂ ಸರ್ಕಾರದ ಮೇಲ್ವಿಚಾರಣೆಯ ವೈಫಲ್ಯವನ್ನು ಪ್ರಶ್ನಿಸುವಂತಿದೆ. ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯ, ಸುರಕ್ಷತಾ ನಿಯಮಗಳ ಉಲ್ಲಂಘನೆ ಅಥವಾ ಅಧಿಕಾರಿಗಳ ಲೋಪದಿಂದ ಈ ಅನಾಹುತ ಸಂಭವಿಸಿದ್ದರೆ, ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮೃತರ ಕುಟುಂಬಗಳಿಗೆ ಸರ್ಕಾರ ತಕ್ಷಣವೇ ಸಮರ್ಪಕ ಪರಿಹಾರ ಘೋಷಿಸಬೇಕು, ಗಾಯಾಳುಗಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು ಹಾಗೂ ರಾಜ್ಯದ ಎಲ್ಲಾ ಕ್ವಾರಿಗಳಲ್ಲಿ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಇಂತಹ ದುರಂತಗಳು ಮತ್ತೆ ಮರುಕಳಿಸದಂತೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು. ಕಾರ್ಮಿಕರ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಇರಬಾರದು ಎಂದಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆರ್.ಅಶೋಕ್ ಒತ್ತಾಯ



