ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ನಟ ದರ್ಶನ್ ಅವರ ಮೂವರು ಅಭಿಮಾನಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.ಪ್ರಕರಣದ ಪ್ರಮುಖ ಸಾಕ್ಷಿದಾರ ಸಂದೀಪ್ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ದರ್ಶನ್ ಅಭಿಮಾನಿಗಳಾದ ಪುನೀತ್, ವೇಣು ಮತ್ತು ಸುಹಾಸ್ ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿದಾರ ಸಂದೀಪ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಕಾರ್ಯಪ್ರವೃತ್ತರಾದ ಪೊಲೀಸರು, ಸಂದೀಪ್ ಅವರಿಗೆ ಸಾಕ್ಷಿ ನುಡಿಯದಂತೆ ಬೆದರಿಕೆ ಹಾಕಿದ್ದ ಪುನೀತ್, ವೇಣು, ಸುಹಾಸ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಪುನೀತ್ ಎನ್ನುವವನು ಸಾಮಾಜಿಕ ಜಾಲತಾಣದಲ್ಲಿ ಡಿ-ಕಂಪನಿ ಎನ್ನುವ ಖಾತೆಯನ್ನು ಹ್ಯಾಂಡಲ್ ಮಾಡುತ್ತಿದ್ದನು. ಉಳಿದಂತೆ ಸುಹಾಸ್ ಮತ್ತು ವೇಣು ಎನ್ನುವ ಇಬ್ಬರು ತುಮಕೂರಿನ ದರ್ಶನ್ ಅಭಿಮಾನಿಗಳ ಸಂಘದ ಪ್ರಮುಖರಾಗಿದ್ದಾರೆ.ನ್ಯಾಯಯುತ ತನಿಖೆಗೆ ಅಡ್ಡಿಪಡಿಸುವ ಪ್ರಯತ್ನ ಇದಾಗಿದೆ ಎಂದು ಹೇಳಲಾಗಿದೆ. ಈ ಬಂಧನವು ಪ್ರಕರಣದ ತನಿಖೆಗೆ ಹೊಸ ಆಯಾಮವನ್ನು ತಂದಿದ್ದು,ಅಭಿಮಾನಿಗಳ ಈ ಕೃತ್ಯವು ಈಗಾಗಲೇ ಸಂಕಷ್ಟದಲ್ಲಿರುವ ದರ್ಶನ್ಗೆ ಮತ್ತಷ್ಟು ಕಾನೂನು ತೊಡಕುಗಳನ್ನು ಸೃಷ್ಟಿಸಿದೆ.



