ಕೋಲಾರ :`ನಿಮಗೆ ನೀವೇ ಗಾಡ್ಫಾದರ್’, ಶ್ರಮವೂ ನಿಮ್ಮದೇ ಫಲವೂ ನಿಮ್ಮದೇ ಆಗಿರುವುದರಿಂದ ಸ್ವಾರ್ಥಿಗಳಾಗದಿರಿ, ಆತ್ಮಸಾಕ್ಷಿಗೆ ವಿರುದ್ದವಾಗಿ ನಡೆದುಕೊಳ್ಳದೇ ಗುರಿ ಸಾಧನೆಗೆ ಮುನ್ನುಗ್ಗಿ ಗೆಲುವು ನಿಮ್ಮದಾಗುತ್ತದೆ ಎಂದು ಡಿಐಜಿಪಿ ಡಿ.ದೇವರಾಜ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶಾಲಾ ಮಕ್ಕಳಿಗೆ ಬೈಸಿಕಲ್ ಕೊಡುಗೆಯಾಗಿ ವಿತರಿಸಿ ಅವರು ಮಾತನಾಡಿ, ನಾನೂ ಸರ್ಕಾರಿ ಶಾಲೆಯಲ್ಲಿ ಓದಿದ್ದೇನೆ ಎಂಬ ಹೆಮ್ಮೆ ನನಗಿದೆ ಎಂದು ತಿಳಿಸಿದರು.ಪಾಪಪ್ರಜ್ಞೆ ಕಾಡುವಂತಹ ಕೆಲಸಗಳನ್ನು ಮಾಡದಿರಿ ಎಂದು ಹೇಳಿದ ಅವರು, ಬದುಕಿನಲ್ಲಿ ಏನಾದರೂ ಗುರುತು ಬಿಟ್ಟುಹೋಗುವಂತೆ ಕೆಲಸ ಮಾಡಬೇಕು, ಸ್ವಾರ್ಥ ಸಮಾಜದಲ್ಲಿ ನಿಮ್ಮ ಹಾದಿಗೆ ಅಡ್ಡಿಗಳುಂಟು, ತಾತ್ಸಾರದಿಂದ ಕಾಣುವವರುಂಟು, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮುಂದಿನ ಹೆಜ್ಜೆ ಇಡುತ್ತಾ ಸಾಗಬೇಕು. ನಿಮ್ಮದೇ ನಿರ್ಧಾರ, ನಿಮ್ಮದೇ ಶ್ರಮದಿಂದ ಗೆಲುವು ಸಾಧಿಸುವತ್ತ ಗುರಿಯಿರಲಿ, ಯಾವುದೇ ವಿಷಯವನ್ನು ಉದಾಸೀನದಿಂದ ಕಾಣಬಾರದು ಎಂದ ಅವರು, ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವರು ಸಾಧಕರಾಗುವುದಿಲ್ಲ, ಸಮಾಜದಲ್ಲಿ ಅತಿಹೆಚ್ಚಿನವರು ಕಷ್ಟದಿಂದ ಮೇಲೆ ಬಂದವರು ಎಂದರು.ವಾಸ್ತವಿಕತೆಯಡಿ ಬದುಕುವುದನ್ನು ಕಲಿಯಿರಿ,ಸತ್ಯ ಕಹಿಯಾದರೂ ಮರೆಮಾಚಲು ಸಾಧ್ಯವಿಲ್ಲ, ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಭಾಷೆಯ ಮೇಲೆ ಹಿಡಿತ ಇರುತ್ತದೆ, ನಿರರ್ಗಳವಾಗಿ ಮಾತನಾಡುವ ಶಕ್ತಿ ಇರುತ್ತದೆ .ಜೀವನದಲ್ಲಿ ಮೇಷ್ಟು ಆಗಬೇಕು ಎಂಬ ಕನಸಿತ್ತು, ಅದರಂತೆ ಪ್ರಾಣಿಶಾಸ್ತ್ರ ವಿಷಯದ ಉಪನ್ಯಾಸಕನಾದೆ, ಗ್ರಾಮದೊಳೆಕ್ಕೆ ಅರಣ್ಯ ಇಲಾಖೆ ಅಧಿಕಾರಿ ಜೀಪಿನಲ್ಲಿ ಬಂದಾಗ ಸರ್ಕಾರದಿಂದ ಇಷ್ಟೆಲ್ಲ ಸೌಲಭ್ಯ ಸಿಗುವಾಗ ನಾನು ಏಕೆ ಓದಬಾರದು,ಸಾಧನೆ ಮಾಡಬಾರದು ಅನಿಸಿತು ಪರಿಶ್ರಮದಿಂದ ಸಾಧನೆ ಮಾಡಿದೆ ಎಂದು ತಮ್ಮ ಜೀವನದ ಹಾದಿಯನ್ನು ಮಕ್ಕಳಿಗೆ ಬಿಡಿಸಿಟ್ಟರು.
ಇಷ್ಟವಿಲ್ಲದ ಕೆಲಸವನ್ನು ಒತ್ತಡಕ್ಕೆ ಮಣಿದೂ ಮಾಡಲಿಕ್ಕೆ ಹೋಗದಿರಿ, ಆ ಕೆಲಸದಲ್ಲಿನ ಕೆಟ್ಟ ಪರಿಣಾಮವಿರುತ್ತದೆ, ಅರಿವು ಮಾಡಿಸಿದ ಗುರುವಿಗೆ ಗೌರವ ನೀಡಿದಾಗ ಗುರುಬಲವೂ ಸಿಗುತ್ತದೆ ಎಂದ ಅವರು, ನಿಮ್ಮಿಂದ ಏನನ್ನೂ ಬಯಸುತ್ತಿಲ್ಲ, ಸಹಾಯ ಪಡೆದವರು ಮುಂದೆ ಸಾಧಕರಾದಾಗ ಮತ್ತಷ್ಟು ಬಡವರಿಗೆ ನೆರವಾಗುವ ಮನಸ್ಸು ಹೊಂದಿದ್ದರೆ ಸಾಕು ಎಂದು ತಿಳಿಸಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಡಿಐಜಿಪಿ ದೇವರಾಜ್ ಅವರು ಸ್ವಂತ ತಾಲ್ಲೂಕಿನ ಅಭಿವೃದ್ದಿಗಾಗಿ ಕನಸುಗಳ ಪಟ್ಟಿಯನ್ನೇ ಹೊಂದಿದ್ದಾರೆ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.ತಮ್ಮ ಹೆತ್ತವರ ಹೆಸರಿನಲ್ಲಿ ಡಿಎಂಆರ್ ಫೌಂಡೇಷನ್ ಸ್ಥಾಪಿಸಿ ಅದರ ಮೂಲಕ ಐಎಎಸ್,ಐಪಿಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಲಾರದಲ್ಲಿ ಉಚಿತ ತರಬೇತಿ ನೀಡುತ್ತಿದ್ದಾರೆ, ಮೊದಲು ಈ ತರಬೇತಿಗೆ ದೆಹಲಿಗೆ ಹೋಗಬೇಕಾಗಿತ್ತು, ಇಂದು ಇಲ್ಲೇ ಸಿಗುತ್ತಿದೆ, ಅವರ ಸೇವಾ ಕಾರ್ಯಗಳು ಶ್ಲಾಘನೀಯವಾಗಿದೆ ಎಂದು ಅಭಿನಂದಿಸಿದರು.ಮುಖಂಡ ವಕ್ಕಲೇರಿ ರಾಜಪ್ಪ ಮಾತನಾಡಿ, ಉಳ್ಳವರಿಗೆಲ್ಲಾ ದಾನ ನೀಡುವ ಮನಸ್ಸು ಇರುವುದಿಲ್ಲ, ಅಷ್ಟು ಮಾಡಿದರೆ ಇನ್ನಷ್ಟು ಆಸ್ತಿ ಮಾಡುವ ಆಸೆ ಇರುತ್ತದೆ ಆದರೆ ಡಿಐಜಿಪಿ ದೇವರಾಜ್ ಅವರು, ಸಾವಿರಾರು ಬಡ ಮಕ್ಕಳಿಗೆ ಆಸರೆಯಾಗಿ ಕೆಲಸ ಮಾಡುತ್ತಿದ್ದಾರೆ.ಬೈಸಿಕಲ್ ವಿತರಣೆ ಯಾರೋ ಮಾಡಬಹುದಾಗಿತ್ತು ಆದರೆ, ಅವರೇ ಇಲ್ಲಿಗೆ ಬಂದಿರೋದು ನಿಮಗೆ ಪ್ರೇರಣೆಯ ನುಡಿಗಳಿಂದ ಮಾರ್ಗದರ್ಶನ ನೀಡಲು ಗುರಿ ಸಾಧನೆಯ ಹಾದಿಯ ಕುರಿತು ತಿಳಿಸಲು ಎಂದು ತಿಳಿಸಿ, ಅವರು ನೀಡಿರುವ ನೆರವನ್ನು ಸದುಪಯೋಗ ಮಾಡಿಕೊಳ್ಳಿ, ನೀವು ಸಾಧಕರಾಗಿ ಹೊರಹೊಮ್ಮಿ ಮತ್ತಷ್ಟು ಬಡವರಿಗೆ ನೆರವಾದರೆ ಅದೇ ಸಾರ್ಥಕತೆ ಎಂದರು.ಮುಖ್ಯಶಿಕ್ಷಕಿ ತಾಹೇರಾನುಸ್ರತ್ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳಿಗೆ ಇಷ್ಟೊಂದು ಪ್ರಮಾಣದಲ್ಲಿ ನೆರವು ಹರಿಸಿದ್ದು, ಇದರಿಂದ ಶಾಲೆಯ ದಾಖಲಾತಿ ಮತ್ತಷ್ಟು ಉತ್ತಮಗೊಳ್ಳಲು ಕಾರಣವಾಗಿದೆ ಎಂದು ತಿಳಿಸಿ ಡಿಐಜಿಪಿ ದೇವರಾಜ್ ಅವರಿಗೆ ಧನ್ಯವಾದ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಗ್ರಾ.ಪಂ ಮಾಜಿ ಸದಸ್ಯ ಎ.ಶ್ರೀಧರ್, ಮಾಜಿ ಸದಸ್ಯ ಹಾಗೂ ಎಸ್ಎಫ್ಸಿಎಸ್ ಅಧ್ಯಕ್ಷ ಎ.ಎಸ್.ನಂಜುಂಡೇಗೌಡ, ಎಸ್ಡಿಎಂಸಿ ಅಧ್ಯಕ್ಷ ರಾಘವೇಂದ್ರ, ಉಪಾಧ್ಯಕ್ಷ ವೆಂಕಟೇಶಪ್ಪ, ಸದಸ್ಯ ಎ.ಮಹೇಂದ್ರ,ಪತಿ, ಮಧು ಉಪಸ್ಥಿತರಿದ್ದರು.
ಪಾಪಪ್ರಜ್ಞೆ ಕಾಡುವಂತಹ ಕೆಲಸಗಳನ್ನು ಮಾಡದಿರಿ ಅರಾಭಿಕೊತ್ತನೂರು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಿ ಮಾತನಾಡಿದ ಡಿಐಜಿಪಿ ಡಿ.ದೇವರಾಜ್



