ಬೇಲೂರು: ಗ್ರಾಮೀಣ ಭಾಗದ ಶಾಲಾ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ರೋಟರಿ ಜಿಲ್ಲೆ 3182ರ ಬೇಲೂರು ರೋಟರಿ ಸಂಸ್ಥೆಯ ವತಿಯಿಂದ ಅತ್ಯಾಧುನಿಕ ತಂತ್ರಜ್ಞಾನದ ಬಿಸಿ ಮತ್ತು ತಣ್ಣೀರಿನ ಕುಡಿಯುವ ನೀರಿನ ಹೈಟೆಕ್ ವಾಟರ್ ಫಿಲ್ಟರ್ ವ್ಯವಸ್ಥೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕೊಡುಗೆಯಾಗಿ ನೀಡಲಾಗಿದೆ ಎಂದು ರೋಟರಿ ಜಿಲ್ಲಾ ನಾಯಕರು ಪಿಎಚ್ಎಷ್ ಡಿ.ಎಸ್. ರವಿ ಹೇಳಿದರು.ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೈಟೆಕ್ ವಾಟರ್ ಫಿಲ್ಟರ್ ಉದ್ಘಾಟಿಸಿ ಮಾತನಾಡಿದ ಅವರು, ದಿವಂಗತ ಗಂಗಯ್ಯ ಹೆಗಡೆ ಅವರ ಸ್ಮರಣಾರ್ಥ ಅವರ ಪುತ್ರ ಸಿದ್ಧಾರ್ಥ್ ಹೆಗಡೆ ಅವರು ನೀಡಿರುವ 25 ಸಾವಿರ ಡಾಲರ್ಗಳ( 25 ಲಕ್ಷ) ನಿಧಿಯ ವಾರ್ಷಿಕ ಬಡ್ಡಿ ಆದಾಯದಿಂದ ಪ್ರತಿವರ್ಷ ಗ್ರಾಮೀಣ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಕಾರ್ಯವನ್ನು ರೋಟರಿ ಸಂಸ್ಥೆ ಮಾಡುತ್ತಿದೆ. ಇದೇ ಯೋಜನೆಯಡಿ ಈ ಬಾರಿ ರೋಟರಿ ಜಿಲ್ಲಾ ಅನುದಾನ ಹಾಗೂ ಬೇಲೂರು ರೋಟರಿ ಸಂಸ್ಥೆಯ ಸಹಯೋಗದಲ್ಲಿ ಸುಮಾರು 64 ಸಾವಿರ ವೆಚ್ಚದಲ್ಲಿ ಹೈಟೆಕ್ ವಾಟರ್ ಫಿಲ್ಟರ್ ಅಳವಡಿಸಲಾಗಿದೆ ಎಂದು ತಿಳಿಸಿದರು.ಮಲೆನಾಡು ಮತ್ತು ಅರೆಮಲೆನಾಡು ಪ್ರದೇಶಗಳಲ್ಲಿ ಮಕ್ಕಳಲ್ಲಿ ಕೆಮ್ಮು, ಶೀತ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಶುದ್ಧ ಬಿಸಿನೀರು ಲಭ್ಯವಾಗಬೇಕು ಎಂಬ ಉದ್ದೇಶದಿಂದ ವಿಶೇಷ ಬಿಸಿ ಮತ್ತು ತಣ್ಣೀರಿನ ಫಿಲ್ಟರ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದರು.ಕಾಲೇಜು ಪ್ರಾಂಶುಪಾಲ ಹಾಗೂ ರೋಟರಿ ಮುಂದಿನ ಸಹಾಯಕ ಗವರ್ನರ್ ಗಣೇಶ್ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಈ ಹೈಟೆಕ್ ವಾಟರ್ ಫಿಲ್ಟರ್ ಅನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ಮನವಿ ಮಾಡಿದರು. ಸ್ಟೀಲ್ನಿಂದ ನಿರ್ಮಿಸಿರುವ ಈ ಫಿಲ್ಟರ್ ಉತ್ತಮ ಗುಣಮಟ್ಟ ಹೊಂದಿದ್ದು, ಸುಮಾರು 35 ರಿಂದ 40 ವರ್ಷಗಳವರೆಗೆ ಬಾಳಿಕೆ ಬರುವ ಸಾಮರ್ಥ್ಯ ಹೊಂದಿದೆ. ವಿಶ್ವಾಸಾರ್ಹ ಕಂಪನಿಯ ಉತ್ಪನ್ನವಾಗಿರುವುದರಿಂದ ಸೇವೆ ಮತ್ತು ನಿರ್ವಹಣೆಯಲ್ಲಿಯೂ ತೊಂದರೆ ಇರುವುದಿಲ್ಲ ಎಂದು ಹೇಳಿದರು.ರೋಟರಿ ಕ್ಲಬ್ ಅಧ್ಯಕ್ಷ ರಘುನಾಥ್ ಮಾತನಾಡಿ, ಕಾಲೇಜಿನ ಆವರಣ, ಶಿಸ್ತು ಹಾಗೂ ಅಚ್ಚುಕಟ್ಟುತನವನ್ನು ಶ್ಲಾಘಿಸಿದರು. ಗಂಗಯ್ಯ ಹೆಗಡೆ ಅವರ ಎಂಡೋಮೆಂಟ್ ಫಂಡ್ (ದತ್ತಿ ನಿಧಿ) ಸಹಾಯದಿಂದ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿರುವುದು ಶ್ಲಾಘನೀಯ ಕಾರ್ಯವಾಗಿದ.ಸಮಾಜ ಸೇವೆಯ ಮಹತ್ವವನ್ನು ವಿವರಿಸಿದ ಅವರು, ಮನುಷ್ಯ ಬದುಕಿರುವಾಗ ಮಾಡುವ ಜನಪರ ಕಾರ್ಯಗಳು ಆತ ನಿಧನರಾದ ನಂತರವೂ ಸಮಾಜದಲ್ಲಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸುತ್ತವೆ ಎನ್ನುವುದಕ್ಕೆ ರಾಜ್ಯದ ಹೆಸರಾಂತ ಗಂಗಯ್ಯ ಹೆಗಡೆ ಹಾಗೂ ಸಿದ್ಧಾರ್ಥ್ ಹೆಗಡೆ ಅವರ ಸೇವಾ ಮನೋಭಾವ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.ರೋಟರಿ ಸಂಸ್ಥೆಯ ವೈ.ಡಿ. ಲೋಕೇಶ್ ಮಾತನಾಡಿ, ರೋಟರಿ ಸಂಸ್ಥೆಯು ವಿಶ್ವದಾದ್ಯಂತ ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ರೋಟರಿಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಷ್ಮಾ ಮಾತನಾಡಿ, ಶಿಕ್ಷಣ ಕ್ಷೇತ್ರ ಹಾಗೂ ಸಮಾಜದ ಅಭಿವೃದ್ಧಿಗೆ ರೋಟರಿ ಸಂಸ್ಥೆ ನೀಡುತ್ತಿರುವ ಕೊಡುಗೆಗಳು ಮಾದರಿಯಾಗಿವೆ. ಇಂತಹ ಸೇವಾ ಕಾರ್ಯಗಳು ಮುಂದುವರಿಯಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಹೆಚ್.ಕೆ. ರಮೇಶ್, ಉಪನ್ಯಾಸಕರಾದ ಪೂರ್ಣಚಂದ್ರ, ಪ್ರದೀಪ್, ದೀಕ್ಷಿತ್, ಪ್ರಾಧ್ಯಾಪಕರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
“ಗ್ರಾಮೀಣ ಶಾಲಾ ಮಕ್ಕಳಿಗೆ ಹೈಟೆಕ್ ವಾಟರ್ ಫಿಲ್ಟರ್ ಕೊಡುಗೆ ನೀಡಿದ ಬೇಲೂರು ರೋಟರಿ ಕ್ಲಬ್”



