ರಾಮನಗರ: ಭೈರಮಂಗಲ ಗ್ರಾಮದಲ್ಲಿ ಕೂಗಳತೆ ದೂರದಲ್ಲಿ ಯೋಜನೆ ಪರವಾಗಿ ಧರಣಿ ನಡೆಸುತ್ತಿರುವ ರೈತರು ಶೀಘ್ರ ಜೆಎಂಸಿ ಸರ್ವೆ ಮುಗಿಸಿ ಪರಿಹಾರ ವಿತರಿಸುವಂತೆ ಆಗ್ರಹಿಸಿ ಮಂಗಳವಾರ ರಸ್ತೆ ತಡೆ ನಡೆಸಿದರು.ಟೌನ್ಶಿಪ್ ಯೋಜನೆಗೆ ಭೂಮಿ ಬಿಟ್ಟುಕೊಡಲು ನಾವು ಸಿದ್ಧರಿದ್ದೇವೆ. ನಮ್ಮ ಜಮೀನು ಸರ್ವೇ ಮಾಡಿಸಿ, ಶಾಪಗ್ರಸ್ಥವಾಗಿರುವ ಭೈರಮಂಗಲ ಭಾಗದ ನಮ್ಮ ಭೂಮಿಗಳಿಗೆ ಪರಿಹಾರ ವಿತರಿಸಿ ಮುಕ್ತಿ ಕೊಡಿ ಎಂಬ ಪರವಾದ ಘೋಷಣೆಗಳು ಮೊಳಗಿದವು.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಡದಿ ಠಾಣೆ ಇನ್ಸ್ಪೆಕ್ಟರ್ ವಿಜಯ ಕುಮಾರ್ ಅವರು ರಸ್ತೆ ತಡೆ ಮಾಡದಂತೆ ರೈತರ ಮನವೊಲಿಸಲು ಮುಂದಾದರು. ಅದಕ್ಕೆ ಬಗ್ಗದ ರೈತರು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬರಬೇಕು. ಕೂಡಲೇ ನಮ್ಮ ಜಮೀನುಗಳಲ್ಲಿ ಜೆಎಂಸಿ ಆರಂಭಿಸಬೇಕೆAದು ಆಗ್ರಹಿಸಿದರು. ಇದರಿಂದ ಹಾರೋಹಳ್ಳಿ-ಬಿಡದಿ ಮುಖ್ಯರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಈ ವೇಳೆ ರೈತ ಮುಖಂಡ ಹೊಸೂರು ರಾಜಣ್ಣ ಮಾತನಾಡಿ, ಮಂಡಲಹಳ್ಳಿ ಗ್ರಾಮದಲ್ಲಿ 23 ಜನ ರೈತರು ಭೂಮಿ ಕೊಡುವುದಾಗಿ ಜಿಬಿಡಿಎಗೆ ಒಪ್ಪಿಗೆ ಪತ್ರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಜೆಎಂಸಿ ಸೋಮವಾರ ಸರ್ವೆ ಕಾರ್ಯಕ್ಕೆ ಬಂದಿದ್ದರು. ಈ ವೇಳೆ ಹೊರಗಿನ ವ್ಯಕ್ತಿಗಳು ಬಂದು ದುಷ್ಕೃಂತ್ಯ ಎಸಗಿದ್ದಾರೆ. ನೆನ್ನೆ ನಡೆದ ಘಟನೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿರವರೇ ನೇರ ಕಾರಣ ಎಂದು ಆರೋಪಿದರು.ಟೌನ್ಶಿಪ್ ಯೋಜನೆ ಘೋಷಣೆ ಮಾಡಿದ ಕುಮಾರಸ್ವಾಮಿರವರು ಸುಳ್ಳನ್ನು ನಿಜವೆಂದು ಸಾಬೀತು ಮಾಡಲು ಹೊರಟಿದ್ದಾರೆ. ಅವರ ಮಾತು ಕೇಳಿ ಕೆಲ ರೈತರು ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ. ರೈತರೇ ಬೇಡವೆಂದರೆ ಅಧಿಕಾರಿಗಳು ಸರ್ವೆ ಮಾಡುವುದಿಲ್ಲ. ಆದರೆ, ಒಪ್ಪಿಗೆ ನೀಡಿರುವ ರೈತರ ಜಮೀನು ಸರ್ವೆ ಮಾಡಲು ಅಡ್ಡಿ ಪಡಿಸುವುದು ಯಾವ ನ್ಯಾಯ? ಪ್ರಚಾರಕ್ಕಾಗಿ ಹೆಣ್ಣುಮಕ್ಕಳಿಂದ ಪೊರಕೆಯಲ್ಲಿ ಹೊಡೆಸಿರುವುದು ಅತ್ಯಂತ ಹೇಯ ಕೃತ್ಯ. ಈ ಬೆಳವಣಿಗೆಗಳು ಒಳ್ಳೆಯದಲ್ಲ ಎಂದರು.ಕುಮಾರಸ್ವಾಮಿರವರು ಹೇಳಿರುವಂತೆ ಮಾಹಿತಿ ಇಲ್ಲದೆ ರೈತರ ಜಮೀನಿಗೆ ನುಗ್ಗಿಲ್ಲ. ರೈತರೇ ಭೂಮಿ ಕೊಡಲು ಸಿದ್ಧರಾಗಿದ್ದು ಸರ್ವೆಗಾಗಿ ಜಿಬಿಡಿಎಗೆ ಅರ್ಜಿ ನೀಡಿದ್ದರಿಂದ ಅಧಿಕಾರಿಗಳು ಬಂದಿದ್ದರು. ಕುಮಾರಸ್ವಾಮಿರವರು ವಾಸ್ತವವನ್ನು ತಿಳಿಯದೆ ಎಲ್ಲೋ ಕುಳಿತು ಆರೋಪ ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಭೂಮಿ ಹೊಂದಿರುವ ಸುಮಾರು 20 ಸಾವಿರ ರೈತರಿದ್ದೇವೆ. ಈ ಪೈಕಿ ನೂರು ಜನರು ಮಾತ್ರ ಟೌನ್ಶಿಪ್ ಯೋಜನೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆದರೆ ಕುಮಾರಸ್ವಾಮಿರವರು ಹೊರಗಡೆ ಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ವಾಹನಗಳ ಮೂಲಕ ಕಳುಹಿಸಿ ಇಲ್ಲಿ ರೈತರ ಹೋರಾಟದ ದಿಕ್ಕನ್ನೆ ಬದಲಾಯಿಸುತ್ತಿದ್ದಾರೆ. ಬಸ್ ವ್ಯವಸ್ಥೆ ಮಾಡಿಕೊಟ್ಟವರು ಕುಮಾರಸ್ವಾಮಿ ಎಂದು ಹೊರಗಿನ ರೈತರು ಹೇಳುತ್ತಿದ್ದಾರೆ. ಅವರು ಈ ರೀತಿಯ ರಾಜಕೀಯ ಮಾಡಿ ನಮ್ಮ ಮೇಲೆ ದಬ್ಬಾಳಿಕೆ ಮಾಡಬೇಕೆ ಎಂದು ಪ್ರಶ್ನಿಸಿದರು.ಟೌನ್ಶಿಪ್ ಯೋಜನೆ ಉದ್ದೇಶಿತ ಪ್ರದೇಶದಲ್ಲಿನ ಬಹುತೇಕ ರೈತರು ಭೂಮಿ ಕೊಡಲು ಒಪ್ಪಿದ್ದು ಈಗಾಗಲೇ ಜಿಬಿಡಿಎಗೆ ಅರ್ಜಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಯಾರಿಗೂ ಹೆದರದೆ ಒಪ್ಪಿಗೆ ಇರುವ ರೈತರ ಜಮೀನನ್ನು ಸರ್ವೆ ಕಾರ್ಯ ಮುಂದುವರೆಸಬೇಕು. ಇಲ್ಲದಿದ್ದರೆ ರೈತರಿಗೆ ತೊಂದರೆ ಯಾಗುತ್ತದೆ. ಯೋಜನೆ ವಿರೋಧ ಇರುವ ರೈತರು ಕಾನೂನು ಹೋರಾಟ ಮಾಡಲಿ, ಅದನ್ನು ಬಿಟ್ಟು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಹೊಸೂರು ರಾಜಣ್ಣ ಹೇಳಿದರು.ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಎಚ್.ಎಸ್.ಸಿದ್ಧರಾಜು ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ರೆಡ್ಜೋನ್ ಮಾಡಿ ರೈತರ ಮರಣ ಶಾಸನ ಬರೆದವರು ಕುಮಾರಸ್ವಾಮಿ. ನಾವೆಲ್ಲರೂ ಜೆಡಿಎಸ್ ಪಕ್ಷದಲ್ಲಿದ್ದು ಎಲ್ಲವನ್ನೂ ಕಂಡಿದ್ದೇವೆ. ರೆಡ್ಜೋನ್ ವನವಾಸಕ್ಕೆ ಮುಕ್ತಿಕೊಡಿ ಎಂದು ಹಲವಾರು ಬಾರಿ ಕೇಳಿಕೊಂಡರೂ ನೀವು ನಮ್ಮ ಮಾತು ಕಿವಿಗೆ ಹಾಕಿಕೊಳ್ಳಲಿಲ್ಲ, ನಿಮ್ಮ ನಿರ್ಲಕ್ಷದಿಂದ ಸುಮಾರು 3000 ಎಕರೆಯಷ್ಟು ಜಮೀನನ್ನು ರೈತರು ಕಡಿಮೆ ಬೆಲೆ ಕಳೆದುಕೊಂಡಿದ್ದಾರೆ. ಉಳಿಕೆ ಜಮೀನಿಗೆ ಬರುವ ಪರಿಹಾರದಿಂದ ಬದುಕಿಕೊಳ್ಳುತ್ತೇವೆ. ದಯವಿಟ್ಟು ನಮಗೆ ತೊಂದರೆಕೊಡಬೇಡಿ ಎಂದು ಮನವಿ ಮಾಡಿದರು. ಈ ವೇಳೆ ಭೈರಮಂಗಲ ವಿಎಸ್ಎಸ್ಎನ್ ಅಧ್ಯಕ್ಷ ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಆರ್.ಜಯಚಂದ್ರ, ರೈತಮುಖಂಡರಾದ ಶಿವರಾಮ್, ರಾಮಾಂಜಿನಿ, ಕೃಷ್ಣಮೂರ್ತಿ, ಯಾಲಕಯ್ಯ, ವೆಂಕಟಾಚಲಯ್ಯ, ನಾಗರಾಜು, ಸಂಜೀವರೆಡ್ಡಿ, ತಾಯಪ್ಪನದೊಡ್ಡಿಸ್ವಾಮಿ, ವಿನಯ್ಕುಮಾರ್, ನಾಗೇಶ್, ಅಂಚೀಪುರಶೇಖರ್ ಇದ್ದರು.



