ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಇಂದು ಮಧ್ಯಾಹ್ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಖಾಸಗಿ ಕಾರ್ಯಕ್ರಮ ನಿಮಿತ್ತ ಮುಖ್ಯಮಂತ್ರಿಯವರು ನಿನ್ನೆ ದೆಹಲಿಗೆ ತೆರಳಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಆ ಕಾರ್ಯಕ್ರಮವನ್ನು ರದ್ದುಪಡಿಸಿ ಬೆಂಗಳೂರಿನಲ್ಲಿಯೇ ಉಳಿದಿದ್ದರು. ಇಂದು ಬೆಳಿಗ್ಗೆ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಸಂವಾದ ನಡೆಸುವ ಅಧಿಕೃತ ಕಾರ್ಯಕ್ರಮದಲ್ಲಿ ಹಾಜರಾಗಿ ಮಧ್ಯಾಹ್ನ 2 ಗಂಟೆಗೆ ವಿಮಾನದಲ್ಲಿ ದೆಹಲಿಗೆ ತೆರಳುವ ಕಾರ್ಯಕ್ರಮ ನಿಗಧಿಯಾಗಿದೆ. ಇಂದು ಬೆಳಿಗ್ಗೆ ಮುಖ್ಯಮಂತ್ರಿಯವರ ದೆಹಲಿ ಪ್ರಯಾಣದ ಅಧಿಕೃತ ಕಾರ್ಯಕ್ರಮ ದಿಢೀರ್ ಎಂದು ನಿಗಧಿಯಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಕ್ಕೆ ಎಡೆಮಾಡಿಕೊಟ್ಟಿದೆ. ನಾಲ್ಕು ಗಂಟೆಗೆ ದೆಹಲಿ ತಲುಪಲಿರುವ ಮುಖ್ಯಮಂತ್ರಿಯವರು ಸಂಜೆ ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಇಂದು ದೆಹಲಿಯಲ್ಲೇ ವಾಸ್ತವ್ಯ ಹೂಡಲಿರುವ ಅವರು ನಾಳೆ ಪಕ್ಷದ ರಾಷ್ಟ್ರೀಯ ವರಿಷ್ಠರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದರ ಸುಳಿವು ಅರಿತಿರುವ ಸಚಿವಾಕಾಂಕ್ಷಿಗಳು ನಿನ್ನೆ ಮತ್ತು ಇಂದು ದೆಹಲಿಗೆ ದೌಡಾಯಿಸಿದ್ದಾರೆ. 20 ಸಚಿವ ಸ್ಥಾನಗಳಿಗೆ ಸುಮಾರು 50ಕ್ಕೂ ಹೆಚ್ಚು ಮಂದಿ ಒಂದೊAದು ಜಿಲ್ಲೆಗೆ ಇಬ್ಬರು ಮೂವರಂತೆ ಆಕಾಂಕ್ಷಿಗಳಾಗಿದ್ದು, ಅವರೆಲ್ಲರೂ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಅತೀ ದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲೆಯಿಂದ 6 ಮಂದಿ ಶಾಸಕರು ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಈಗಾಗಲೇ ಹಿರಿಯ ಮುಖಂಡ ಸತೀಶ್ ಜಾರಕಿಹೊಳಿ ಅವರಿಗೆ ಬೆಳಗಾವಿ ಪ್ರಾತಿನಿಧ್ಯದಿಂದ ಸಚಿವ ಸ್ಥಾನ ನೀಡಲಾಗಿದೆ. ಉಳಿದಂತೆ ಮಾಜಿ ಸಚಿವರಾದ ಲಕ್ಷ್ಮಣ ಸವದಿ, ಲಕ್ಷ್ಮೀ ಹೆಬ್ಬಾಳ್ಕರ್, ಹಿರಿಯ ಶಾಸಕರಾದ ಅಶೋಕ್ ಪಟ್ಟಣ, ಪ್ರಥಮ ಭಾರಿಗೆ ಆಯ್ಕೆಯಾಗಿರುವ ಆಸೀಫ್ ಸೇಠ್ ಸೇರಿದಂತೆ ಒಟ್ಟು ಆರು ಮಂದಿ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಕೊಪ್ಪಳ ಜಿಲ್ಲೆಯಿಂದ ಮಾಜಿ ಸಚಿವ ಶಿವರಾಜ್ ತಂಗಡಗಿ ಹಿರಿಯ ಶಾಸಕ ಬಸವರಾಜ್ ರಾಯ ರೆಡ್ಡಿ ಮತ್ತೋರ್ವ ಶಾಸಕ ರಾಘವೇಂದ್ರ ಹಿಟ್ನಾಳ್ ಆಕಾಂಕ್ಷಿಗಳಾಗಿದ್ದಾರೆ.ಬೋವಿ ಪೀಠದ ಸ್ವಾಮೀಜಿ ಹಿಮ್ಮಡಿ ದೇಶೀಕೇಂದ್ರ ಸ್ವಾಮೀಜಿ ಅವರು ನಿನ್ನೆ ತುಮಕೂರಿನಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿ ಇದೇ ಮೊದಲ ಬಾರಿಗೆ ಗೆದ್ದಿರುವ ಪಾವಗಡ ಕ್ಷೇತ್ರದ ವೆಂಕಟೇಶ್ ಅವರಿಗೆ ಸಚಿವ ಸ್ಥಾನ ಕೊಡಿಸಲು ಸಂಬAಧಪಟ್ಟವರಿಗೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿದ್ದಾರೆ. ಈಗಾಗಲೇ ಉಪಮುಖ್ಯಮಂತ್ರಿ ಸ್ಥಾನ ತುಮಕೂರು ಜಿಲ್ಲೆಗೆ ದೊರೆತಿದ್ದು, ತಿಪಟೂರಿನ ಕೆ. ಷಡಕ್ಷರಿ, ಶಿರಾದ ಜಯಚಂದ್ರ, ಮಧುಗಿರಿಯ ಕೆ.ಎನ್. ರಾಜಣ್ಣ ಹಾಗೂ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ರಾಜೇಂದ್ರ, ಗುಬ್ಬಿಯ ಶ್ರೀನಿವಾಸ್ ಸಚಿವಾಕಾಂಕ್ಷಿಗಳಾಗಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಹುತೇಕ ಶಾಸಕರು ತಮ್ಮ ಜಿಲ್ಲಾ ಹಾಗೂ ಸಮುದಾಯ ಮತ್ತಿತರ ಪ್ರಾತಿನಿಧ್ಯದ ಗಮನದಲ್ಲಿರಿಸಿಕೊಂಡು ಸಚಿವ ಸ್ಥಾನ ನೀಡುವಂತೆ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಪಕ್ಷದ ವರಿಷ್ಠರ ಮನವೊಲಿಸುವ ಕಾರ್ಯದಲ್ಲಿ ನಿರಂತರಾಗಿದ್ದಾರೆ.
ಇಂದು ದೆಹಲಿಗೆ ಸಿಎಂ ನಾಳೆ ವರಿಷ್ಠರೊಂದಿಗೆ ಸಂಪುಟ ವಿಸ್ತರಣೆ ಚರ್ಚೆ ಸಾಧ್ಯತೆ



