ಬೆಂಗಳೂರು: ರಾಜ್ಯದ ತುರ್ತು ವೈದ್ಯಕೀಯ ಸೇವೆಯಲ್ಲಿ ಭಾರಿ ಸುಧಾರಣೆ ತರಲು ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮುಂದೆ ಅಪಘಾತ ಅಥವಾ ತುರ್ತು ಆರೋಗ್ಯ ಸಮಸ್ಯೆಯ ಸಂದರ್ಭದಲ್ಲಿ ಕರೆ ಮಾಡಿದ ಕೇವಲ 15 ನಿಮಿಷಗಳಲ್ಲಿ 108 ಆಂಬುಲೆನ್ಸ್ ಸ್ಥಳಕ್ಕೆ ತಲುಪಬೇಕು ಎಂಬ ಕಡಕ್ ನಿಯಮವನ್ನು ಜಾರಿಗೆ ತರಲಾಗಿದೆ. ಒಂದು ವೇಳೆ ನಿಗದಿತ 15 ನಿಮಿಷಗಳ ಡೆಡ್ಲೈನ್ ಒಳಗೆ ಆಂಬುಲೆನ್ಸ್ ಸ್ಥಳಕ್ಕೆ ಬರದೇ ಇದ್ದರೆ, ಸಂಬಂಧಪಟ್ಟ ಆಂಬುಲೆನ್ಸ್ ಏಜೆನ್ಸಿಗೆ ಬರೋಬ್ಬರಿ 5 ಸಾವಿರ ರೂಪಾಯಿ ದಂಡ ವಿಧಿಸಲು ಸರ್ಕಾರ ಮುಂದಾಗಿದೆ.ಈ ಕುರಿತು ಮಾಹಿತಿ ನೀಡಿರುವ ಸಚಿವ ಯು.ಟಿ. ಖಾದರ್ ಅವರು, ತುರ್ತು ವೈದ್ಯಕೀಯ ಸೇವೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ÷್ಯ ಅಥವಾ ಬೇಜವಾಬ್ದಾರಿತನವನ್ನು ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಸಾರ್ವಜನಿಕರಿಗೆ ಆಂಬುಲೆನ್ಸ್ ಸೇವೆ ಮತ್ತಷ್ಟು ಪರಿಣಾಮಕಾರಿಯಾಗಿ ಮತ್ತು ವೇಗವಾಗಿ ಸಿಗುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ರೋಗಿಗಳನ್ನು ಸಕಾಲದಲ್ಲಿ ಆಸ್ಪತ್ರೆಗೆ ತಲುಪಿಸುವುದು ಚಾಲಕರ ಆದ್ಯತೆಯಾಗಿದ್ದು, ಟ್ರಾಫಿಕ್ ನೆಪ ಒಡ್ಡಿ ಅನಗತ್ಯವಾಗಿ ವಿಳಂಬ ಮಾಡುವುದಕ್ಕೆ ಇನ್ಮುಂದೆ ಯಾವುದೇ ಅವಕಾಶ ಇರುವುದಿಲ್ಲ. ಈ ದಂಡದ ಸಂಪೂರ್ಣ ಹೊಣೆಯನ್ನು ಆಂಬುಲೆನ್ಸ್ ಏಜೆನ್ಸಿಯೇ ಹೊರಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಇದರೊಂದಿಗೆ ರಾಜ್ಯದಲ್ಲಿ ಹಳೆಯದಾಗಿರುವ ಮತ್ತು ಸುಸ್ಥಿತಿಯಲ್ಲಿಲ್ಲದ ಎಲ್ಲ ಆಂಬುಲೆನ್ಸ್ ವಾಹನಗಳನ್ನು ಗುಜರಿಗೆ ಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇವುಗಳ ಜಾಗದಲ್ಲಿ ಹೊಸದಾಗಿ ಅತ್ಯಾಧುನಿಕ ಆಂಬುಲೆನ್ಸ್ಗಳನ್ನು ಖರೀದಿಸಲು ಸರ್ಕಾರ ಮುಂದಾಗಿದ್ದು, ರಾಜ್ಯದ ಜನರಿಗೆ ಗುಣಮಟ್ಟದ ಮತ್ತು ಸುಸಜ್ಜಿತ ತುರ್ತು ಆರೋಗ್ಯ ಸೇವೆ ಒದಗಿಸಲು ಇಲಾಖೆ ಸರ್ವಸನ್ನದ್ಧವಾಗಿದೆ.



