ರಾಮನಗರ: ವಿಶ್ವಕರ್ಮ ಸಮುದಾಯ ಎಲ್ಲಿವರೆಗೆ ಸಂಘಟಿತರಾಗಿ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದಿಲ್ಲವೊ ಅಲ್ಲಿವರೆಗೆ ಸಾಮಾಜಿಕ ನ್ಯಾಯ ಸಿಗುವುದಿಲ್ಲ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು.ನಗರದಲ್ಲಿ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಭಾ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜಕ್ಕೆ ಅವಕಾಶ ಸಿಗಬೇಕೆಂದರೆ ಮೀಸಲಾತಿ ಅತ್ಯವಶ್ಯಕವಾಗಿದೆ ಎಂದರು.102 ಜಾತಿಗಳಿರುವ ಹಿಂದುಳಿದ ವರ್ಗದಲ್ಲಿ ವಿಶ್ವಕರ್ಮ ಸಮಾಜವಿದೆ. ಅದರಲ್ಲಿ ಬಹಳ ಬಲಿಷ್ಠವಾದ ಸಮಾಜ ಇರುವುದರಿಂದ ರಾಜ್ಯದಲ್ಲಿ ವಿಶ್ವಕರ್ಮರು 40ಲಕ್ಷ ಜನಸಂಖ್ಯೆಯಿದ್ದರೂ ಕೂಡ ಅದರ ಉಪಯೋಗ ಪಡೆದುಕೊಳ್ಳುವಷ್ಟು ಶಕ್ತಿವಂತರಾಗಿಲ್ಲ ಎಂದು ತಿಳಿಸಿದರು.1976ರಲ್ಲಿ ಡಿ.ದೇವರಾಜು ಅರಸು ಹಿಂದುಳಿದ ವರ್ಗದಲ್ಲಿರುವ ಸಮಾಜಗಳಿಗೆ ಅವರಲ್ಲಿರುವ ಕುಲಕಸುಬುಗಳನ್ನು ಉಳಿಸಿ ಕೊಂಡು ಎಲ್ಲರಂತೆ ಬದುಕಬೇಕೆಂದು ಆಯ ನೂರು ಆಯೋಗವನ್ನು ರಚಿಸಿದ್ದರು. ಆದರೆ, ರಾಜಕೀಯ ಪ್ರಜ್ಞೆಯಿಲ್ಲದ ಆ ಸಂದರ್ಭದಲ್ಲಿ ಮೀಸಲಾತಿಯನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿದರು.ಅಸಲಿಗೆ ಹಿಂದುಳಿದ ವರ್ಗದಲ್ಲಿ ನಾವು ಎಲ್ಲಿದ್ದೇವೆ ಎನ್ನುವುದೇ ಗೊತ್ತಿಲ್ಲದ ರೀತಿಯಲ್ಲಿ ಬದಲಾವಣೆಗಳಾಗಿವೆ. ದೇಶದಲ್ಲಿ ಐದಾರು ರಾಜ್ಯಗಳನ್ನು ಹೊರತುಪಡಿಸಿದರೆ ಇನ್ನುಳಿದ ಎಲ್ಲಾ ರಾಜ್ಯಗಳಲ್ಲಿ ವಿಶ್ವಕರ್ಮ ರನ್ನು ಪರಿಶಿಷ್ಟಪಂಗಡ ಮತ್ತು ಪರಿಶಿಷ್ಟ ಜಾತಿಯಲ್ಲಿಯೂ ಸೇರಿಸಲಾಗಿದೆ. ಕರ್ನಾಟಕದಲ್ಲಿಯೂ ಪರಿಶಿಷ್ಟ ವರ್ಗಕ್ಕೆ ಸೇರಿ ಸಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದಿದ್ದೇವೆ. ಆದರೂ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಕೆ.ಪಿ.ನಂಜುಂಡಿ ಬೇಸರ ವ್ಯಕ್ತಪಡಿಸಿದರು.
ನಾವು ಸ್ವಾಭಿಮಾನಿಗಳು, ಭಿಕ್ಷುಕರಲ್ಲ: ಕುಲ ಕಸುಬಿನ ಮೂಲಕ ವಿಶ್ವಕರ್ಮ ಸಮುದಾಯ ದೇಶದ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ. ಆದರೆ, ಶಿಕ್ಷಣದ ಕೊರತೆಯಿಂದಾಗಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಸದೃಢಗೊಳ್ಳಲು ಸಾಧ್ಯವಾಗಿಲ್ಲ.ಜನಾಂಗದಲ್ಲಿ ಹುಟ್ಟುವಾಗಲೇ ಎಂಜಿನಿಯರ್ಗಳಾಗಿ ಹುಟ್ಟುತ್ತೇವೆ. ಆದರೆ, ವಿದ್ಯೆ ಇಲ್ಲದಿದ್ದರೂ ಕುಲಕಸುಬು ರಕ್ತಗತವಾಗಿ ಬಂದಿದೆ. ಸಮುದಾಯದ ಮಕ್ಕಳು ವಿದ್ಯಾವಂತರಾಗಿ ಸರ್ಕಾರದ ಸವಲತ್ತುಗಳು ಸಿಗಬೇಕು. ಇದಕ್ಕಾಗಿ ರಾಜಕೀಯ ಜ್ಞಾನ, ಸಂವಿಧಾನದಲ್ಲಿನ ಅಂಶಗಳನ್ನು ತಿಳಿದುಕೊಳ್ಳಬೇಕು ಎಂದರು.
ಯಾವುದೇ ಸಮಾಜ ದೊಡ್ಡ ಕೆಲಸ ಮಾಡಿಕೊಟ್ಟರೂ ಸಹ ಅದನ್ನು ಗುರುತಿಸಲು ಕಲೆ ಎಷ್ಟು ಮುಖ್ಯವೋ ವಿದ್ಯೆಯೂ ಅಷ್ಟೇ ಮುಖ್ಯವಾಗುತ್ತದೆ. ವಿದ್ಯೆ ಇಲ್ಲದಿದ್ದರೆ ಸಮಾಜಕ್ಕೆ ಎಷ್ಟುದೊಡ್ಡ ಕೊಡುಗೆ ಕೊಟ್ಟರೂ ಅದು ನೆನಪಿನಲ್ಲಿ ಉಳಿಯುವುದಿಲ್ಲ ಎಂದರು.ವೈದಿಕವಾಗಿ ನಮ್ಮವರು ಸರ್ವಶ್ರೇಷ್ಠರು ಆಗಿದ್ದೇವೆ. ನಾವು ಸ್ವಾಭಿಮಾನಿಗಳು, ಭಿಕ್ಷುಕರಲ್ಲ. ನಾವು ಹೇಳಿದ್ದನ್ನೂ ಮಾಡುತ್ತೇವೆಯೇ ಹೊರತು ನಂಬಿಕೆ ದ್ರೋಹಿಗಳಲ್ಲ. ಭೂಮಿಯ ಸಂಪನ್ಮೂಲಕ್ಕೆ ಬೆಲೆ ಕಟ್ಟಿದವರು ವಿಶ್ವಕರ್ಮ ಸಮಾಜದ ಬಗೆಗೆ ನಿರ್ಲಕ್ಷ÷್ಯ ಭಾವನೆ ಸಲ್ಲದು ಎಂದು ಕೆ.ಪಿ.ನಂಜುಂಡಿ ಎಚ್ಚರಿಸಿದರು.ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ಶ್ರೀ ಕುಕ್ಕೆಸುಬ್ರಹ್ಮಣ್ಯ ಮಠದ ಧರ್ಮಾಧಿಕಾರಿ ಶ್ರೀ ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಮನುಷ್ಯ ಜನ್ಮ ಭಗವಂತ ನೀಡಿದ ಅದ್ಬುತ ಶಕ್ತಿಯಾಗಿದ್ದು, ಪಕ್ಷಿಗಳಿಗಿರುವ ಪ್ರತಿಭೆಯಂತೆ ಮನುಷ್ಯನಿಗಿರುವ ವಿಶೇಷ ಪ್ರತಿಭೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಪ್ರಪಂಚಕ್ಕೆ ಸುಂದರತೆ ಕೊಟ್ಟು, ಶಿಲ್ಪಶಾಸ್ತ್ರದಂತಹ ವಿಶಿಷ್ಟ ಕೊಡುಗೆ ನೀಡಿದ ವಿಶ್ವಕರ್ಮ ಸಮಾಜ ಮನುಷ್ಯರು ಲೌಕಿಕ ಮತ್ತು ಆಧ್ಯಾತ್ಮಿಕ ಜೀವನವನ್ನು ಸಾರ್ಥಕಪಡಿಸಿ ಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ಸಮುದಾಯದವರು ಅವಿರತ ಹೋರಾಟ, ಛಲ, ಪರಿಶ್ರಮದ ಮೂಲಕ ಸಮಾಜಕ್ಕೆ ದಾರಿ ದೀಪವಾಗುವ ಕೆಲಸ ಮಾಡಬೇಕಿದೆ.ಅದಕ್ಕೆ ಶಿಕ್ಷಣ ಬಹಳ ಮುಖ್ಯವಾಗಿದೆ ಎಂದರು.ನಿಟ್ಟರಹಳ್ಳಿ ಶ್ರೀ ವಿಶ್ವಕರ್ಮ ಸಂಪನ್ಮೂಲ ಮಠದ ಶ್ರೀ ನೀಲಕಂಠಸ್ವಾಮಿ,ದಾವಣಗೆರೆ ವಡ್ನಾಳ್ ಸಾವಿತ್ರೀ ಪೀಠದ ಶ್ರೀ ಶಂಕರಾತ್ಮನAದ ಸರಸ್ವತಿ ಸ್ವಾಮೀಜಿ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ವೇದಿಕೆಯಲ್ಲಿ ಅಖಿಕ ಕರ್ನಾಟಕ ವಿಶ್ವಕರ್ಮ ಮಹಾ ಸಮಾಜದ ಜಿಲ್ಲಾ ಉಪಾಧ್ಯಕ್ಷ ಜನಾರ್ಧನ್, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ರೈಡ್ ನಾಗರಾಜು, ಸಮಾಜ ಸೇವಕ ಸೋಮಶೇಖರ್, ರಾಜು, ಜಯಚಂದ್ರು, ಆರ್ ಬಿ ಎಲ್ ಲೋಕೇಶ್, ಬ್ಯಾಟಪ್ಪ,ಎಲ್.ಚಂದ್ರಶೇಖರ್, ಅಬ್ಬನಕುಪ್ಪೆ ರಮೇಶ್, ಆರ್ ಬಿಎಲ್ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವಕರ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ನಾವು ಸ್ವಾಭಿಮಾನಿಗಳು ಭಿಕ್ಷುಕರಲ್ಲ, ನಂಬಿಕೆ ದ್ರೋಹ ಮಾಡಲ್ಲ: ಕೆ.ಪಿ.ನಂಜುಂಡಿ | ಜನಾರ್ಧನ್ ಕಾರ್ಯಕ್ಕೆ ಶಾಸಕ ಬಾಲಕೃಷ್ಣ, ಕೆ.ಪಿ ನಂಜುಂಡಿ ಮೆಚ್ಚುಗೆ



