ಬೆಂಗಳೂರು: ಕಲಬುರಗಿ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ @PriyankKharge ಅವರೇ, ಕಲ್ಯಾಣ ಕರ್ನಾಟಕದ ಶಾಲೆಗಳ ದುರಸ್ತಿ ಬಗ್ಗೆ ಮುಖ್ಯಮಂತ್ರಿಗಳಿಗೆ ಯಾವಾಗ ಪತ್ರ ಬರೆಯುತ್ತೀರಿ ಪ್ರಿಯಾಂಕ್ ಅವರೇ? ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನೆ ಮಾಡಿದ್ದಾರೆ.
ಈ ಸಂಬಂಧ ಟ್ವಿಟ್ ಮಾಡಿರುವ ಅವರು, ತಾವು ಮತ್ತು ತಮ್ಮ ಕುಟುಂಬ ಕಲ್ಯಾಣ ಕರ್ನಾಟಕದ ಜನತೆಯ ಮತ ಪಡೆದು ದಶಕಗಳಿಂದ ಅಧಿಕಾರ ಅನುಭವಿಸುತ್ತಿದ್ದೀರಿ. ಆದರೆ ಕಲ್ಯಾಣ ಕರ್ನಾಟಕ ಮಾತ್ರ ಇನ್ನೂ ನಿಜಾಮರ ಆಡಳಿತದಲ್ಲಿಯೇ ಇದೆಯೇನೋ ಅನ್ನುವಷ್ಟು ಕೆಟ್ಟ ಪರಿಸ್ಥಿತಿಯಲ್ಲಿದೆ ಸ್ವಾಮಿ. ಕೆಲಸದಲ್ಲಿ ಜೀರೋ, ವಿವಾದದಲ್ಲಿ ಹೀರೋ ಎನ್ನುವಂತಾಗಿದೆ ನಿಮ್ಮ ಪರಿಸ್ಥಿತಿ ಎಂದು ವ್ಯಂಗ್ಯವಾಡಿದ್ದಾರೆ.ಈ ಪತ್ರಿಕಾ ವರದಿಯನ್ನು ಒಮ್ಮೆ ಕಣ್ಣು
ಬಿಟ್ಟು ನೋಡಿ! ನಿಮ್ಮದೇ ಉಸ್ತುವಾರಿ ಜಿಲ್ಲೆ ಗಳನ್ನೊಳಗೊಂಡ ಕಲ್ಯಾಣ ಕರ್ನಾಟಕದ ಶಾಲಾ ಕೊಠಡಿಗಳ ದುಸ್ಥಿತಿ ಬಿಚ್ಚಿಡುತ್ತಿದೆ ಈ ವರದಿ.
18,022 ಶಾಲಾ ಕೊಠಡಿಗಳು: ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ದುರಸ್ತಿಗೆ ಕಾಯುತ್ತಿವೆ.ಇದರಲ್ಲಿ ಬರೋಬ್ಬರಿ 8,006 ಕೊಠಡಿಗಳು ಸಂಪೂರ್ಣ ಜೀರ್ಣಾವಸ್ಥೆಯಲ್ಲಿದ್ದು, ಕಲಿಯಲು ಯೋಗ್ಯವೇ ಅಲ್ಲ ಎಂದು ಇಲಾಖೆಯೇ ಕೈಚೆಲ್ಲಿದೆ.ಸಿಮೆಂಟ್ ಉದುರಿದ ತಾರಸಿ, ಬಿರುಕು ಬಿಟ್ಟ ಗೋಡೆಗಳ ನಡುವೆ ಬಡವರ ಮಕ್ಕಳು ಪ್ರಾಣ ಕೈಯಲ್ಲಿ ಹಿಡಿದು ಅಕ್ಷರ ಕಲಿಯಬೇಕಾದ ದುರ್ಗತಿ ಬಂದಿದೆ. ಮಾಧ್ಯಮಗಳ ಮುಂದೆ ದಿನವಿಡೀ ಭಾಷಣ ಬಿಗಿಯುವ, ಅನಗತ್ಯ ವಿವಾದ ಸೃಷ್ಟಿಸುವ ನಿಮಗಾಗಲಿ, ಪೂರ್ಣಾವಧಿ ಶಿಕ್ಷಣ ಸಚಿವರೇ ಇಲ್ಲದ ನಿಮ್ಮ ನಾಲಾಯಕ್ @INCKarnataka ಸರ್ಕಾರಕ್ಕಾಗಲಿ ನಮ್ಮ ಕಲ್ಯಾಣ ಕರ್ನಾಟಕದ ಬಡ ಮಕ್ಕಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವೇ? ಎಂದಿದ್ದಾರೆ. ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ತಾವು ತೋರುವ ಸೈದ್ಧಾಂತಿಕ ಬದ್ಧತೆ, ನಿಷ್ಠೆಯನ್ನು, ನಿಮಗೆ ಮತ ನೀಡಿ ಗೆಲ್ಲಿಸಿ, ಅಧಿಕಾರ ಕೊಟ್ಟಿರುವ ಕಲ್ಯಾಣ ಕರ್ನಾಟಕದ ಜನತೆಗೂ, ಅಲ್ಲಿನ ಶಾಲೆಗಳ ಅಭಿವೃದ್ಧಿಗೂ ಸ್ವಲ್ಪ ತೋರಿಸಿ ಸ್ವಾಮಿ. ಕಲ್ಯಾಣ ಕರ್ನಾಟಕದ ಜನತೆಗೆ ನೀಡಬೇಕಾದ ಕನಿಷ್ಠ ಮೂಲಸೌಕರ್ಯದ ಕರ್ತವ್ಯದಲ್ಲಿ ಸಂಪೂರ್ಣ ವೈಫಲ್ಯ
ಕಂಡಿದ್ದೀರಿ. ಬಡ ಮಕ್ಕಳ ಜೀವದ ಜೊತೆ ಆಟವಾಡುವುದನ್ನು ನಿಲ್ಲಿಸಿ, ಮೊದಲು ಆ ಶಾಲೆಗಳನ್ನು ಸರಿಪಡಿಸಿ ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ರೀಲ್ಸ್ ಮಾಡುವುದು ಯಾವಾಗ ಬೆಂಗಳೂರು ನಗರಾಭಿವೃದ್ಧಿ ಸಚಿವ @krishnabgowda ಅವರೇ? ಬೆಂಗಳೂರಿನ ಜನತೆ ಪತ್ರಿಕೆಗೆ ಕಳುಹಿಸಿರುವ ಈ ನರಕಸದೃಶ ರಸ್ತೆಗುಂಡಿಗಳು ಫೋಟೋಗಳನ್ನು ಒಮ್ಮೆ ಕಣ್ಣು ಬಿಟ್ಟು ನೋಡಿ! ವಿನಾಯಕ ಲೇಔಟ್ ನಾಗರಭಾವಿ, ಮುದ್ದಿನಪಾಳ್ಯ ರಸ್ತೆ, ಜಯನಗರ 8ನೇ ಬ್ಲಾಕ್… ಹೀಗೆ ರಾಜಧಾನಿಯ ಪ್ರತಿ ರಸ್ತೆಯಲ್ಲೂ ಈಗ ‘ಗುಂಡಿಗಳದ್ದೇ ದರ್ಬಾರ್’! ಬೆಂಗಳೂರನ್ನು “Failed Model” ಎಂದು ಕರೆಯುವ ಮೂಲಕ ಬ್ರ್ಯಾಂಡ್ ಬೆಂಗಳೂರು ನಿರ್ಮಿಸುತ್ತೇವೆ ಎಂದು ಕೊಚ್ಚಿಕೊಳ್ಳುತ್ತಿದ್ದ ನಿಮ್ಮ ಮುಖ್ಯಮಂತ್ರಿಗಳ ಅಸಲಿ ಬಂಡವಾಳವನ್ನ ನೀವೇ ಬಯಲು ಮಾಡಿದ್ದೀರಿ ಎಂದಿದ್ದಾರೆ. ಬೆಂಗಳೂರಿನ ಇಂದಿನ ದುಸ್ಥಿತಿಗೆ ನೇರ ಹೊಣೆಗಾರರು ನಿಮ್ಮ ಮುಖ್ಯಮಂತ್ರಿ @DKShivakumar ಅವರೇ ಎಂದು ಒಪ್ಪಿಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದೀರಾ ಕೃಷ್ಣ ಭೈರೇಗೌಡರೇ? ಅಥವಾ ಇದನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎಂದು ಕೈಚೆಲ್ಲಿದೀರಾ?ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಬೆಂಗಳೂರಿನ ನಾಗರಿಕರ ತೆರಿಗೆ ಹಣ ಬೇಕು, ಆದರೆ ಅವರಿಗೆ ಸುರಕ್ಷಿತ ರಸ್ತೆ ಕೊಡುವ ಯೋಗ್ಯತೆ ಇಲ್ಲ. ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ಉಸ್ತುವಾರಿ ಸಚಿವರ ವೈಫಲ್ಯದಿಂದಾಗಿ ಜನರ ದಿನನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಇದೆ. ಕ್ಯಾಮೆರಾ ಮುಂದೆ ಅಧಿಕಾರಿಗಳನ್ನು ಗದರಿಸಿ ರೀಲ್ಸ್ ಮಾಡುವ ನಾಟಕ ಸಾಕು ಮಾಡಿ, ಮೊದಲು ರಸ್ತೆಗಿಳಿದು ಈ ಗುಂಡಿಗಳನ್ನು ಮುಚ್ಚಿಸಿ. ಇಲ್ಲದಿದ್ದರೆ ಬೆಂಗಳೂರಿನ ಜನ ನಿಮಗೆ ತಕ್ಕ ಪಾಠ ಕಲಿಸುವ ದಿನ ಬಹಳ ದೂರವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಲಸದಲ್ಲಿ ಜೀರೋ, ವಿವಾದದಲ್ಲಿ ಹೀರೋ: ಅಶೋಕ್ ವ್ಯಂಗ್ಯ



