ಕನಕಪುರ: ಬೆಂಗಳೂರು ಸೀಮೆಯ ಭಾಗವೇ ಆಗಿರುವ ಕನಕಪುರದಲ್ಲಿ ಇಲ್ಲಿನ ವೀರಶೈವ ಲಿಂಗಾಯತ ಪರಂಪರೆ ಯ ದೇಗುಲ ಮಠವು ಮಾಡಿರುವ ರಚನಾತ್ಮಕ ಕಾರ್ಯ ಗಳು ಕ್ರಾಂತಿಕಾರಕವಾಗಿವೆ,ಈ ಮಠವು ಮುಂದಿನ ದಿನ ಗಳಲ್ಲಿ ಈ ಭವ್ಯ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು, ಇದಕ್ಕೆ ತಮ್ಮಿಂದಾಗುವ ನೆರವನ್ನು ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ತಿಳಿಸಿದರು.
ಇತ್ತೀಚೆಗೆ ಶಿವೈಕ್ಯರಾದ ಮಠದ ಶ್ರೀಗಳಾಗಿದ್ದ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಪುಣ್ಯ ಸ್ಮರಣೆ ಪೂರ್ವಭಾವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಲಿಂಗೈಕ್ಯ ಪೂಜ್ಯ ಶ್ರೀ ಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಶ್ರೀ ಗಳ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅವರು ಶಿಕ್ಷಣ, ಆಶ್ರಯ, ದಾಸೋಹಗಳ ಸಮಾಜಮುಖಿ ಪರಂಪರೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಸಿದ್ಧಗಂಗಾ ಮಠಕ್ಕೆ ಭವ್ಯವಾದ ಹಿನ್ನೆಲೆ ಇದೆ. ಅಲ್ಲಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳ ದೂರದೃಷ್ಟಿಯಿಂದ ಈ ಪರಿಕಲ್ಪನೆಯು ಮೇಲ್ಪಂಕ್ತಿ ಯಾಯಿತು ಎಂದು ಸ್ಮರಿಸಿದರು.ಉತ್ತರ ಕರ್ನಾಟಕದಲ್ಲಿ ಶಿರಸಂಗಿ ಲಿಂಗರಾಜ ಪ್ರಭುಗಳು 1904ರಷ್ಟು ಹಿಂದೆಯೇ ಲಿಂಗಾಯತ ಮಠಗಳ ಮೂಲಕ ಶೈಕ್ಷಣಿಕ ಸಂಸ್ಥೆಗಳ ಆರಂಭಕ್ಕೆ ನಾಂದಿ ಹಾಡಿದರು. ಇದನ್ನು ಅನುಸರಿಸಿ ಕೆಎಲ್ಇ ಸೊಸೈಟಿ, ಬಿಎಲ್ ಡಿಇ ಮುಂತಾದವು ಅಸ್ತಿತ್ವಕ್ಕೆ ಬಂದವು. ಮೈಸೂರು ಭಾಗದಲ್ಲಿ ಇಲ್ಲಿನ ಮಹಾರಾಜರು ಪ್ರಗತಿಗೆ ಮುನ್ನುಡಿ ಬರೆದರು. ಸ್ಥಳೀಯವಾಗಿ ದೇಗುಲ ಮಠವು ಇಂತಹ ಹಾದಿಯಲ್ಲಿ ದಾಪುಗಾಲಿಟ್ಟಿತು ಎಂದು ಅವರು ನುಡಿದಿದ್ದಾರೆ. ದೇಗುಲ ಮಠವು ಲಿಂಗಾಯತ ಸಂಪ್ರದಾಯಕ್ಕೆ ಸೇರಿದ್ದರೂ ಜಾತ್ಯತೀತ ನೆಲೆಯಲ್ಲಿ ತನ್ನ ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ. ಇದರಿಂದ ಕನಕಪುರದ ಪರಿಸರದಲ್ಲಿ ಇದರ ಬಗ್ಗೆ ಜನರ ವಿಶ್ವಾಸ ಅದಮ್ಯವಾಗಿದೆ,ಈ ನಿಟ್ಟಿನಲ್ಲಿ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಕೊಡುಗೆ ಮೌಲಿಕ ವಾಗಿದೆ ಎಂದು ಅವರು ಸ್ಮರಿಸಿದರು.ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ರೈಲ್ವೆ ಸಚಿವ ವಿ. ಸೋಮಣ್ಣ ಪೂಜ್ಯ ಸ್ವಾಮೀಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಎಲ್ಲಾ ವರ್ಗದ ಜನರು, ಗಣ್ಯರು ಸಹಕರಿಸಬೇಕೆಂದು ಎಂದು ಕೋರಿದರು ದೇಗುಲಮಠದ ಶ್ರೀ ಚನ್ನಬಸವ ಸ್ವಾಮೀಜಿ ಗಳು, ಬೆಂಗಳೂರಿನ ಮಾಜಿ ಉಪ ಮೇಯರ್ ಪುಟ್ಟರಾಜು ಸಮುದಾಯದ ಮುಖಂಡ ಮಲ್ಲಿಕಾರ್ಜುನ ಸೇರಿದಂತೆ ಹಲವು ಗಣ್ಯರು ಈ ವೇಳೆ ಉಪಸ್ಥಿತರಿದ್ದರು.
ಕನಕಪುರ ತಾಲ್ಲೂಕಿಗೆ ದೇಗುಲ ಮಠದ ಕೊಡುಗೆ ಅನನ್ಯ: ಎಂ ಬಿ ಪಾಟೀಲ್



