ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಅಖಾಡಕ್ಕೆ ಬಿಜೆಪಿ ನಾಯಕರು ಎಂಟ್ರಿ ಕೊಟ್ಟಿದ್ದಾರೆ.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸೇರಿದಂತೆ ಪ್ರಮುಖ ನಾಯಕರು ಬುಧವಾರ ರೈತರ ಕೃಷಿ ತೋಟಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರಲ್ಲದೆ, ರೈತರ ಅಹವಾಲು ಕೂಡ ಆಲಿಸಿದರು.
ಬಿಡದಿ ಟೌನ್ ಶಿಪ್ ಯೋಜನೆಗಾಗಿ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಬಿಜೆಪಿ ನಾಯಕರ ನಿಯೋಗ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿತು. ಆನಂತರ ಬೈರಮಂಗಲ ವೃತ್ತದಲ್ಲಿ ನಡೆಯುತ್ತಿರುವ ರೈತರ ಚಳವಳಿಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಸರ್ಕಾರ ಒಂದೂವರೆ ವರುಷ ಮಾತ್ರ ಇರುತ್ತದೆ. ಈ ಯೋಜನೆ ಪ್ರಾರಂಭ ಮಾಡುವಷ್ಟರಲ್ಲಿ ಸರ್ಕಾರ ಹೋಗುತ್ತದೆ. ನಮ್ಮ ಸರ್ಕಾರ ಬಂದಾಗ ಈ ಯೋಜನೆ ಮಾಡುವುದಿಲ್ಲ ಎಂದರು.
ಬಿಡದಿ ಟೌನ್ ಶಿಪ್ ಯೋಜನೆಯಿಂದ ಹಸಿರು ವಲಯ ಮತ್ತು ಹೈನೋದ್ಯಮ ನಾಶವಾಗಲಿದೆ. ಲಕ್ಷಾಂತರ ಹಸುಗಳು ಕಸಾಯಿಖಾನೆಗೆ ಹೊಡೆಯಬೇಕಾ? ಒಕ್ಕಲೆದ್ದವರು ಎಲ್ಲಿ ಹೋಗಬೇಕು? ರೈತರು ತಲೆಮಾರಿನಿಂದ ಕಾಪಾಡಿ ಕೊಂಡು ಬಂದ ಆಸ್ತಿಯನ್ನು ಹೊರ ರಾಜ್ಯಗಳಿಂದ ಬಂದವರಿಗೆ ಸೈಟು ಮತ್ತು ಜಮೀನು ಕೊಟ್ಟು ಹಣ ಮಾಡಿಕೊಳ್ಳಲು ಯೋಜನೆ ಮಾಡುತ್ತೀರಾ? ಕನಕಪುರದಲ್ಲಿ ಚಿನ್ನದ ಬೆಲೆ ಕೊಡಿಸುತ್ತೇನೆ ಜಮೀನು ಮಾರಬೇಡಿ ಅಂತೀರಾ, ಬಿಡದಿಯಲ್ಲಿ ಬಲವಂತವಾಗಿ ಮಾರಾಟ ಮಾಡಿಸುತ್ತೀದ್ದೀರಿ ಈ ಇಬ್ಬಗೆ ನೀತಿ ಸರಿಯೇ ಎಂದು ಪ್ರಶ್ನಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರಿಗೆ ರಿಯಲ್ ಎಸ್ಟೇಟ್ ದಂಧೆ ಮಾಡಲು ಬೇರೆ ಕಡೆಗಳಲ್ಲಿ ಬೇಕಾದಷ್ಟು ಜಮೀನುಗಳಿವೆ. ಮುಖ್ಯಮಂತ್ರಿಗಳು, ಶಾಸಕರು ನೂರಾರು ಎಕರೆ ಜಮೀನು ಇಟ್ಟಿಕೊಳ್ಳಬಹುದು. ಅದೇ ಸಣ್ಣ ರೈತರು ಜಮೀನು ಇಟ್ಟುಕೊಂಡು ಬದುಕುವುದು ಬೇಡವೇ. ರೈತರನ್ನು ಬೀದಿಗೆ ತಂದರೆ ಆ ಭಗವಂತನು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದರು.
ಈ ಯೋಜನೆಗೆ ಬಲವಂತವಾಗಿ ಭೂ ಸ್ವಾಧೀನ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ರೈತರು ನಿರಂತರ ವಾಗಿ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ರವರು ಶೇ.70ರಷ್ಟು ರೈತರು ಸ್ವಾಧೀನ ಪರವಾಗಿದ್ದಾರೆ. ಭೂ ಸ್ವಾಧೀನದ ಜಾಗ ಬರಡು ಭೂಮಿ, ಪ್ರಧಾನಿ ಮೋದಿರವರು ಒಪ್ಪಿಗೆ ನೀಡಿದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಿಜವಾದ ರೈತನ ಮಗ ಈ ರೀತಿ ಕೃಷಿಕರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಾರರು. ನೀವು ನಿಜವಾಗಿಯೂ ರೈತನ ಮಗಾನ ಎಂಬ ಅನುಮಾನ ಕಾಡುತ್ತಿದೆ. ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಐದು ತುಂಡು ಮಾಡಿದಿರಿ. ಆದರೂ ಜನರು ತಡೆದುಕೊಂಡಿದ್ದಾರೆ. ಈಗಿಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಇಷ್ಟೊಂದು ಹಠ ಏಕೆಂದು ಪ್ರಶ್ನಿಸಿದರು.
ಬಿಡದಿ ಭಾಗದಲ್ಲಿ ಅರ್ಧ ಎಕರೆ ಭೂಮಿ ಪಾಳು ಬಿದ್ದಿಲ್ಲ. ಇಲ್ಲಿರುವ ತೆಂಗು, ಅಡಿಕೆ, ಮಾವು, ಸಪೋಟ, ರೇಷ್ಮೆ, ಹೈನುಗಾರಿಕೆ ನೋಡಿದರೆ ರೈತರು ಮೈಗಳ್ಳರಲ್ಲ ಎಂಬುದು ಸಾಬೀತಾಗಿದೆ. ನೀರಾವರಿ ಭೂಮಿಯನ್ನು ಏಕೆ ಕಸಿದುಕೊಳ್ಳುತ್ತೀರಾ. ಚಿಕ್ಕಬಳ್ಳಾಪುರ ಆದ ಮೇಲೆ ಬೇಕಾದಷ್ಟು ಬರಡು ಭೂಮಿ ಇದೆ. ಅಲ್ಲಿ ಬೇಕಾದರೆ ನಾನೇ 15 ಸಾವಿರ ಭೂಮಿ ಕೊಡಿಸುತ್ತೇನೆ ಬನ್ನಿ ಎಂದು ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಸಂಸದ ಡಾ.ಸಿ.ಎನ್.ಮಂಜುನಾಥ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮುರಳೀಧರ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ, ಮಾಗಡಿ ಮಂಡಲ ಅಧ್ಯಕ್ಷ ಪ್ರಸಾದ್ ಗೌಡ, ರೈತ ಮುಖಂಡರಾದ ರಾಮಯ್ಯ ಮತ್ತಿತರರು ಇದ್ದರು.
ಬಿಡದಿ ಟೌನ್ ಶಿಪ್ ವಿರೋಧದ ಹೋರಾಟಕ್ಕೆ ಬಿಜೆಪಿ ಎಂಟ್ರಿ



