ರಾಮನಗರ: ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಸಿಎಂ ಆಗುವುದರೊಂದಿಗೆ ಜಿಲ್ಲೆಯ ಅದರಲ್ಲೂ ರಾಮನಗರ ಕ್ಷೇತ್ರದ ಅಭಿವೃದ್ಧಿ ಪಥ ಮುಂದುವರೆಯಲಿದೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದರು.
ಸೋಮವಾರ ಸಂಜೆ ಶಾಸಕ ಕಚೇರಿ ಆವರಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಮನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ. ಜೊತೆಗೆ, ಈಗಾಗಲೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇದರ ನಡುವೆ ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದು, ಬಾಕಿ ಉಳಿದಿರುವ 2 ವರ್ಷಗಳಲ್ಲಿ ರಾಮನಗರ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡಲಾಗುತ್ತದೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗುತ್ತಿರುವುದು ಜನತೆಗೆ ಅತೀವ ಸಂತಸವನ್ನುAಟು ಮಾಡುತ್ತಿದೆ. ಅವರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ. ಜೊತೆಗೆ, ಅಭಿಮಾನಿಗಳಿಗೆ ಹರ್ಷ ವನ್ನುಂಟು ಮಾಡಿದೆ ಎಂದರು.
ಬಾಕಿ ಉಳಿದಿರುವ ಎರಡು ವರ್ಷದಲ್ಲಿ ರಾಮನಗರ ಕ್ಷೇತ್ರವನ್ನು ಅಭಿವೃದ್ಧಿ ಮಾ ಡುವ ಸಲುವಾಗಿ ದಿನ 24ಗಂಟೆ ಕೆಲಸ ಮಾಡಲಿದ್ದೇವೆ. ಈ ಬಗ್ಗೆ ಯಾವುದೆ ಅನುಮಾನಗಳು ಬೇಡ ಎಂದರು.
ಅರ್ಕಾವತಿ ನದಿ ಸುಂದರೀಕರಣ ವಿಚಾರದಲ್ಲಿ ಯಾವುದೆ ಗೊಂದಲ ಬೇಡ. ದರ್ಗಾ ಮತ್ತು ದೇವಾಲಯವನ್ನು ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ. ಯಾರೋ ಹೇಳಿದ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಪುನರ್ ತಿಳಿಸಿದರು.
ಬಡವರಿಗೆ ಸೂರು ನೀಡುವ ಸಲುವಾಗಿ ಈಗಾಗಲೇ ಜಾಗ ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಜೊತೆಗೆ, ಗೋಮಾಳ ಜಾಗದ ಜೊತೆಗೆ, ಖಾಸಗಿ ಸ್ಥಳವನ್ನು ಗುರುತಿಸಲಾಗಿದ್ದು, ಬಡವರಿಗೆಸೂರು ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ನೆಲೆ, ಸೂರು, ಶಿಕ್ಷಣ, ಆರೋಗ್ಯ ಉದ್ಯೋಗ ಸೇರಿದಂತೆ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರು ಒದಗಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ರಾಮನಗರವನ್ನು ಸುಂದರೀಕರಣಗೊಳಿ ಸುವ ಸಲುವಾಗಿ ಐಜೂರ್ ಸರ್ಕಲ್ ಯೋಜ ನೆಯನ್ನು ಕೈಗೆತ್ತುಕೊಂಡಿದ್ದೇವೆ. ಇದರೊಂದಿಗೆ ವಾಟರ್ ಟ್ಯಾಂಕ್ ಸರ್ಕಲ್, ಕೆಂಪೇಗೌಡ ಸರ್ಕಲ್ ಸೇರಿದಂತೆ ಬಾಕಿ ಉಳಿದಿರುವ ಎಲ್ಲಾ ಕೆಲಸವನ್ನು ತೆಗೆದುಕೊಳ್ಳುತ್ತೇವೆ ಎಂದರು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುಮಾರ್, ಮುಖಂಡರಾದ ವೀರಭದ್ರಸ್ವಾಮಿ, ಗುರುಪ್ರಸಾದ್, ರವಿ, ಮಹೇಶ್, ಶಿವಲಿಂಗಯ್ಯ ಇದ್ದರು.
ರಾಮನಗರ ಕ್ಷೇತ್ರದ ಅಭಿವೃದ್ಧಿ ಪಥ: ಶಾಸಕ ಇಕ್ಬಾಲ್ ಹುಸೇನ್



