ರಾಮನಗರ: ಬಿಡದಿ ಬಳಿ ಸಮಗ್ರ ಉಪನಗರ (ಜಿಬಿಐಟಿ)ಯೋಜನೆ ಭೂಸ್ವಾಧೀನ ವಿರೋಧಿಸಿ ಭೈರಮಂಗಲದಲ್ಲಿ ರೈತರು ನಡೆಸುತ್ತಿರುವ ಪ್ರತಿಭ ಟನಾ ಧರಣಿ ಸ್ಥಳಕ್ಕೆ ಗುರುವಾರ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡರವರು ಭೇಟಿ ನೀಡಿ ಸಾರ್ವಜನಿಕ ವಿಚಾರಣೆ(ಪಬ್ಲಿಕ್ ಹಿಯರಿಂಗ್) ನಡೆಸಿ ರೈತರ ಅಹವಾಲು ಆಲಿಸಿದರು.ಭೈರಮಂಗಲದಲ್ಲಿ ಸಂಯುಕ್ತ ಕರ್ನಾಟಕ ಹೋರಾಟ ಸಮಿತಿ ಹಾಗೂ ಭೈರಮಂಗಲ-ಕAಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ರೈತರ ಭೂ ಹಿತರಕ್ಷಣಾ ಸಂಘವು ಜಂಟಿಯಾಗಿ ಆಯೋಜಿಸಿದ್ದ ಜನತಾ ನ್ಯಾಯಪೀಠದ ಸಾರ್ವಜನಿಕ ವಿಚಾರಣೆ ಯಲ್ಲಿ ಜಸ್ಟೀಸ್ ಗೋಪಾಲಗೌಡರು ಟೌನ್ಶಿಪ್ ಯೋಜನೆ ವಿರುದ್ಧದ ರೈತರಿಂದ ಅಭಿಪ್ರಾಯ ಆಲಿಸಿ ಸಾಕ್ಷಾಧಾರ ಸಂಗ್ರಹಿಸಿದರು.
ರೈತರ ಅಭಿಪ್ರಾಯ ಪಡೆದ ಬಳಿಕ ಸಭೆಯನ್ನು ದ್ದೇಶಿಸಿ ಮಾತನಾಡಿ, ಅನಾರೋಗ್ಯದಿಂದ ಸಭೆಗೆ ಬರಲು ಕಷ್ಟವಾದರೂ ಸಹ ರೈತ ಬಾಂಧವರ ಹಿತಕ್ಕಾಗಿ ಬಂದಿರುವೆ. ಭೂಸ್ವಾಧೀನ ಪ್ರಕ್ರಿಯೆ ಸಂವಿ ಧಾನ ಮತ್ತು ಶಾಸನಬದ್ದವಾಗಿದೆಯೇ? ಕೋರ್ಟ್ ತೀರ್ಪಿಗೆ ಅನುಗುಣವಾಗಿ ಇದೆಯೇ ಎಂಬುದನ್ನು ತಿಳಿಸಲು ಬಂದಿರುವೆ. ರೈತರ ಭಯ ಹೋಗಲಾಡಿಸಿ ಧೈರ್ಯ ತುಂಬಲು ಬಂದಿರುವೆ ಎಂದರು.ಇದು ಪ್ರಜಾಪ್ರಭುತ್ವ ರಾಷ್ಟ್ರ, ಈ ದೇಶಕ್ಕೆ ರಾಜಕೀಯ ಗ್ರಂಥ ಸಂವಿಧಾನ. ರೈತರು ಒಪ್ಪಿದ ಮಾತ್ರಕ್ಕೆ ಭೂಸ್ವಾಧೀನ ಮಾಡಿಕೊಳ್ಳಲು ಸಾಧ್ಯವಿಲ್ಲ. ದೇಶದ ಸಂವಿಧಾನವನ್ನು ರಕ್ಷಣೆ ಮಾಡುತ್ತೇವೆ ಎನ್ನುವ ನಾಯಕರ ಪಕ್ಷದ ಸರಕಾರ ರಾಜ್ಯದಲ್ಲಿದೆ. ಸಂವಿಧಾನದ ರಕ್ಷಣೆಯಾಗಬೇಕಾದರೆ ಮೊದಲು ರೈತರ ರಕ್ಷಣೆ ಮಾಡಬೇಕು. ಎಲ್ಲರೂ ಸಂವಿಧಾನದ ತ್ತವಾಗಿ ಬದುಕುವ ಹಕ್ಕನ್ನು ಕಸಿಯದೆ ರಕ್ಷಿಸಬೇಕು. ರೈತರಿಗಾಗಿ ನಮ್ಮಂತವರು ಇದ್ದೇವೆ. ನಾನಿಲ್ಲಿ ಪರ-ವಿರೋಧದ ಬದಲು ನ್ಯಾಯಯುತವಾಗಿ ಮಾತನಾಡಲು ಬಂದಿರುವೆ ಎಂದರು.ಜನರನ್ನ ಹೆದರಿಸಿ ಆಡಳಿತ ನಡೆಸುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಸಂವಿಧಾನಾತ್ಮಕವಾಗಿ ಕರ್ತವ್ಯ ನಡೆಸುವುದೇ ಪ್ರಜಾಪ್ರಭುತ್ವ ಎಂಬ ಎಚ್ಚರಿಕೆ ಕೊಡಲು ಬಂದಿದ್ದೇನೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೃಷಿಯಿಂದಲೇ ಬದುಕು ಕಟ್ಟಿ ಕೊಡಿರುವ ಅನ್ನದಾತರ ಪರವಾಗಿ ಮಾತಾನಾಡಲು ಬರುವೆ. ದೇಶದಲ್ಲಿ ಶೇ. 62ರಷ್ಟು ಕೃಷಿಕರ ಭೂಮಿ ಕಸಿಯುವ ಅನ್ಯಾಯದ ಪ್ರಕ್ರಿಯೆಗಳನ್ನು ನಾವು ಹಿಮ್ಮೆಟ್ಟಿಸಿದ್ದೇವೆ ಎಂದರು.ಬಿಡದಿ ಹೋಬಳಿ ವ್ಯಾಪ್ತಿಯ 26 ಗ್ರಾಮಗಳು ನಗರ ಪ್ರದೇಶವಲ್ಲ. 2015ರಲ್ಲಿ ಈ ಪ್ರದೇಶವನ್ನು ಕೃಷಿವಲಯವೆಂದು ನಮೂದು ಮಾಡಿದ್ದೀರಿ. ಕೃಷಿ ಭೂಮಿಯನ್ನು ಪರಿವರ್ತನೆ ಮಾಡದೆ ಟೌನ್ಶಿಪ್ ಹೇಗೆ ಮಾಡುತ್ತೀರಿ?, ನಿಮ್ಮ ಪ್ಲಾನ್ ಏನು?, ಬಿಡದಿ ಸಮಗ್ರ ಉಪನಗರ ಯೋಜನೆ ಸ್ಥಾಪನೆಗೆ ಆಧಾರ ಏನು? ಪ್ಲಾನಿಂಗ್ ಆಥಾರಿಟಿ ಅಭಿವೃದ್ಧಿ ಪ್ರಾಧಿಕಾರ ಆಗಲು ಸಾಧ್ಯವೆ? ಅಭಿವೃದ್ಧಿ ಮಾಡುವುದು ನಗರದ ಪ್ರದೇಶವನ್ನೇ ಹೊರತು ಗ್ರಾಮಗಳ ಕೃಷಿ ಭೂಮಿಯನ್ನಲ್ಲ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಉಪನಗರಕ್ಕೆ ಅಧಿಸೂಚನೆ ಮಾಡಬೇಕಿತ್ತು. ಆದರೆ ಜಿಬಿಡಿಎ ಮೂಲಕ ಈ ಅಧಿಸೂಚನೆ ಮಾಡಿದ್ದೀರಿ.ಪ್ಲಾನಿಂಗ್ ಅಥಾರಿಟಿಯೇ ಬೇರೆ ಅಭಿವೃದ್ಧಿ ಪ್ರಾಧಿಕಾರವೇ ಬೇರೆ. ಗ್ರೇಟರ್ ಬೆಂಗಳೂರು ಸ್ಮಾರ್ಟ್ ಸಿಟಿ ಅಭಿವೃದ್ಧಿ ಪ್ರಾಧಿಕಾರ ರಚನೆಯೇ ಅನಧಿಕೃತ. ಏಕೆಂದರೆ ಯೋಜನಾ ಪ್ರದೇಶದ ಭೂಮಿ ಗ್ರಾಪಂಗಳ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಇಲ್ಲಿ ನಗರಾಭಿವೃದ್ಧಿ ಕಾಯ್ದೆ ಅನ್ವಯಿಸದು ಎಂದು ಗೋಪಾಲಗೌಡರು ಅಭಿಪ್ರಾಯಪಟ್ಟರು. ಸ್ಥಳೀಯ ಆಡಳಿತವು ಪ್ರಸ್ತಾವನೆಯನ್ನು ಸಿದ್ದಪಡಿಸಿ ನಗರಾಭಿವೃದ್ಧಿ ಇಲಾಖೆಗೆ ಕಳಿಸಿ ಅನುಮತಿ ಪಡೆದ ನಂತರವೇ ಅಕ್ಕಪಕ್ಕದ ಜಮೀನು ನಗರಕ್ಕೆ ಸೇರಿಕೊಳ್ಳಲು ಅವಕಾಶವಿದೆ. ಅಲ್ಲದೆ, ಸ್ಥಳೀಯ ಗ್ರಾಪಂ ಒಪ್ಪಿಗೆ ನೀಡಿದರೆ ಮಾತ್ರ ಉದ್ದೇಶಿತ ಗ್ರಾಮವನ್ನು ನಗರಕ್ಕೆ ಸೇರ್ಪಡೆ ಮಾಡಬಹುದು. ಇದೆಲ್ಲವೂ ಗ್ರಾಮೀಣ ಭಾಗಕ್ಕೆ ಸೇರುತ್ತದೆ. ಹಾಗಾಗಿ ಇಲ್ಲಿ ಉಪನಗರ ಮಾಡಲು ಬರುವುದಿಲ್ಲ ಎಂದು ಹೇಳಿದರು.
ಶಾಸನ ಬದ್ಧವಲ್ಲದ ಅಂತಿಮ ಅಧಿಸೂಚನೆ ಶೂನ್ಯ: ವಿ.ಗೋಪಾಲಗೌಡ



