ಭಾಗ್ಯನಗರ: ದೆಹಲಿಯ ಜಂತರ್ ಮಂತರ್ನಲ್ಲಿ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿಚಾರ್ಜು್ನ್ನ ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಕೆ.ಪಿ. ಜಾನಿ, ದೇಶದ ಯುವಕರಿಗೆ ಹಾಗೂ ಜನತೆಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಗಳು ಹುಸಿಯಾಗಿವೆ ಎಂದು ಆರೋಪಿಸಿದರು.ಬಾಗೇಪಲ್ಲಿ ಪಟ್ಟಣದ ಪತ್ರಕರ್ತರ ಭವನದಲ್ಲಿ ರಾಜ್ಯ ಪ್ರಚಾರ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸಕ್ಕೆ ದೊಡ್ಡ ಹೊಡೆತ ನೀಡಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ನಡೆಸಿರುವ ಕೇಂದ್ರ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ವಿದ್ಯಾರ್ಥಿಗಳ ಮೇಲೆಯೇ ದೌರ್ಜನ್ಯ ನಡೆಸುತ್ತಿದೆ ಎಂದು ಟೀಕಿಸಿದರು.ಶಾಂತಿಯುತವಾಗಿ ತಮ್ಮ ನ್ಯಾಯಸಮ್ಮತ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ಕೃತ್ಯವಾಗಿದೆ. ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕುವ ಮೂಲಕ ಕೇಂದ್ರ ಸರ್ಕಾರ ತನ್ನ ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ಪ್ರದರ್ಶಿಸಿದೆ ಎಂದು ಹೇಳಿದರು.ದೇಶದ ಯುವಜನತೆಗೆ ಪಾರದರ್ಶಕ ಆಡಳಿತ, ಉದ್ಯೋಗ ಮತ್ತು ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಆದರೆ ಇಂದು ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು ಹಾಗೂ ನಿರುದ್ಯೋಗದಿಂದ ಯುವಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಮೋದಿ ಯುವಕರಿಗೆ ಹಾಗೂ ದೇಶದ ಜನರಿಗೆ ನೀಡಿದ್ದ ಭರವಸೆಗಳು ಸಂಪೂರ್ಣವಾಗಿ ಹುಸಿಯಾಗಿವೆ ಎಂದು ಕೆ.ಪಿ. ಜಾನಿ ಆರೋಪಿಸಿದರು.ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ನೀಡಬೇಕು. ವಿದ್ಯಾರ್ಥಿಗಳ ಮೇಲೆ ದಾಖಲಿಸಿರುವ ಎಲ್ಲಾ ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯಬೇಕು. ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಚಾರ ಸಮಿತಿ ತಾಲೂಕು ಅಧ್ಯಕ್ಷ ಎನ್.ಕೋಟಪ್ಪ, ಪ್ರಚಾರ ಸಮಿತಿಯ ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ ಮಂಡೋಡಿ, ಆಸಿಫ್ ಸಾಹುಕಾರ್ ಮುಖಂಡರಾದ ಗಂಗುಲಪ್ಪ ಸುಧಾಕರ್, ಊದುವಾರದಲ್ಲಿ ಗಂಗುಲಪ್ಪ ನಾಗರತ್ನಮ್ಮ, ಆನಂದರೆಡ್ಡಿ, ಆದಿನಾರಾಯಣಪ್ಪ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.



