ಮಧುಗಿರಿ: ಜೀವನದ ರೀತಿಯನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕಿದೆ ಎಂದು ಮಾಜಿ ಸಚಿವ, ಶಾಸಕ ಕೆ.ಎನ್. ರಾಜಣ್ಣ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿರುವ ಕೆ.ಎನ್. ರಾಜಣ್ಣನವರ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಕನ್ನಡ ಬಾಷೆಯಲ್ಲಿ ಶೇ. 100 ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೆರವು ನೀಡಿದವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಮ್ಮಿಸುವ ಕೆಲಸ ಶಿಕ್ಷಕರಿಂದ ಆಗಬೇಕಾಗಿದೆ. ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ದಲ್ಲ,ಯಾವುದೇ ಕಾರಣಕ್ಕೂ ಮಕ್ಕಳು ಶಾಲೆಗೆ ಗೈರು ಹಾಜರಾಗಬಾರದು, ಅದೇ ರೀತಿ ವಿದ್ಯಾಭ್ಯಾಸದಲ್ಲಿ ಕುಂಠಿತ ಆಗದಂತೆ ಪೋಷಕರು ನೋಡಿಕೊಳ್ಳಬೇಕು, ಗುರು ಪರಂಪರೆ ಮತ್ತು ಶಿಷ್ಯ ಪರಂಪರೆ ನಿರಂತರವಾಗಿ ಇರಬೇಕು. ವಿದ್ಯೆಯ ಮಹತ್ವವನ್ನು ಮಕ್ಕಳಿಗೆ ತಿಳಿಸುವುದು ಅಗತ್ಯ ಎಂದರು.ತಾಲ್ಲೂಕಿನಲ್ಲಿ ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ನೀಡಲಾಗುತ್ತಿದೆ, ಉಚಿತ ನೋಟ್ ಬುಕ್, ಸಮವಸ್ತ್ರ, ಬಸ್ ವ್ಯವಸ್ಥೆ. ಮಧ್ಯಾಹ್ನದ ಬಿಸಿ ಊಟ ಯೋಜನೆ ಕಲ್ಪಿಸಲಾಗಿದ್ದು, ಅದನ್ನು ಉಪಯೋಗಿಸಿಕೊಂಡು ಮಕ್ಕಳು ಗುಣ ಮಟ್ಟದ ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು ಎಂದರು.ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕೆ.ಪಿ.ನಟರಾಜು ಮಾತನಾಡಿ, ಸರ್ಕಾರ ಕೆಪಿಎಸ್ ಶಾಲೆಗಳಲ್ಲಿ ಈಗಿರುವ ಶಾಲೆಗಳನ್ನು ವಿಲೀನಗೊಳಿಸಿ ಕೆಪಿಎಸ್ ಶಾಲೆಗಳನ್ನು ನಿರ್ಮಾಣ ಮಾಡುತ್ತಿರುವುದರಿಂದ ಸರ್ಕಾರಿ ಶಾಲೆಗಳು ಸಂಪೂರ್ಣವಾಗಿ ಇಂಗ್ಲೀಷ್ ಮಾಧ್ಯಮದ ಶಾಲೆಗಳಾಗಿ ಬದಲಾಯಿಸಲಾಗುತ್ತಿದೆ. ಇದರಿಂದ ಕಾಲಗತಿಯಲ್ಲಿ ಕನ್ನಡ ಕಣ್ಮರೆಯಾಗುವ ಆತಂಕವಿದೆ,ಈ ಹಿಂದೆ ಕುವೆಂಪುರಂತಹ ಮಹನೀಯರು ಕಟ್ಟಿದ ಕನ್ನಡ ಮಾಧ್ಯಮದ ಶಾಲಾ ಶಿಕ್ಷಣವನ್ನು ಕೆಪಿಎಸ್ ಶಾಲೆಗಳ ಮೂಲಕ ಧ್ವಂಸಗೊಳಿಸಲಾಗುತ್ತಿದೆ ಎಂದು ನೊಂದು ಕೊಂಡರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ಗೆ 110 ವರ್ಷಗಳ ಇತಿಹಾಸವಿದೆ. ಕನ್ನಡಿಗರಿಗೆ ಶಾಸಕ ಕೆ.ಎನ್. ರಾಜಣ್ಣರವರಂತಹ ಕೊಡುಗೈ ದಾನಿಗಳಿದ್ದಾರೆ. ಅವರಲ್ಲಿ ಸೇವಾ ಮನೋಭಾವವನ್ನು ಕಾಣಬಹುದು. ಇಂತಹ ಸೇವಾ ಮನೋಭಾವದಿಂದ ಕನ್ನಡಿಗರನ್ನು ಉಳಿಸಬಹುದು. ವಿದ್ಯಾರ್ಥಿಗಳು ಕೇವಲ ಅಂಕಗಳಿಕೆಗೆ ಸೀಮಿತವಾಗದೇ ಸಂಸ್ಕಾರ ಮತ್ತು ಸಂಸ್ಕöÈತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ನಂದಿನಿ, ಹಿರಿಯ ಸಾಹಿತಿ ಪ್ರೊ. ಮ.ಲ.ನ.ಮೂರ್ತಿ, ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಎಂ.ಎಸ್ ಶಂಕರನಾರಾಯಣ, ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ, ತಾ.ಪಂ. ಇ.ಓ.ಬಿ.ಕೆ.ಉತ್ತಮ್, ಪುರಸಭೆ ಮುಖ್ಯಾಧಿಕಾರಿ ಸುರೇಶ್, ವಲಯ ಅರಣ್ಯ ಅಧಿಕಾರಿ ಸುರೇಶ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ.ರಮೇಶ್, ಕಸಾಪ ತಾಲೂಕು ಘಟಕದ ಅಧ್ಯಕ್ಷೆ ಸಹನಾ ನಾಗೇಶ್, ನಿವೃತ್ತ ಪ್ರೊಫೆಸರ್ ಕೃಷ್ಣಪ್ಪ, ನಿರ್ದೇಶಕರು ಗಳಾದ ಎಂ.ವಿ. ರುದ್ರರಾಧ್ಯ, ಉಮಾ ಮಲ್ಲೇಶ್ ಕುಮಾರ್, ಗಾಯತ್ರಿ ನಾರಾಯಣ್, ಎಂ.ವಿ.ಮೂಡ್ಲಗಿರೀಶ್, ಎಂ.ವೆಂಕಟರಮಣಪ್ಪ, ನಂಜಮ್ಮ ಸಿದ್ದಪ್ಪ ಸೇರಿದಂತೆ ಇತರರಿದ್ದರು.
ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ: ಶಾಸಕ ಕೆ.ಎನ್.ರಾಜಣ್ಣ



