ಕೋಲಾರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಬಾಕಿ ಉಳಿದಿರುವ ಸಮಸ್ಯೆಗಳ ಶೀಘ್ರ ಇತ್ಯರ್ಥದ ಕುರಿತು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇಂದು ಅವರು ಬೆಂಗಳೂರು ವಿಭಾಗದ ಎಲ್ಲಾ ಜಿಲ್ಲೆಗಳ ಹಾಗೂ ತಾಲ್ಲೂಕುಗಳ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಆನ್ಲೈನ್ ಪರಿಶೀಲನಾ ಸಭೆಯಲ್ಲಿ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿ ಮಹತ್ವದ ನಿರ್ದೇಶನಗಳನ್ನು ನೀಡಿದರು.ಸಭೆಯಲ್ಲಿ ಪ್ರಮುಖವಾಗಿ ‘ಗೃಹಲಕ್ಷ್ಮಿ’ ಯೋಜನೆಯಡಿ ಮೃತಪಟ್ಟಿರುವ ಫಲಾನುಭವಿಗಳ ಖಾತೆಗೆ ಜಮಾವಾಗಿ, ಮರಳಿ ಬ್ಯಾಂಕ್ಗೆ ಬಂದಿರುವ ಕೋಟ್ಯಾಂತರ ರೂಪಾಯಿ ಹಣದ ಕುರಿತು ಚರ್ಚೆ ನಡೆಸಲಾಯಿತು. ಮೃತಪಟ್ಟವರ ಕಾನೂನುಬದ್ಧ ವಾರಸುದಾರರಿಗೆ ಅಥವಾ ನಾಮಿನಿಗಳಿಗೆ ಬಾಕಿ ಇರುವ ಹಣವನ್ನು ತಕ್ಷಣವೇ ಪಾವತಿಸಲು ಕ್ರಮ ಕೈಗೊಳ್ಳಬೇಕು ಮತ್ತು ಯಾವುದೇ ಕಾರಣಕ್ಕೂ ಫಲಾನುಭವಿಗಳ ಕುಟುಂಬದವರನ್ನು ಅಲೆದಾಡಿಸಬಾರದು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಅವರು ಎಚ್ಚರಿಕೆ ನೀಡಿದರು. ಇದರ ಜೊತೆಗೆ, ಆದಾಯ ತೆರಿಗೆ ಮತ್ತು ಜಿಎಸ್ಟಿ ಪಾವತಿಸುವವರು ಈ ಯೋಜನೆಗೆ ಅರ್ಹರಲ್ಲದ ಕಾರಣ, ಅಂತಹವರ ಪಟ್ಟಿಯನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದರು.ಇದೇ ವೇಳೆ ಮುಂಬರುವ ಆಗಸ್ಟ್ 19 ರಂದು ರಾಜ್ಯದ ಪ್ರತಿಯೊಂದು ಗ್ರಾಮ
ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ದೇಶನ ನೀಡಲಾಯಿತು. ಕನಿಷ್ಠ್ಠ 11 ಗಿಡಗಳನ್ನು ನೆಡುವ ಮೂಲಕ ‘ವೃಕ್ಷಾರೋಪಣ’ ಕಾರ್ಯಕ್ರಮ ಹಾಗೂ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕವಾಗಿ ಸಬಲರಾದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸುವ ಜವಾಬ್ದಾರಿಯನ್ನು ಎಲ್ಲಾ ತಾಲ್ಲೂಕು ಅಧ್ಯಕ್ಷರಿಗೆ ವಹಿಸಲಾಯಿತು. ಅಲ್ಲದೆ, ಗೃಹಜ್ಯೋತಿ ಯೋಜನೆಗೆ ಸಂಬAಧಿಸಿದAತೆ ಮೀಟರ್ ರೀಡರ್ಗಳೊಂದಿಗೆ ಸಮನ್ವಯ ಸಾಧಿಸಿ, ಮನೆ ಮನೆಗೆ ತೆರಳಿ ಪರಿಶೀಲನಾ ಕಾರ್ಯವನ್ನು ಚುರುಕು ಗೊಳಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಯಿತು.ಈ ಸಭೆಯಲ್ಲಿ ಕೋಲಾರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ವೈ.ಶಿವಕುಮಾರ್, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಪಾರ್ಥಸಾರಥಿ, ಮಾಲೂರು ತಾಲ್ಲೂಕು ಅಧ್ಯಕ್ಷರಾದ ಅಂಜಿನಪ್ಪ, ಜಿಲ್ಲಾ ಬೆಸ್ಕಾಂ ಅಧಿಕಾರಿಗಳಾದ ಶುಭ, ಕವಿತ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ನಾರಾಯಣಸ್ವಾಮಿ ಸೇರಿದಂತೆ ಬೆಂಗಳೂರು ವಿಭಾಗದ ಇತರ ತಾಲ್ಲೂಕುಗಳ ಅಧ್ಯಕ್ಷರು, ಲೀಡ್ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.
ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಮಾಡಿ-ಹೆಚ್.ಎಂ. ರೇವಣ್ಣ ಸೂಚನೆ



