ಬೆಂಗಳೂರು: ಕರ್ನಾಟಕದ ರಾಜಕೀಯ ರಣರಂಗಕ್ಕೆ ಮತ್ತೊಂದು ಹೊಸ ರಾಜಕೀಯ ಪಕ್ಷ ಅಧಿಕೃತವಾಗಿ ಪದಾರ್ಪಣೆ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ನಂತಹ ಪ್ರಬಲ ಪಕ್ಷಗಳ ನಡುವೆ, ಅತಿ ಹಿಂದುಳಿದ ವರ್ಗಗಳ ದ್ವನಿಯನ್ನು ಶಾಸನಸಭೆಯಲ್ಲಿ ಮೊಳಗಿಸುವ ಮಹತ್ವಾಕಾಂಕ್ಷೆಯೊಂದಿಗೆ ‘ವಿಕಾಸಶೀಲ ಇನ್ಸಾನ್ ಪಾರ್ಟಿ’ ತನ್ನ ರಾಜಕೀಯ ಹೋರಾಟದ ರಣಕಹಳೆ ಮೊಳಗಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಯಾವುದೇ ಸರ್ಕಾರ ರಚನೆಯಾಗಬೇಕಾ ದರೂ ತಮ್ಮ ಪಕ್ಷದ ಬೆಂಬಲ ಅನಿವಾರ್ಯ ವಾಗಲಿದೆ ಎಂದು ವಿಐಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಪಕ್ಷದ ಮುಂದಿನ ರೂಪುರೇಷೆಗಳು ಹಾಗೂ ಉದ್ದೇಶಗಳನ್ನು ವಿವರಿಸಲು ಆಯೋಜಿಸಿದ್ದ ಪತ್ರಿಕಾಗೋಷ್ಠಿ ಹಾಗೂ ಸಭೆಯಲ್ಲಿ ಮಾತನಾಡಿದ ವಿಐಪಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಮೋಹನ್ ಕುಮಾರ್ ಬಿ.ಕೆ, ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯ, ರಾಜಕೀಯ ಪ್ರಾತಿನಿಧ್ಯದ ಕೊರತೆ ಮತ್ತು ಮುಂದಿನ ಚುನಾವಣಾ ರಣತಂತ್ರಗಳ ಕುರಿತು ಸುದೀರ್ಘವಾಗಿ ಬೆಳಕು ಚೆಲ್ಲಿದರು. ಮಹರ್ಷಿ ವಾಲ್ಮೀಕಿ, ಅಂಬಿಗರ ಚೌಡಯ್ಯ, ಬಸವಣ್ಣ, ಬುದ್ಧ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳಡಿ ಪಕ್ಷವನ್ನು ಮುನ್ನಡೆಸಲಾಗುವುದು ಎಂದು ಅವರು ಘೋಷಿಸಿದರು.70 ಲಕ್ಷ ಜನಸಂಖ್ಯೆ, ಶೂನ್ಯ ಶಾಸಕರು: “ರಾಜ್ಯದಲ್ಲಿ ಕೋಲಿ, ಗಂಗಾಮತ ಹಾಗೂ ಬೆಸ್ತ ಸಮಾಜದವರೇ ನಮ್ಮ ಪಕ್ಷದ ಮೂಲ ಮತದಾರರು. ನಮ್ಮ ಸಮಾಜದ ಜನಸಂಖ್ಯೆ ರಾಜ್ಯದಲ್ಲಿ ಬರೋಬ್ಬರಿ 60 ರಿಂದ 70 ಲಕ್ಷದಷ್ಟಿದೆ. ಆದರೆ, ಇಷ್ಟು ದೊಡ್ಡ ಮಟ್ಟದ ಜನಸಂಖ್ಯೆ ಇದ್ದರೂ, ಶಾಸನಸಭೆಯಲ್ಲಿ ನಮ್ಮ ಸಮಾಜದ ಒಬ್ಬನೇ ಒಬ್ಬ ಶಾಸಕನಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿ” ಎಂದು ಮೋಹನ್ ಕುಮಾರ್ ಬಿ.ಕೆ ಬೇಸರ ವ್ಯಕ್ತಪಡಿಸಿದರು.
ಕಳೆದ ಹಲವಾರು ದಶಕಗಳಿಂದ ಮೂರು ಪ್ರಮುಖ ರಾಜಕೀಯ ಪಕ್ಷಗಳು ಹಿಂದುಳಿದ ಸಮಾಜಗಳನ್ನು ಕೇವಲ ‘ವೋಟ್ ಬ್ಯಾಂಕ್’ ಆಗಿ ಬಳಸಿಕೊಂಡು, ಅಧಿಕಾರ ಸಿಕ್ಕ ನಂತರ ನಿರ್ಲಕ್ಷ್ಯ ಮಾಡುತ್ತಿವೆ. ಪ್ರಬಲ ಸಮುದಾಯಗಳು ಮಾತ್ರ ಅಧಿಕಾರದ ಪಾಲು ಹಂಚಿಕೊಳ್ಳುತ್ತಿದ್ದು, ಅತಿ ಹಿಂದುಳಿದ ಹಾಗೂ ಅಲೆಮಾರಿ ಸಮಾಜಗಳನ್ನು ಮೂಲೆಗುಂಪು ಮಾಡಲಾಗಿದೆ ಎಂದು ಮೋಹನ್ ಕುಮಾರ್ ಬಿ.ಕೆ ಅವರು ಆರೋಪಿಸಿದರು.`ಅಹಿಂದ’ ಹೆಸರಿನಲ್ಲಿ ಅಧಿಕಾರ ಹಿಡಿದವರ ವಿರುದ್ಧ ವಾಗ್ದಾಳಿರಾಜ್ಯದಲ್ಲಿ ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಹೆಸರಿನಲ್ಲಿ ರಾಜಕಾರಣ ಮಾಡಿದ ನಾಯಕರ ವಿರುದ್ಧ ವಿಐಪಿ ಮುಖಂಡರು ತೀವ್ರ ವಾಗ್ದಾಳಿ ನಡೆಸಿದರು. “ಅಹಿಂದ ಎಂದು ಹೆಸರಿಟ್ಟುಕೊಂಡು, ಹಿಂದುಳಿದವರ ಮತಗಳನ್ನು ಪಡೆದು ಎರಡು ಬಾರಿ ಮುಖ್ಯಮಂತ್ರಿಯಾದವರು, ಅಧಿಕಾರಕ್ಕೆ ಬಂದ ಮೇಲೆ ಕೇವಲ ತಮ್ಮ ಜಾತಿಗೆ ಮಾತ್ರ ಸೀಮಿತರಾದರು. ರಾಜ್ಯದಲ್ಲಿರುವ 154 ಹಿಂದುಳಿದ ಸಮಾಜಗಳು ಹಾಗೂ 46 ಅಲೆಮಾರಿ ಸಮಾಜಗಳಿಗೆ ಅವರು ಮಾಡಿದ್ದೇನು?, ಈ ಸಣ್ಣಪುಟ್ಟ ಸಮಾಜಗಳಿಗೆ ಎಷ್ಟು ಪ್ರಾಧಿಕಾರಗಳನ್ನು ರಚಿಸಿದ್ದಾರೆ, ಎಷ್ಟು ಅನುದಾನ ನೀಡಿದ್ದಾರೆ” ಎಂದು ಅವರು ನೇರವಾಗಿ ಪ್ರಶ್ನಿಸಿದರು. ಅಹಿಂದ ನಾಯಕರು ಅಧಿಕಾರದಿಂದ ಕೆಳಗಿಳಿಯುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ನೋವಾಗುತ್ತಿರಬಹುದು, ಆದರೆ ದಶಕಗಳಿಂದ ಅಧಿಕಾರ ವಂಚಿತರಾದ ನೂರಾರು ಸಮಾಜಗಳ ನೋವು ಅದಕ್ಕಿಂತ ದೊಡ್ಡದು ಎಂದು ಮೋಹನ್ ಕುಮಾರ್ ಬಿ.ಕೆ ಚಾಟಿ ಬೀಸಿದರು.
70 ಕ್ಷೇತ್ರಗಳ ಮೇಲೆ ಕಣ್ಣು:ಮುಂಬರುವ ಚುನಾವಣೆಗಳಲ್ಲಿ ಪ್ರಬಲ ಪೈಪೋಟಿ ನೀಡಲು ವಿಐಪಿ ಸಜ್ಜಾಗಿದೆ. “ಮೀನು ಮಾರುವವರು, ಬೋಟ್ ನಡೆಸುವವರು, ಬಟ್ಟೆ ಒಗೆಯುವ ಅಗಸರು, ನೇಕಾರರು ಮತ್ತು ಗೊಲ್ಲರ ಮಕ್ಕಳು ವಿಧಾನಸೌಧದ ಮೆಟ್ಟಿಲೇರಬಾರದೇ” ಎಂದು ಖಾರವಾಗಿ ಪ್ರಶ್ನಿಸಿದ ಮುಖಂಡರು, ಇತರರ ಮನೆ ಬಾಗಿಲಿಗೆ ಹೋಗಿ ಟಿಕೆಟ್ ಬೇಡುವ ಬದಲು ತಮ್ಮದೇ ಸ್ವಂತ ಶಕ್ತಿಯ ಮೇಲೆ ಚುನಾವಣೆ ಎದುರಿಸುವುದಾಗಿ ಮೋಹನ್ ಕುಮಾರ್ ಬಿ.ಕೆ ಸ್ಪಷ್ಟಪಡಿಸಿದರು.”ರಾಜ್ಯದಲ್ಲಿ ಅತಿ ಹಿಂದುಳಿದ ಹಾಗೂ ಸಣ್ಣಪುಟ್ಟ ಸಮಾಜಗಳ ಸುಮಾರು ಒಂದೂವರೆಯಿAದ ಎರಡು ಕೋಟಿ ಮತದಾರರಿದ್ದಾರೆ. ನಾವೆಲ್ಲರೂ ಒಗ್ಗೂಡಿದರೆ ಕನಿಷ್ಠ 70 ರಿಂದ 80 ಕ್ಷೇತ್ರಗಳಲ್ಲಿ ಸುಲಭವಾಗಿ ಗೆಲ್ಲಬಹುದು. ಪ್ರಸ್ತುತ ನಾವು ‘ಮಹಾಗಟಬಂಧನ್’ (ಮೈತ್ರಿ) ಭಾಗವಾಗಿದ್ದು, ಕಾಂಗ್ರೆಸ್ ಜೊತೆಗಿದ್ದೇವೆ. ನಮ್ಮ ಜನಸಂಖ್ಯೆ ಮತ್ತು ಮತಗಳ ಆಧಾರದ ಮೇಲೆ ನಮಗೆ ತಕ್ಕ ಪಾಲು ನೀಡಬೇಕು. ಒಂದು ವೇಳೆ ಟಿಕೆಟ್ ಹಂಚಿಕೆಯಲ್ಲಿ ತಾರತಮ್ಯವಾದರೆ, ನಾವು ಪ್ರಬಲವಾಗಿರುವ 60 ರಿಂದ 70 ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ. ಅದರಲ್ಲಿ 10 ರಿಂದ 20 ಕ್ಷೇತ್ರಗಳಲ್ಲಿ ನಾವು ಗೆದ್ದು ವಿಧಾನಸೌಧ ಪ್ರವೇಶಿಸುವುದು ನಿಶ್ಚಿತ. ನಾವು ಗೆಲ್ಲದಿದ್ದರೂ, ಇತರರನ್ನು ಸೋಲಿಸುವ 100% ಸಾಮರ್ಥ್ಯ ನಮ್ಮ ಬಳಿ ಇದೆ” ಎಂದು ಅವರು ಇತರ ರಾಜಕೀಯ ಪಕ್ಷಗಳಿಗೆ ಮೋಹನ್ ಕುಮಾರ್ ಬಿ.ಕೆ ಎಚ್ಚರಿಕೆ ರವಾನಿಸಿದರು.
ಕರ್ನಾಟಕ ರಾಜಕಾರಣಕ್ಕೆ `ವಿಕಾಸಶೀಲ ಇನ್ಸಾನ್ ಪಾರ್ಟಿ’ (VIP) ಎಂಟ್ರಿ ಜೂನ್ 7ರಂದು ಅಶೋಕ ಹೋಟೆಲ್ನಲ್ಲಿ ಬೃಹತ್ ಸಮಾವೇಶ



