ಭಾರತೀಯ ಕ್ರಿಕೆಟ್ನ ಅತ್ಯಂತ ಶಾಂತ, ಸಂಯಮ ಹಾಗೂ ನಂಬಿಕಸ್ಥ ಬ್ಯಾಟರ್ಗಳಲ್ಲಿ ಒಬ್ಬರಾದ ಅಜಿಂಕ್ಯ ರಹಾನೆ ಅವರು ಇಂದು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್ನ ಒಂದು ಸುವರ್ಣ ಅಧ್ಯಾಯ ಅಂತ್ಯಗೊಂಡಂತಾಗಿದೆ.ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿರುವ ರಹಾನೆ, ಸಾಮಾನ್ಯ ಹಿನ್ನೆಲೆಯಿಂದ ಬಂದು ಜಗತ್ತಿನ ಬೃಹತ್ ವೇದಿಕೆಗಳಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವ ಹಂತಕ್ಕೆ ಬೆಳೆದಿದ್ದು ನನ್ನ ಪಾಲಿಗೆ ಸಿಕ್ಕ ಅತ್ಯಂತ ದೊಡ್ಡ ಸೌಭಾಗ್ಯ. ನನ್ನನ್ನು ಇಂದು ಈ ಮಟ್ಟದ ವ್ಯಕ್ತಿಯನ್ನಾಗಿ ರೂಪಿಸಲು ಮೌಲ್ಯಯುತ ಕೊಡುಗೆ ನೀಡಿದ ನನ್ನ ಎಲ್ಲಾ ತರಬೇತುದಾರರು, ಮಾರ್ಗದರ್ಶಕರು, ಸಹ ಆಟಗಾರರು ಮತ್ತು ಪೋಷಕ ಸಿಬ್ಬಂದಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.ರಹಾನೆ ವೃತ್ತಿಜೀವನ:ಭಾರತ ತಂಡದ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿದ್ದ ರಹಾನೆ, ಮೂರೂ ಮಾದರಿಯ ಕ್ರಿಕೆಟ್ನಲ್ಲಿ ದೇಶಕ್ಕಾಗಿ ಅದ್ಭುತ ಕೊಡುಗೆ ನೀಡಿದ್ದಾರೆ. ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಅಂಕಿ-ಅಂಶಗಳು ಹೀಗಿವೆ:ಮೆಲ್ಬೋರ್ನ್ ವೀರಾವೇಶ: 2020-21ರ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ, ಅಡಿಲೇಡ್ ಟೆಸ್ಟ್ನ ಹೀನಾಯ ಸೋಲಿನ ಬಳಿಕ ತಂಡ ಮುನ್ನಡೆಸಿದ ರಹಾನೆ, ಮೆಲ್ಬೋರ್ನ್ನಲ್ಲಿ ಶತಕ ಸಿಡಿಸಿ ಭಾರತ ಐತಿಹಾಸಿಕ ಗೆಲುವು ದಾಖಲಿಸಲು ಕಾರಣರಾದರು.ರಹಾನೆ ನಾಯಕತ್ವ ವಹಿಸಿದ ಯಾವುದೇ ಟೆಸ್ಟ್ ಪಂದ್ಯದಲ್ಲೂ ಭಾರತ ಸೋಲನ್ನೇ ಕಂಡಿಲ್ಲ. ಗಾಯಾಳುಗಳಿಂದ ಜರ್ಜರಿತವಾಗಿದ್ದ ಯುವ ಭಾರತ ತಂಡವನ್ನು ಮುನ್ನಡೆಸಿ ಆಸ್ಟ್ರೇಲಿಯಾ ನೆಲದಲ್ಲೇ ಸರಣಿ ಗೆದ್ದದ್ದು ಅವರ ಶ್ರೇಷ್ಠ ನಾಯಕತ್ವಕ್ಕೆ ಹಿಡಿದ ಕನ್ನಡಿ. ಇಂಗ್ಲೆಂಡ್, ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ಕಠಿಣ ಪಿಚ್ಗಳಲ್ಲಿ ಅಜಿಂಕ್ಯ ರಹಾನೆ ಬಾರಿಸಿದ ರನ್ಗಳಿಂದ ಅದೆಷ್ಟೋ ಬಾರಿ ಭಾರತ ತಂಡ ಗೆಲುವು ಸಾಧಿಸಿದೆ.2023ರ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಬಾರಿಗೆ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದ 38 ವರ್ಷದ ಅಜಿಂಕ್ಯ ರಹಾನೆ, ಇದೀಗ ಅಂತರರಾಷ್ಟ್ರೀಯ ವೇದಿಕೆಯಿಂದ ಅಧಿಕೃತವಾಗಿ ನಿರ್ಗಮಿಸಿದ್ದಾರೆ. ಈ ಮೂಲಕ 15 ವರ್ಷಗಳ ತಮ್ಮ ಇಂಟರ್ನ್ಯಾಷನಲ್ ಕ್ರಿಕೆಟ್ ಕೆರಿಯರ್ ಅನ್ನು ಅಂತ್ಯಗೊಳಿಸಿದ್ದಾರೆ.



