ಗುವಾಹಾಟಿ: ಅಸ್ಸಾಂ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತೀವ್ರಗೊಂಡಿದ್ದು, ಏಳು ಜಿಲ್ಲೆಗಳ 3 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕೃತ ಮಾಹಿತಿಯ ಪ್ರಕಾರ ಪ್ರವಾಹದಿಂದಾಗಿ ಈವರೆಗೆ ಮೃತಪಟ್ಟವರ ಸಂಖ್ಯೆ 78 ಕ್ಕೆ ಏರಿಕೆಯಾಗಿದೆ. ನೂರಾರು ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿದ್ದು 21,500 ಹೆಕ್ಟೇರ್ಗೂ ಹೆಚ್ಚು ಬೆಳೆ ಹಾನಿಯಾಗಿದೆ.ಅಧಿಕೃತ ವರದಿಗಳ ಪ್ರಕಾರ ಶಿವಸಾಗರ, ಚರೈಡಿಯೊ, ಗೋಲಾಘಾಟ್, ಜೋರ್ಹತ್, ನಾಗಾಂವ್, ವಿಶ್ವನಾಥ್ ಮತ್ತು ಕಾಮರೂಪ್ ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಒಟ್ಟು 21 ಕಂದಾಯ ವೃತ್ತಗಳು ಮತ್ತು 551 ಗ್ರಾಮಗಳು ಹಾನಿಗೊಳಗಾಗಿದ್ದು, ಸುಮಾರು 3,00,031 ಜನರು ಕಷ್ಟನಷ್ಟಗಳನ್ನು ಎದುರಿಸುತ್ತಿದ್ದಾರೆ.ರಾಜ್ಯಾದ್ಯಂತ 21,523.08 ಹೆಕ್ಟೇರ್ ಕೃಷಿ ಭೂಮಿ ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿದೆ. ಇತ್ತೀಚಿನ ಪ್ರವಾಹ ಸಂಬAಧಿತ ಘಟನೆಗಳಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಶಿವಸಾಗರದಲ್ಲಿ ಇಬ್ಬರು ಹಾಗೂ ಗೋಲಾಘಾಟ್ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಈ ವರ್ಷ ಅಸ್ಸಾಂನಲ್ಲಿ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 78 ಕ್ಕೆ ಏರಿದೆ.
ಕಾಮರೂಪ್ ಮೆಟ್ರೋ ಜಿಲ್ಲೆಯಲ್ಲಿ ನಗರ ಪ್ರವಾಹ ವರದಿಯಾಗಿದೆ. ಮೂರು ಕಂದಾಯ ವೃತ್ತಗಳು ಸೇರಿದಂತೆ ಪದುಂಬರಿ, ಬೊರಗಾಂವ್, ಎಕ್ಸೆಲ್ಕೇರ್ ಆಸ್ಪತ್ರೆ, ಲಚಿತ್ ನಗರ್, ಝೂ ರೋಡ್, ರುಕ್ಮಿಣಿಗಾಂವ್, ಅನಿಲ್ ನಗರ್, ನಬೀನ್ ನಗರ್, ಸತ್ಗಾಂವ್, ಬೆಹಾರ್ಬಾರಿ, ಹತಿಗಾಂವ್, ವೈರ್ಲೆಸ್, ಜೊರಾಬಾತ್ ಮತ್ತು ಜುಬೀನ್ ಕ್ಷೇತ್ರ ಹತ್ತಿರದ ಕಮರಕುಚಿ ಮುಂತಾದ ಪ್ರದೇಶಗಳು ಜಲಾವೃತಗೊಂಡಿವೆ. ಆದರೆ, ಇಲ್ಲಿ ಯಾವುದೇ ಜನಸಂಖ್ಯೆಗೆ ನೇರ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅತ್ಯಂತ ಗಂಭೀರವಾಗಿ ಹಾನಿಗೊಳಗಾದ ಜಿಲ್ಲೆಗಳಿಗಾಗಿ ರಾಜ್ಯ ಸರ್ಕಾರವು ಆಹಾರ ಧಾನ್ಯ, ಬಟ್ಟೆ ಮತ್ತು ಇತರ ಅಗತ್ಯ ವಸ್ತುಗಳನ್ನು ಒಳಗೊಂಡ 30 ಟ್ರಕ್ ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ. ಅಸ್ಸಾಂ ಗಣ ಪರಿಷತ್ನ ಸಂಸದರು, ಶಾಸಕರು, ಹಿರಿಯ ನಾಯಕರು ಮತ್ತು ಅಸ್ಸಾಂ ಪೊಲೀಸ್ ಸಿಬ್ಬಂದಿ ಈ ಪರಿಹಾರ ವಾಹನಗಳೊಂದಿಗೆ ತೆರಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಸ್ಸಾಂ ಸಚಿವ ಬೋರಾ, “ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಸರ್ಕಾರವು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಣಾಮಕಾರಿ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಸಂಕಷ್ಟದಲ್ಲಿರುವ ಪ್ರತಿ ಕುಟುಂಬಕ್ಕೆ 15,000 ರೂ. ನೆರವು ನೀಡಲಾಗುತ್ತಿದೆ. ಉಚಿತ ಆಹಾರ, ಬಟ್ಟೆ ಮತ್ತು ದಿನಬಳಕೆಯ ವಸ್ತುಗಳನ್ನು ವಿತರಿಸಲಾಗುತ್ತಿದ್ದು, ಸಂತ್ರಸ್ತರಿಗೆ ಬೆಂಬಲವಾಗಿ ಸರ್ಕಾರಿ ತಂಡಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿವೆ ಎಂದು ತಿಳಿಸಿದ್ದಾರೆ.
ಪ್ರವಾಹಕ್ಕೆ ಅಸ್ಸಾಂ ತತ್ತರ 78ಕ್ಕೇರಿದ ಮೃತರ ಸಂಖ್ಯೆ | ಬೆಳೆ ಹಾನಿ | ನೂರಾರು ಗ್ರಾಮಗಳು ಮುಳುಗಡೆ



