ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್ವೆಲ್ತ್ ಗೇಮ್ಸ್ನ 6ನೇ ದಿನದಂದು ಭಾರತೀಯ ಕ್ರೀಡಾಪಟುಗಳು ಒಟ್ಟು ಮೂರು ಪದಕಗಳನ್ನು ಗೆದ್ದಿದ್ದಾರೆ. ಈ ಮೂರು ಪದಕಗಳು ಟ್ರಾ÷್ಯಕ್ ಅಂಡ್ ಫೀಲ್ಡ್ (ಅಥ್ಲೆಟಿಕ್ಸ್ ಮತ್ತು ಪ್ಯಾರಾ ಅಥ್ಲೆಟಿಕ್ಸ್) ವಿಭಾಗದಲ್ಲೇ ಬಂದಿರುವುದು ವಿಶೇಷ. ಪ್ಯಾರಾ ಟ್ರಾ÷್ಯಕ್ನಲ್ಲಿ ದಿಲೀಪ್ ಮಹಾದು ಗಾವಿತ್ ಚಿನ್ನ ಗೆದ್ದರೆ, ಮೊಹಮ್ಮದ್ ಬಾಸಿಲ್ಗೆ ಬೆಳ್ಳಿ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಇನ್ನು ಲಾಂಗ್ ಜಂಪ್ನಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪುರುಷರ 100 ಮೀಟರ್ (ಖಿ47 ವಿಭಾಗ) ಓಟದ ಸ್ಪರ್ಧೆಯಲ್ಲಿ. ಭಾರತದ ಹೆಮ್ಮೆಯ ಪ್ಯಾರಾ ಅಥ್ಲೀಟ್ ದಿಲೀಪ್ ಮಹಾದು ಗಾವಿತ್ ಕೇವಲ 10.71 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಇದು ಕೇವಲ ಚಿನ್ನದ ಪದಕವಲ್ಲ, ಬದಲಿಗೆ ಹೊಸ ಕಾಮನ್ವೆಲ್ತ್ ಗೇಮ್ಸ್ ದಾಖಲೆಯಾಗಿದೆ!
ಏಕೆಂದರೆ ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲೇ ಈ ನಿರ್ದಿಷ್ಟ ವಿಭಾಗದಲ್ಲಿ ಇದುವರೆಗೆ ಯಾವುದೇ ಕ್ರೀಡಾಪಟು 10.71 ಸೆಕೆಂಡುಗಳಷ್ಟು ವೇಗವಾಗಿ ಓಡಿ ಗುರಿ ತಲುಪಿಲ್ಲ.
ಇದೇ ರೇಸ್ನಲ್ಲಿ ಭಾರತದ ಮತ್ತೊಬ್ಬ ಪ್ರತಿಭಾವಂತ ಓಟಗಾರ ಮೊಹಮ್ಮದ್ ಬಾಸಿಲ್ ಎಂ 10.83 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡರು.
ಭಾರತದ ಸ್ಟಾರ್ ಅಥ್ಲೀಟ್ ಮುರಳಿ ಶ್ರೀಶಂಕರ್ ಪುರುಷರ ಲಾಂಗ್ ಜಂಪ್ ಫೈನಲ್ನಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದರು. ಅತ್ಯಂತ ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಸ್ಪರ್ಧೆಯಲ್ಲಿ ಶ್ರೀಶಂಕರ್ 8.09 ಮೀಟರ್ ದೂರ ಜಿಗಿಯುವ ಮೂಲಕ ಜಂಟಿಯಾಗಿ ಬೆಳ್ಳಿಯ ಪದಕಕ್ಕೆ ಮುತ್ತಿಕ್ಕಿದರು. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಬಂದ ನಂತರ ಶ್ರೀಶಂಕರ್ ನೀಡಿದ ಈ ಪ್ರದರ್ಶನ ಅವರ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
ಈ ಮೂರು ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಭಾರತವು 8ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಈವರೆಗೆ ಒಟ್ಟು 15 ಪದಕಗಳನ್ನು (3 ಚಿನ್ನ, 9 ಬೆಳ್ಳಿ, 3 ಕಂಚು) ಗೆದ್ದಿರುವ ಭಾರತ ಮುಂಬರುವ ಪಂದ್ಯಗಳಲ್ಲಿ ಮತ್ತಷ್ಟು ಮೆಡಲ್ಗಳನ್ನು ಗೆಲ್ಲುವ ನಿರೀಕ್ಷೆ ಇದೆ.



