ಸ್ಮೃತಿ ಮಂದಾನ ಅವರ ಆಕರ್ಷಕ ಅರ್ಧಶತಕ ಮತ್ತು ದೀಪ್ತಿ ಶರ್ಮಾ ಅವರ ಮಾಂತ್ರಿಕ ಬೌಲಿಂಗ್ ನ ನೆರವಿನಿಂದ ಪಾಕಿಸ್ತಾನವನ್ನು 64 ರನ್ ಗಳಿಂದ ಸೋಲಿಸಿದ ಭಾರತ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ ನಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ಕಳೆದ ವರ್ಷವಷ್ಟೇ ಏಕದಿನ ವಿಶ್ವಕಪ್ ನಲ್ಲಿ ಚಾಂಪಿಯನ್ ಆಗಿದ್ದ ಹರ್ಮನ್ ಪ್ರೀತ್ ಕೌರ್ ಪಡೆಗೆ ಈ ಮಹತ್ವದ ಟೂರ್ನಿಯಲ್ಲಿ ಮುಂದುವರಿಯಲು ಬಹಳ ದೊಡ್ಡ ಆತ್ಮವಿಶ್ವಾಸವನ್ನು ತಂದಿತ್ತಿದೆ.ಬರ್ಮಿಂಗ್ ಹ್ಯಾಂನಲ್ಲಿ ಜೂನ್ 14ರ ಭಾನುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 170 ರನ್ ಪೇರಿಸಿತು. ಇದಕ್ಕುತ್ತರವಾಗಿ ಪಾಕಿಸ್ತಾನ ತಂಡ 17 ಓವರ್ ಗಳಲ್ಲಿ 106 ರನ್ ಗಳಿಗೆ ಸರ್ವಪತನ ಕಂಡಿತು. 5 ವಿಕೆಟ್ ಕಬಳಿಸಿದ ದೀಪ್ತಿ ಶರ್ಮಾ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಪಂದ್ಯದಲ್ಲಿ ಭಾರತದ ಆಟಗಾರ್ತಿಯರು ಪಾಕಿಸ್ತಾನದ ಆಟಗಾರ್ತಿಯರೊಂದಿಗೆ ಹಸ್ತಲಾಘವ ನಿರಾಕರಣೆ ಅಭಿಯಾನವನ್ನು ಈ ಪಂದ್ಯದಲ್ಲೂ ಮುಂದುವರಿಸಿದರು.ಸವಾಲಿನ ಮೊತ್ತ ಬೆಂಬತ್ತಿ ಹೊರಟ ಪಾಕಿಸ್ತಾನ ತಂಡಕ್ಕೆ ಸ್ಪಿನ್ನರ್ ಗಳಾದ ದೀಪ್ತಿ ಶರ್ಮಾ ಮತ್ತು ಶ್ರೀಚರಣಿ ಕಬ್ಬಿಣದ ಕಡಲೆಯಾದರು. ದೀಪ್ತಿ ಶರ್ಮಾ ಅವರು 5 ವಿಕೆಟ್ ಕಬಳಿಸಿದರೆ, ಶ್ರೀ ಚರಣಿ 3 ವಿಕೆಟ್ ತಮ್ಮದಾಗಿಸಿಕೊಂಡರು. ಆರಂಭಿಕ ಆಟಗಾರ್ತಿ ಮುನೀಬಾ ಅಲಿ(35 ಎಸೆತದಲ್ಲಿ 41) ಅವರನ್ನು ಹೊರತುಪಡಿಸಿದರೆ ಬೇರಾವ ಬ್ಯಾಟರ್ ಸಹ ಭಾರತದ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು.ಸ್ಮೃತಿ- ಕೌರ್ ಜೊತೆಯಾಟ ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡಿದ್ದ ಭಾರತದ ಮೊತ್ತ 18 ಆಗುವಷ್ಟರಲ್ಲಿ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಮತ್ತು 3ನೇ ಕ್ರಮಾಂಕದ ಬ್ಯಾಟರ್ ಜೆಮಿಮಾ ರೊಡ್ರಿಗಸ್ ಅವರ ವಿಕೆಟ್ ಪಡೆಯುವಲ್ಲಿ ಪಾಕ್ ಬೌಲರ್ ಗಳು ಸಫಲರಾದರು. ಈ ಹಂತದಲ್ಲಿ ಒಂದಾದ ಉಪನಾಯಕಿ ಮತ್ತು ಸ್ಮೃತಿ ಮಂದಾನ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಕುಸಿತವನ್ನು ತಡೆದುದ್ದಲ್ಲದೆ ತಂಡದ ರನ್ ಗಳಿಕೆಗೂ ವೇಗವನ್ನು ತಂದಿತ್ತರು. ಹೀಗಾಗಿ 12.4 ಓವರ್ ಗಳಲ್ಲಿ ತಂಡ 100ರ ಗಡಿಯನ್ನು ದಾಟಿತು.ಈ ವೇಳೆ ಅರ್ಧಶತಕ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಸ್ಮೃತಿ ಮಂದಾನ ಅವರು ರಮೀನ್ ಶಮೀಮ್ ಎಸೆತದಲ್ಲಿ ಫಾತಿಮಾ ಸನಾಗೆ ಕ್ಯಾಚಿತ್ತು ಔಟಾದರು. 44 ಎಸೆತಗಳನ್ನು ಎದುರಿಸಿದ್ದ ಅವರು 9 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 68 ರನ್ ಗಳಿಸಿದರು. ಅವರೊಂದಿಗೆ 91 ರನ್ ಗಳ ಜೊತೆಯಾಟವಾಡಿದ ಹರ್ಮನ್ ಪ್ರೀತ್ ಕೌರ್ ಅವರು 35 ಎಸೆತದಲ್ಲಿ 4 ಬೌಂಡರಿಗಳಿದ್ದ 36 ರನ್ ಗಳಿಸಿ ಫಾತಿಮಾ ಸನಾಗೆ ವಿಕೆಟ್ ಒಪ್ಪಿಸಿದರು. ಪಂದ್ಯದಲ್ಲಿ 1 ರನ್ ಗಳಿಸುತ್ತಲೇ ಅವರು ಮಹಿಳಾ ಟಿ20 ವಿಶ್ವಕಪ್ ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಮಿಥಾಲ್ ರಾಜ್ ಅವರ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು.



