ಅರ್ಜೇಂಟೀನಾದ ಸ್ಟಾರ್ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ಅವರ 200ನೇ ಅಂತಾರಾಷ್ಟ್ರೀಯ ಪಂದ್ಯ ಇಷ್ಟರಮಟ್ಟಿಗೆ ಸ್ಮರಣೀಯವಾಗಬಹುದು ಎಂದು ಸ್ವತಃ ಮೆಸ್ಸಿ ಅವರೇ ಅಂದುಕೊAಡಿರಲಿಕ್ಕಿಲ್ಲ. ಅಲ್ಜೀರಿಯಾ ವಿರುದ್ಧ ನಡೆದ 2026ರ ಫಿಫಾ ವಿಶ್ವಕಪ್ನ ಅರ್ಜೆಂಟೀನಾದ ಮೊದಲ ಪಂದ್ಯದಲ್ಲೇ ಲಿಯೋನೆಲ್ ಮೆಸ್ಸಿ ತಮ್ಮ ವೃತ್ತಿಜೀವನದ ಚೊಚ್ಚಲ ವಿಶ್ವಕಪ್ ಹ್ಯಾಟ್ರಿಕ್ ಗೋಲು ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಮಾತ್ರವಲ್ಲದೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಅಪರೂರದ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
ಕಾನ್ಸಾಸ್ನಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಈ ಪಂದ್ಯವನ್ನು 3-0 ಅಂತರದಿಂದ ಗೆದ್ದುಕೊಂಡಿತು. 38 ವರ್ಷದ ಮೆಸ್ಸಿ ಮೂರೂ ಗೋಲುಗಳನ್ನು ಗಳಿಸುವ ಮೂಲಕ ತಮ್ಮ ದೇಶದ ಪರ 200ನೇ ಪಂದ್ಯವನ್ನಾಡಿದ ಸಂಭ್ರಮ ಆಚರಿಸಿದರು. ಇದರೊಂದಿಗೆ ಆರು ಫಿಫಾ ವಿಶ್ವಕಪ್ ಆವೃತ್ತಿಗಳಲ್ಲಿ ಆಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.
ಹೀಗಿತ್ತು ಹ್ಯಾಟ್ರಿಕ್ ಗೋಲಿನ ಹಾದಿ
ಲಿಯೋನೆಲ್ ಮೆಸ್ಸಿ ಅವರು ಪಂದ್ಯದ 17ನೇ ನಿಮಿಷದಲ್ಲಿ ಬಾಕ್ಸ್ನ ಹೊರಗಿನಿಂದ ಅತ್ಯುತ್ತಮ ಎಡಗಾಲಿನ ಶಾಟ್ ಹೊಡೆಯುವ ಮೂಲಕ ಮೊದಲ ಗೋಲು ಬಾರಿಸಿದರು. ಆನಂತರ, 60ನೇ ನಿಮಿಷದಲ್ಲಿ ಅಲ್ಜೀರಿಯಾದ ಗೋಲ್ಕೀಪರ್ ಕೈಯಿಂದ ಚೆಂಡು ಜಾರಿದ ಅವಕಾಶವನ್ನು ಬಳಸಿಕೊಂಡು ಹತ್ತಿರದಿಂದಲೇ ಎರಡನೇ ಗೋಲು ಗಳಿಸಿದರು. ತದನಂತರ, 76ನೇ ನಿಮಿಷದಲ್ಲಿ ಮತ್ತೊಮ್ಮೆ ಬಾಕ್ಸ್ನ ಹೊರಗಿನಿಂದ ಅದ್ಭುತವಾಗಿ ಚೆಂಡನ್ನು ತಿರುಗಿಲುವ ಮೂಲಕ ಮೂರನೇ ಗೋಲು ಬಾರಿಸಿ ಹ್ಯಾಟ್ರಿಕ್ ಪೂರ್ಣಗೊಳಿಸಿದರು.
ಇತಿಹಾಸ ಸೃಷ್ಟಿಸಿದ ಲಿಯೋನೆಲ್ ಮೆಸ್ಸಿ
ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಹ್ಯಾಟ್ರಿಕ್ ಗೋಲು ಗಳಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಮೆಸ್ಸಿ ಪಾತ್ರರಾಗಿದ್ದಾರೆ. ಈ ಮೂಲಕ ಅವರು 2018ರ ವಿಶ್ವಕಪ್ನಲ್ಲಿ ಸೋಚಿಯ ಫಿಶ್ಟ್ ಒಲಿಂಪಿಕ್ ಸ್ಟೇಡಿಯಂನಲ್ಲಿ ಸ್ಪೇನ್ ವಿರುದ್ಧ ಮೂರು ಗೋಲು ಗಳಿಸಿ ಕ್ರಿಸ್ಟಿಯಾನೊ ರೊನಾಲ್ಡೊ ಬರೆದಿದ್ದ ದಾಖಲೆಯನ್ನು ಮುರಿದರು.
ಮೆಸ್ಸಿ ಚೊಚ್ಚಲ ವಿಶ್ವಕಪ್ ಹ್ಯಾಟ್ರಿಕ್! ರೊನಾಲ್ಡೊ ವಿಶ್ವದಾಖಲೆ ಧೂಳೀಪಟ!



