ಯುವ ಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಕಾರಣಗಳು, ವಾಸ್ತವಗಳು ಮತ್ತು ತಡೆಗಟ್ಟುವ ಮಾರ್ಗಗಳು ಒಂದು ಕಾಲದಲ್ಲಿ ಹೃದಯಾಘಾತ (Heart Attack) ಎನ್ನುವುದು 60 ವರ್ಷ ಮೇಲ್ಪಟ್ಟವರ ಕಾಯಿಲೆ ಎಂಬ ಸಾಮಾನ್ಯ ಕಲ್ಪನೆ ಇತ್ತು. ಆದರೆ ಇಂದು 25*45 ವರ್ಷದೊಳಗಿನ ಯುವಕರು ಹೃದಯಾಘಾತದಿಂದ ಸಾವಿಗೀಡಾಗುತ್ತಿರುವ ಅಥವಾ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಸುದ್ದಿಗಳು ಸಾಮಾನ್ಯವಾಗಿವೆ. ವೈದ್ಯಕೀಯ ಕ್ಷೇತ್ರದಲ್ಲಿ ಇದು ಅತ್ಯಂತ ಗಂಭೀರವಾದ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ.ಅನೇಕ ಬಾರಿ ಸಮಾಜದಲ್ಲಿ “ಜಿಮ್ ಮಾಡುತ್ತಿದ್ದ ಯುವಕನಿಗೆ ಹೃದಯಾಘಾತ”, “ಆಟವಾಡುತ್ತಿದ್ದಾಗ ಕುಸಿದು ಬಿದ್ದ ಯುವಕ”, “ವೇದಿಕೆಯ ಮೇಲೆ ಭಾಷಣ ಮಾಡುತ್ತಿದ್ದಾಗ ಹೃದಯಾಘಾತ” ಎಂಬ ಸುದ್ದಿಗಳು ಕೇಳಿಬರುತ್ತವೆ. ಇದರಿಂದ “ಇದು ವಿಧಿಯಾಟವೇ?”, “ಕೋವಿಡ್ ಲಸಿಕೆಯ ಪರಿಣಾಮವೇ?”, “ಆಧುನಿಕ ಜೀವನಶೈಲಿಯ ಶಾಪವೇ?” ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.ವಾಸ್ತವವಾಗಿ ಹೃದಯಾಘಾತವು ಒಂದೇ ಕಾರಣದಿಂದ ಸಂಭವಿಸುವುದಿಲ್ಲ. ಇದು ದಶಕಗಳ ಕಾಲ ನಿಧಾನವಾಗಿ ನಿರ್ಮಾಣವಾಗುವ ದೈಹಿಕ, ಮಾನಸಿಕ ಮತ್ತು ಜೀವನಶೈಲಿಯ ಅಂಶಗಳ ಅಂತಿಮ ಪರಿಣಾಮವಾಗಿದೆ.ಹೃದಯಾಘಾತ ಎಂದರೇನು?ಹೃದಯಕ್ಕೆ ರಕ್ತವನ್ನು ಪೂರೈಸುವ ಕೊರೊನರಿ ಧಮನಿಗಳಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಇತರ ಪದಾರ್ಥಗಳು ಸೇರಿ ಅಡಚಣೆ ಉಂಟಾದಾಗ ಹೃದಯದ ಸ್ನಾಯುಗಳಿಗೆ ರಕ್ತಸಂಚಾರ ಕಡಿಮೆಯಾಗುತ್ತದೆ. ಈ ಅಡಚಣೆ ಹಠಾತ್ತನೆ ಸಂಪೂರ್ಣವಾಗಿದಾಗ ಹೃದಯ ಸ್ನಾಯುಗಳು ಸಾಯಲು ಪ್ರಾರಂಭಿಸುತ್ತವೆ. ಇದನ್ನೇ ಹೃದಯಾಘಾತ ಎಂದು ಕರೆಯಲಾಗುತ್ತದೆ.ಹೃದಯಾಘಾತ ಒಂದು ದಿನದಲ್ಲಿ ಬರುವ ರೋಗವಲ್ಲ; ಅದು ವರ್ಷಗಳ ಕಾಲ ದೇಹದಲ್ಲಿ ನಿರ್ಮಾಣವಾಗುವ ಪ್ರಕ್ರಿಯೆಯ ಫಲ.
1. ಜೀವನಶೈಲಿ:
ಇಂದಿನ ಯುವಜನರ ಜೀವನಶೈಲಿ ಹಿಂದಿನ ತಲೆಮಾರುಗಳಿಗಿಂತ ಸಂಪೂರ್ಣವಾಗಿ ಬದಲಾಗಿದೆ.ಹಿಂದೆ ದೈಹಿಕ ಶ್ರಮ ಹೆಚ್ಚಿತ್ತು.ನಡೆದು ಹೋಗುವ ಅಭ್ಯಾಸವಿತ್ತು.ಮನೆಯ ಆಹಾರ ಹೆಚ್ಚಾಗಿ ಸೇವಿಸಲಾಗುತ್ತಿತ್ತು. ಆದರೆ ಇಂದು ಗಂಟೆಗಟ್ಟಲೆ ಕುಳಿತು ಕೆಲಸ. ಮೊಬೈಲ್, ಲ್ಯಾಪ್ಟಾಪ್ ಮತ್ತು ವಾಹನಗಳ ಅವಲಂಬನೆ.ವ್ಯಾಯಾಮದ ಕೊರತೆ.
ಫಾಸ್ಟ್ ಫುಡ್ ಮತ್ತು ಸಂಸ್ಕರಿತ ಆಹಾರಗಳ ಬಳಕೆ.
ಈ ಬದಲಾವಣೆಗಳು ದೇಹದಲ್ಲಿ ಕೊಬ್ಬು ಸಂಗ್ರಹ, ಮಧುಮೇಹ, ರಕ್ತದೊತ್ತಡ ಮತ್ತು ಧಮನಿಗಳ ಗಟ್ಟಿಯಾಗುವಿಕೆಗೆ ಕಾರಣವಾಗುತ್ತವೆ.
2. ಮಾನಸಿಕ ಒತ್ತಡ:
ಇದನ್ನು ಆಧುನಿಕ ಯುಗದ ಮೌನ ಕೊಲೆಗಾರ ಎಂದು ಕರೆಯಬಹುದು.ಇಂದಿನ ಯುವಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಮಾನಸಿಕ ಒತ್ತಡ.ಇದಕ್ಕೆ ಪ್ರಮುಖ ಕಾರಣಗಳು ಉದ್ಯೋಗದ ಅನಿಶ್ಚಿತತೆ, ಸ್ಪರ್ಧಾತ್ಮಕ ಜೀವನ, ಆರ್ಥಿಕ ಒತ್ತಡ, ಕುಟುಂಬದ ಜವಾಬ್ದಾರಿಗಳು, ಸಾಮಾಜಿಕ ಜಾಲತಾಣಗಳ ಹೋಲಿಕೆ ಮನೋಭಾವನಿರಂತರ ಒತ್ತಡದಿಂದ ದೇಹದಲ್ಲಿ ಕಾರ್ಟಿಸೋಲ್ ಮತ್ತು ಅಡ್ರಿನಲಿನ್ ಹಾರ್ಮೋನುಗಳು ಹೆಚ್ಚುತ್ತವೆ.ಇದರ ಪರಿಣಾಮ: ರಕ್ತದೊತ್ತಡ ಹೆಚ್ಚುತ್ತದೆ. ಹೃದಯದ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ. ಧಮನಿಗಳ ಒಳಪದರಕ್ಕೆ ಹಾನಿಯಾಗುತ್ತದೆ. ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚುತ್ತದೆ. ಮಾನಸಿಕ ಒತ್ತಡವನ್ನು ವೈದ್ಯಕೀಯ ವಿಜ್ಞಾನ ಇಂದು ಹೃದಯರೋಗದ ಸ್ವತಂತ್ರ ಅಪಾಯಕಾರಕ ಅಂಶವೆAದು ಗುರುತಿಸಿದೆ.
3. ಆಹಾರ ಸಂಸ್ಕೃತಿಯ ಬದಲಾವಣೆ:
ಇಂದಿನ ಆಹಾರ ಪದ್ಧತಿ ಹೃದಯದ ಆರೋಗ್ಯಕ್ಕೆ ದೊಡ್ಡ ಸವಾಲಾಗಿದೆ.ಅಪಾಯಕಾರಿ ಆಹಾರಗಳು ನಿತ್ಯ ಸಂಗಾತಿಗಳಾಗಿದೆ ಜಂಕ್ ಫುಡ್ ,ಪಿಜ್ಜಾ, ಬರ್ಗರ್ ,ಅಧಿಕ ಎಣ್ಣೆ ಬಳಕೆ ಟ್ರಾನ್ಸ್ ಫ್ಯಾಟ್ ಇರುವ ಆಹಾರ ,ಸಕ್ಕರೆ ಪಾನೀಯಗಳು ,ಸಂಸ್ಕರಿತ ಮಾಂಸಾಹಾರ ಇವುಗಳು ಕೆಟ್ಟ ಕೊಲೆಸ್ಟ್ರಾಲ್ (LDL) ಹೆಚ್ಚಿಸುತ್ತವೆ.ಒಳ್ಳೆಯ ಕೊಲೆಸ್ಟ್ರಾಲ್ (HDL) ಕಡಿಮೆ ಮಾಡುತ್ತವೆ.ಧಮನಿಗಳಲ್ಲಿ ಕೊಬ್ಬಿನ ಪದರ ನಿರ್ಮಾಣಕ್ಕೆ ಕಾರಣವಾಗುತ್ತವೆ.
4. ವ್ಯಾಯಾಮದ ಕೊರತೆ:
ಮಾನವ ದೇಹ ಚಲನೆಗಾಗಿ ನಿರ್ಮಿತವಾಗಿದೆ.ಆದರೆ ಇಂದು ಕಚೇರಿಯಲ್ಲಿ 8*10 ಗಂಟೆ ಕುಳಿತುಕೊಳ್ಳುವುದು.
ವಾಹನಗಳ ಅತಿಯಾದ ಬಳಕೆ. ಮನೆಯಲ್ಲಿಯೇ ಮನರಂಜನೆ.ಇವೆಲ್ಲ ದೇಹದ ಚಯಾಪಚಯ ಕ್ರಿಯೆಯನ್ನು ಕುಗ್ಗಿಸುತ್ತವೆ.ವೈದ್ಯಕೀಯ ಅಧ್ಯಯನಗಳ ಪ್ರಕಾರ ನಿಯಮಿತ ವ್ಯಾಯಾಮ ಮಾಡುವವರಲ್ಲಿ ಹೃದಯರೋಗದ ಅಪಾಯ ಗಣನೀಯವಾಗಿ ಕಡಿಮೆಯಾಗಿರುತ್ತದೆ.
5. ಧೂಮಪಾನ ಮತ್ತು ಮದ್ಯಪಾನ:
ಬಹಳಷ್ಟು ಯುವಕರು ಒತ್ತಡ ನಿವಾರಣೆಯ ಹೆಸರಿನಲ್ಲಿ ಧೂಮಪಾನ ಮತ್ತು ಮದ್ಯಪಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ.ಧೂಮಪಾನದಿಂದ ರಕ್ತನಾಳಗಳು ಕುಗ್ಗುತ್ತವೆ. ಆಮ್ಲಜನಕ ಪೂರೈಕೆ ಕಡಿಮೆಯಾಗುತ್ತದೆ.
ರಕ್ತ ಹೆಪ್ಪುಗಟ್ಟುವಿಕೆ ಹೆಚ್ಚುತ್ತದೆ. ಒಬ್ಬ ಧೂಮಪಾನಿಯ ಹೃದಯಾಘಾತದ ಅಪಾಯ ಧೂಮಪಾನ ಮಾಡದವರಿಗಿಂತ ಹಲವಾರು ಪಟ್ಟು ಹೆಚ್ಚಿರುತ್ತದೆ.
6. ಮಧುಮೇಹ ಮತ್ತು ರಕ್ತದೊತ್ತಡದ ಮೌನ ಅಪಾಯ:
ಅನೇಕ ಯುವಕರು ತಮಗೆ ಮಧುಮೇಹ ಅಥವಾ ರಕ್ತದೊತ್ತಡವಿದೆ ಎಂಬುದನ್ನೇ ತಿಳಿದಿರುವುದಿಲ್ಲ.ಇವು ಯಾವುದೇ ಲಕ್ಷಣವಿಲ್ಲದೆ ವರ್ಷಗಳ ಕಾಲ ಮುಂದುವರಿಯಬಹುದು.ಧಮನಿಗಳಿಗೆ ಹಾನಿ ಉಂಟುಮಾಡುತ್ತವೆ.ಹೃದಯಾಘಾತದ ಅಪಾಯವನ್ನು ಹಲವಾರು ಪಟ್ಟು ಹೆಚ್ಚಿಸುತ್ತವೆ.
7. ನಿದ್ರೆಯ ಕೊರತೆ ಮತ್ತು ಅಸಮರ್ಪಕ ಜೀವನಕ್ರಮ:
ಇಂದಿನ ಯುವಜನರಲ್ಲಿ ತಡರಾತ್ರಿ ಮಲಗುವುದು ,ಕಡಿಮೆ ನಿದ್ರೆ ಅಸ್ಥಿರ ಕೆಲಸದ ಸಮಯ ಸಾಮಾನ್ಯವಾಗಿದೆ. ನಿದ್ರೆಯ ಕೊರತೆಯಿಂದ ರಕ್ತದೊತ್ತಡ ಹೆಚ್ಚುತ್ತದೆ.ದೇಹದಲ್ಲಿ ಉರಿಯೂತ (Inflammation) ಹೆಚ್ಚುತ್ತದೆ. ಹಾರ್ಮೋನುಗಳ ಸಮತೋಲನ ಹಾಳಾಗುತ್ತದೆ.ಇವೆಲ್ಲವೂ ಹೃದಯರೋಗದ ಅಪಾಯವನ್ನು ಹೆಚ್ಚಿಸುತ್ತವೆ.
8. ಅನುವಂಶಿಕ ಕಾರಣಗಳು:
ಕೆಲವು ಕುಟುಂಬಗಳಲ್ಲಿ ಹೃದಯರೋಗದ ಅಪಾಯ ಆನುವಂಶಿಕವಾಗಿ ಹೆಚ್ಚಿರುತ್ತದೆ.ಈ ಸಂದರ್ಭಗಳಲ್ಲಿ:
ಯುವ ವಯಸ್ಸಿನಲ್ಲೇ ಕೊಲೆಸ್ಟ್ರಾಲ್ ಹೆಚ್ಚಾಗಬಹುದು.ಧಮನಿಗಳಲ್ಲಿ ಕೊಬ್ಬು ಬೇಗನೆ ಸಂಗ್ರಹವಾಗಬಹುದು.ಆದ್ದರಿಂದ ಕುಟುಂಬದಲ್ಲಿ ಹೃದಯರೋಗದ ಇತಿಹಾಸ ಇದ್ದರೆ ಮುನ್ನೆಚ್ಚರಿಕೆ ಅತ್ಯಗತ್ಯ.
9. ಕೋವಿಡ್ ನಂತರದ ಚರ್ಚೆಗಳು: ವಾಸ್ತವ ಮತ್ತು ಭ್ರಮೆಗಳು:
ಕೋವಿಡ್ ನಂತರ ಯುವಕರ ಹೃದಯಾಘಾತದ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ.ಕೆಲವು ಅಧ್ಯಯನಗಳು ಕೋವಿಡ್ ಸೋಂಕಿನ ನಂತರ ರಕ್ತ
ಹೆಪ್ಪು ಗಟ್ಟುವಿಕೆಯ ಪ್ರವೃತ್ತಿ,ಹೃದಯದ ಉರಿಯೂತ, ರಕ್ತನಾಳಗಳ ಹಾನಿ
ಸಂಭವಿಸಬಹುದು ಎಂದು ಸೂಚಿಸಿವೆ.ಆದರೆ ಎಲ್ಲ ಯುವಕರ ಹೃದಯಾಘಾತವನ್ನು ಕೋವಿಡ್ ಅಥವಾ ಲಸಿಕೆಗೆ ಮಾತ್ರ ಕಾರಣವೆಂದು ಹೇಳುವುದು ವೈಜ್ಞಾನಿಕವಾಗಿ ಸರಿಯಲ್ಲ. ಬಹುಪಾಲು ಪ್ರಕರಣಗಳಲ್ಲಿ ಈಗಾಗಲೇ ಇದ್ದ ಜೀವನಶೈಲಿ ಮತ್ತು ಅಪಾಯಕಾರಕ ಅಂಶಗಳೇ ಮುಖ್ಯ ಕಾರಣಗಳಾಗಿವೆ.
10. ಜಿಮ್ ಮತ್ತು ಅತಿಯಾದ ವ್ಯಾಯಾಮ:
ವ್ಯಾಯಾಮ ಆರೋಗ್ಯಕ್ಕೆ ಅಗತ್ಯ ಆದರೆ ವೈದ್ಯಕೀಯ ಪರೀಕ್ಷೆಯಿಲ್ಲದೆ ಅತಿಯಾದ ವ್ಯಾಯಾಮ, ಸ್ಟಿರಾಯ್ಡ್ ಬಳಕೆ,ಅನಧಿಕೃತ ಪೂರಕಗಳ ಸೇವನೆ, ಕೆಲವರಲ್ಲಿ ಹೃದಯದ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡಬಹುದು. ಸಮತೋಲಿತ ವ್ಯಾಯಾಮವೇ ಆರೋಗ್ಯಕರ.
11. ವಾಯು ಮಾಲಿನ್ಯ: ಕಾಣದ ಹೃದಯಘಾತಕ
ನಗರ ಪ್ರದೇಶಗಳಲ್ಲಿ ವಾಹನಗಳ ಹೊಗೆ, ಕೈಗಾರಿಕೆಗಳಿಂದ ಹೊರಬರುವ ವಿಷಕಾರಿ ಕಣಗಳು, ನಿರ್ಮಾಣ ಕಾಮಗಾರಿಗಳ ಧೂಳು, ಕಸ ಸುಡುವಿಕೆ ಇತ್ಯಾದಿಗಳಿಂದ ವಾತಾವರಣದಲ್ಲಿ Pಒ2.5 ಮತ್ತು Pಒ10 ಎಂಬ ಅತಿ ಸೂಕ್ಷ್ಮ ಕಣಗಳು ಹೆಚ್ಚಾಗುತ್ತವೆ. ಇವು ಉಸಿರಾಟದ ಮೂಲಕ ಶ್ವಾಸಕೋಶವನ್ನು ಪ್ರವೇಶಿಸಿ ಅಲ್ಲಿಂದ ರಕ್ತಕ್ಕೆ ಸೇರಬಹುದು.ಇದರ ಪರಿಣಾಮವಾಗಿ ರಕ್ತನಾಳಗಳಲ್ಲಿ ಉರಿಯೂತ (Inflammation) ಉಂಟುಮಾಡುತ್ತವೆ.
ರಕ್ತದೊತ್ತಡವನ್ನು ಹೆಚ್ಚಿಸುತ್ತವೆ.ಧಮನಿಗಳಲ್ಲಿ ಕೊಬ್ಬಿನ ಶೇಖರಣೆಯನ್ನು ವೇಗಗೊಳಿಸುತ್ತವೆ.ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ.ಹೃದಯದ ಲಯಬದ್ಧ ಕಾರ್ಯ ವನ್ನು ಅಸ್ತವ್ಯಸ್ತಗೊಳಿಸುತ್ತವೆ. ವಿಶೇಷವಾಗಿ ಮಹಾನಗರಗಳಲ್ಲಿ ದೀರ್ಘಕಾಲ ವಾಸಿಸುವ ಜನರಲ್ಲಿ ಹೃದಯರೋಗ ಮತ್ತು ಹೃದಯಾಘಾತದ ಅಪಾಯ ಹೆಚ್ಚಿರುವುದನ್ನು ಅನೇಕ ಅಂತರರಾಷ್ಟ್ರೀಯ ಅಧ್ಯಯನಗಳು ದಾಖಲಿಸಿವೆ.
ಇಂದಿನ ಯುವಕರು ಹೆಚ್ಚು ಅಪಾಯದಲ್ಲಿದ್ದಾರೆ.ಯಾಕೆಂದರೆ ಇಂದಿನ ಯುವಕರು ಟ್ರಾಫಿಕ್ ಮಧ್ಯೆ ಹೆಚ್ಚು ಸಮಯ ಕಳೆಯುತ್ತಾರೆ.ದ್ವಿಚಕ್ರ ವಾಹನಗಳಲ್ಲಿ ದೀರ್ಘ ಪ್ರಯಾಣ ಮಾಡುತ್ತಾರೆ.ನಗರ ಕೇಂದ್ರಗಳಲ್ಲಿ ಉದ್ಯೋಗ ನಿರ್ವಹಿಸುತ್ತಾರೆ.ಮಾಲಿನ್ಯಪೂರ್ಣ ವಾತಾವರಣದಲ್ಲಿ ವ್ಯಾಯಾಮ ಅಥವಾ ಜಾಗಿಂಗ್ ಮಾಡುತ್ತಾರೆ.
ಯುವ ಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ



