ದಾವಣಗೆರೆ: ಯುವ ಸಮೂಹ ಯಾವುದೇ ದುಶ್ಚಟಗಳಿಗೆ ಒಳಗಾಗದೆ, ಸದೃಢ ಭಾರತ ನಿರ್ಮಾಣ ಮಾಡಲು ಕೈ ಜೋಡಿಸಬೇಕೆಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ರಾವ್ ಕರೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಾವಣಗೆರೆ ವಿಶ್ವವಿದ್ಯಾನಿಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ಕಾಲೇಜ್ ಆಫ್ ಡೆಂಟಲ್ ಸೈನ್ಸ್ಸ್, ರಾಷ್ಟ್ರೀಯ ಸೇವಾ ಯೋಜನೆ, ದಾವಣಗೆರೆ ವಿಶ್ವ ವಿದ್ಯಾನಿಲಯ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ವಿಶ್ವ ವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ತಂಬಾಕು ಸೇವಿಸುವ ಯುವಕರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರಿಂದ ಇತರೆ ಸಾಮಾನ್ಯ ವ್ಯಕ್ತಿಗಳಂತೆ ದೈಹಿಕ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಜೊತೆಗೆ ಇಂತಹ ವ್ಯಸನಿಗಳಲ್ಲಿ ಸಂತಾನೋತ್ಪತ್ತಿ ಪ್ರಮಾಣ ಕಡಿಮೆಯಾಗುತ್ತಿದೆ ಹಾಗೂ ಮುಂದಿನ ಯುವ ಪೀಳಿಗೆಯವರಿಗೆ ಸಂತಾನೋತ್ಪತ್ತಿ ಪ್ರಮಾಣ ಕಡಿಮೆಯಾಗುವುದರ ಜೊತೆಗೆ ದೇಹದ ಪ್ರತಿಯೊಂದು ಅಂಗಕ್ಕೂ ಹಾನಿಯುಂಟು ಮಾಡಿ, ಕ್ಯಾನ್ಸರ್ ನಂತಹ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. 2022 ರಲ್ಲಿ ದಾವಣಗೆರೆ ವಿಶ್ವ ವಿದ್ಯಾನಿಲಯವನ್ನು ತಂಬಾಕು ಮುಕ್ತ ವಿಶ್ವ ವಿದ್ಯಾನಿಲಯ ಎಂದು ಘೋಷಿಸಲಾಗಿದೆ, ಈ ನಿಟ್ಟಿನಲ್ಲಿ ವಿಶ್ವ ವಿದ್ಯಾನಿಲಯ ಉಪನ್ಯಾಸಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳ ಬಳಕೆಯಾಗದಂತೆ ಕ್ರಮವಹಿಸುವಂತೆ ತಿಳಿಸಿ, ಈ ವರ್ಷದ ಧ್ಯೇಯವಾಕ್ಯದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಹಿರಿಯ ಸಿವಿಲ್ ನ್ಯಾಯಾಧೀಶರಾದ ರಂಗೇಗೌಡ ಸಿ. ಮಾತನಾಡಿ, ಮಾನವ ಜನ್ಮ ದೊಡ್ಡದು, ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರ” ಎಂಬ ನಾಣ್ಣುಡಿಯೊಂದಿಗೆ ಪುಸ್ತಕ ಒಂದು ಒಳ್ಳೆ ಸ್ನೇಹಿತ ಅದರಿಂದ ನಾವು ಮೌಲ್ಯಾಧರಿತ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಇಂದಿನ ಯುವ ಜನಾಂಗವು ಸಾಮಾಜಿಕ ಜಾಲತಾಣ ಹಾಗೂ ತಂಬಾಕು ಉತ್ಪನ್ನಗಳ ಆಕರ್ಷಣೆಗೆ ಒಳಪಟ್ಟು ಯುವಕರು ಬಲಿಯಾಗುತ್ತಿದ್ದಾರೆ. ನಾವೆಲ್ಲರೂ ಸಾಧ್ಯವಾದಷ್ಟು ಒಳ್ಳೆಯ ವಿಚಾರಕ್ಕೆ ಹೌದು ಹಾಗೂ ಕೆಟ್ಟ ವಿಚಾರಕ್ಕೆ ಇಲ್ಲ ಎನ್ನೋಣ ಎಂದು ಕರೆ ನೀಡಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪರಮೇಶ್ವರ್ ಹೆಗಡೆ, ಮಾತನಾಡಿ, ನಶಾ ಮುಕ್ತ ಭಾರತ ಎಂಬ ಅಭಿಯಾನವನ್ನು ಎಲ್ಲಾ ಇಲಾಖೆಯ ಸಹಯೋಗದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಕಿವಿಮಾತು: (ನಶಾಭರಿಸುವ ಪದಾರ್ಥಗಳು) ಮೊದಲ ಬಾರಿಗೆ ದುಷ್ಚಟಗಳಿಗೆ ಬಲಿಯಾಗುವುದಿಲ್ಲ ಎಂದು ನಿರ್ಧರಿಸುವಂತೆ ತಿಳಿಸಿದರು.ಪ್ರಭಾರ ಕುಲಪತಿ ಪ್ರೊ. ವೆಂಕಟೇಶ್ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ವರ್ಷದ ವಿಶ್ವ ತಂಬಾಕು ರಹಿತ ದಿನದ ಧ್ಯೇಯ ಆಕರ್ಷಣೆಯನ್ನು ಬಹಿರಂಗಪಡಿಸುವುದು, ನಿಕೋಟಿನ್ ಮತ್ತು ತಂಬಾಕು ವ್ಯಸನವನ್ನು ಎದುರಿಸುವುದು ಎಂಬುದಾಗಿದ್ದು, ಯುವ ಜನತೆಯು ಇದರ ಕರಾಳ ಉದ್ದೇಶವನ್ನು ಅರಿತುಕೊಂಡು ಸಧೃಡ ಸಮಾಜ ನಿರ್ಮಿಸಲು ಕೇವಲ ಒಂದು ಕೈಯಲ್ಲಿ ಹೇಗೆ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲವೊ, ಅದೇ ರೀತಿ ನಾವೆಲ್ಲರೂ ನಮ್ಮ ಕುಟುಂಬ ಮತ್ತು ಸ್ನೇಹ ಬಳಗ ಸಮೇತ ಕೈ ಜೋಡಿಸಿದರೆ ತಂಬಾಕು ಮುಕ್ತ ಯುವ ಸಮೂಹವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಡಾ|| ಜಿ.ಡಿ. ರಾಘವನ್ ರವರು ಮಾತನಾಡಿ
ವಿದ್ಯಾರ್ಥಿಗಳಿಗೆ ಹವ್ಯಾಸ, ಅಭ್ಯಾಸವಾಗಿ ನಂತರ ಅಭ್ಯಾಸ ಚಟವಾಗಿ ಪರಿವರ್ತನೆಗೊಳ್ಳುವುದು ಎಂದು ಪ್ರಾಸ್ತಾವಿಕ ನುಡಿದರು.
ಎಸ್.ಬಿ ಗಂಟಿ, ಕುಲಸಚಿವರು-ದಾವಣಗೆರೆ ವಿಶ್ವ ವಿದ್ಯಾನಿಲಯ, ಡಾ|| ಯೋಗೇಂದ್ರ ಕುಮಾರ್ ಬಿ.ಯು. ಜಿಲ್ಲಾ ಆಯುಷ್ ಅಧಿಕಾರಿಗಳು, ಡಾ|| ಐ.ಎಂ. ಅಲಿ, ಪ್ರಾಂಶುಪಾಲರು, ಕಾಲೇಜ್ ಆಫ್ ಡೆಂಟಲ್ ಸೈನ್ಸ್ಸ್, ಮಹಾಂತೇಶ್ ಬಿ. ಉಳ್ಳಾಗಡ್ಡಿ, ವಿಭಾಗೀಯ ಸಂಯೋಜಕರು, ರಾಜ್ಯ ತಂಬಾಕು ನಿಯಂತ್ರಣ ಘಟಕ, ಡಾ.ಅಶೋಕ್ಕುಮಾರ್ ಪಾಳೇದ, ಎನ್.ಎಸ್.ಎಸ್ ಸಂಯೋಜನಾಧಿಕಾರಿಗಳು-ದಾವಣಗೆರೆ ವಿಶ್ವ ವಿದ್ಯಾನಿಲಯ, ಸತೀಶ್ ಕಲಹಾಳ, ಜಿಲ್ಲಾ ಸಲಹೆಗಾರರು, ಶೈಲಾ ಶಾಮನೂರು, ಸಮಾಜ ಕಾರ್ಯಕರ್ತರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
`ದುಶ್ಚಟಗಳಿಗೆ ಬಲಿಯಾಗದೆ ಸದೃಢ ಭಾರತ ನಿರ್ಮಾಣಕ್ಕೆ ಯುವ ಸಮುದಾಯ ಕೈಜೋಡಿಸಿ’



