ಶ್ರೀಯುತ ಡಾ. ಎಚ್ ನಟರಾಜ್ ಆರ್ಯ ಅವರ ರೆಕ್ಕೆ ಮುರಿದ ಹಕ್ಕಿ ಕೃತಿಯು ಸಮಾನತೆಯ ಹುಡುಕಾಟದ ಹಾದಿಯಲ್ಲಿ ತಲೆದೋರುವ ಎಲ್ಲಾ ನೋವುಗಳನ್ನು ಕ್ರೂಢೀಕರಿಸಿ, ಅವಮಾನಗಳನ್ನು ಪದಗಳಾಗಿ ಪೋಣಿಸಿ, ನವ ಜಾಗೃತಿಯ ಘಂಟೆಯನ್ನು ಬಡಿದಿದ್ದಾರೆ. ಕಾವ್ಯವೆಂದರೆ ಕೇವಲ ಪದಗಳ ಜೋಡಣೆಯಲ್ಲ, ಅದು ಬದುಕಿನ ಅನುಭವಗಳ, ಸಮಾಜದ ಸಂಕಟಗಳ, ಮನುಷ್ಯನ ಅಂತರಂಗದ ಮತ್ತು ಕಾಲದ ಸತ್ಯಗಳ ಜೀವಂತ ಅಭಿವ್ಯಕ್ತಿ. ಸಮಾಜದ ನೋವುಗಳಿಗೆ ಧ್ವನಿಯಾಗಿ, ಶೋಷಿತರ ಬದುಕಿಗೆ ಸಾಕ್ಷಿಯಾಗಿ, ಸಮಾನತೆಯ ಕನಸಿಗೆ ದಾರಿದೀಪವಾಗಿ ನಿಲ್ಲುವ ಕಾವ್ಯಗಳು ಅಪರೂಪ. ಅಂತಹ ಅಪರೂಪದ ಕೃತಿ ಡಾ. ಎಚ್. ನಟರಾಜ್ ಆರ್ಯ ಅವರ “ರೆಕ್ಕೆ ಮುರಿದ ಹಕ್ಕಿ” ಕವನ ಸಂಕಲನ.ಈ ಕೃತಿ ಕೇವಲ ಕವನಗಳ ಸಂಗ್ರಹವಲ್ಲ, ಇದು ಶತಮಾನ ಗಳಿಂದ ಅವಸಾನದ ಕೂಪಕ್ಕೆ ತಳ್ಳಲ್ಪಟ್ಟ ಸಮುದಾಯಗಳ ಹೃದಯದ ಮಾತು. ಇದು ಅನ್ಯಾಯದ ವಿರುದ್ಧದ ಪ್ರತಿರೋಧದ ಘೋಷಣೆ. ಆತ್ಮ ಗೌರವಕ್ಕಾಗಿ ನಡೆಯುವ ನಿರಂತರ ಹೋರಾಟದ ಸಾಹಿತ್ಯಿಕ ದಾಖಲೆ. ನೆಲಮೂಲ ಸಂಸ್ಕೃತಿಯ ಘನತೆಯನ್ನು ಮರು ಸ್ಥಾಪಿಸುವ, ಮಾನವೀಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಮಹತ್ವದ ಕಾವ್ಯ ಸಂಕಲನ.ಡಾ.ಎಚ್ . ನಟರಾಜ್ ಆರ್ಯ ಅವರೇ ಬರೆದು ದಾಖಲಿಸಿರುವಂತೆ. ಇದು ರೆಕ್ಕೆ ಮುರಿದ ಹಕ್ಕಿ ಹಾರಲಾರದ ಕಥೆಯಲ್ಲ ಹಾರಲು ಹುಟ್ಟಿದ ಜೀವಿಯ ಘೋಷಣೆ. ಈ ಘೋಷಣೆಯನ್ನೇ ಅವರು ಪ್ರತಿ ಪದದಲ್ಲೂ ಕಾವ್ಯದ ಸರಕಲ್ಲು ಸಿಡಿಲು ಬಡಿದಂತೆ ಸೃಷ್ಟಿಸಿದ್ದಾರೆ.ಈ ಕೃತಿಯಲ್ಲಿ ಬುದ್ಧ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಮೊದಲಾದ ಮಹನೀಯರ ಸಮಾನತೆ, ಮಾನವತೆ ಮತ್ತು ಸಾಮಾಜಿಕ ನ್ಯಾಯದ ಚಿಂತನೆಗಳು ಕಾವ್ಯದ ಮೂಲಕ ಹೊಸ ಅರ್ಥವನ್ನು ಪಡೆಯುತ್ತವೆ. ಕವಿ ಅವರ ತತ್ವಗಳನ್ನು ಕೇವಲ ಉಲ್ಲೇಖಿಸುವುದಿಲ್ಲ, ಅವುಗಳನ್ನು ಇಂದಿನ ಸಮಾಜದ ವಾಸ್ತವಿಕತೆಯೊಂದಿಗೆ ಸಂವಾದಕ್ಕಿಳಿಸುತ್ತಾರೆ.ಅದೇ ರೀತಿ ಚಮ್ಮಾರ, ಮಾತಂಗಿ, ಹರಳಯ್ಯ, ಚೆನ್ನಯ್ಯ ಮೊದಲಾದ ಜನಪದ ಮತ್ತು ಸಾಮಾಜಿಕ ಇತಿಹಾಸದ ಮಹತ್ವದ ವ್ಯಕ್ತಿತ್ವಗಳನ್ನು ಕವಿ ಹೊಸ ದೃಷ್ಟಿಕೋನದಿಂದ ಪರಿಚಯಿಸುತ್ತಾರೆ. ಅವರ ಬದುಕು, ಹೋರಾಟ ಮತ್ತು ಮಾನವೀಯ ಮೌಲ್ಯಗಳನ್ನು ಕಾವ್ಯದ ಭಾಷೆಯಲ್ಲಿ ಜೀವಂತಗೊಳಿಸುತ್ತಾರೆ. ಈ ಮೂಲಕ ಮರೆಮಾಚಲ್ಪಟ್ಟ ಇತಿಹಾಸಕ್ಕೆ ಸಾಹಿತ್ಯದ ಬೆಳಕನ್ನು ನೀಡುತ್ತಾರೆ.”ಧಮ್ಮ ಎಂದರೆ ಆಂತರ್ಯ ಜಾಗೃತಿ ಅಸಮಾನತೆಯನ್ನು ಕರಗಿಸುವ ಸಮಾನತೆಯ ಕ್ರಾಂತಿ, ಮನುಷ್ಯನನ್ನು ಮನುಷ್ಯನಾಗಿಸುವ ಸತ್ಯದ ದಾರಿ.ಹೀಗೆಲ್ಲಾ ಪ್ರಭುದ್ಧವಾಗಿ ಬರೆಯಬೇಕು ಎಂದರೆ, ವ್ಯಕ್ತಿ ಭಾಷೆಯಲ್ಲಿ ಬಲಿತಿರಬೇಕು, ಭಾವನೆಗಳನ್ನು ಕರಗತ ಮಾಡಿ ಕೊಂಡಿರಬೇಕು, ನೋವುಗಳನ್ನು ಕ್ರೂಢೀಕರಿಸಿ ಸ್ಪೋಟಗೊಂಡಿರ ಬೇಕು. ಅದನ್ನೇ ನಟರಾಜ್ ಅವರು ಮಾಡಿರುವುದು ಕೃತಿಯ ಹೆಗ್ಗಳಿಕೆ.”ರೆಕ್ಕೆ ಮುರಿದ ಹಕ್ಕಿ”ಯ ಪ್ರತಿಯೊಂದು ಕವಿತೆಯೂ ಒಂದು ನೋವಿನ ಬೀಜ. ಆ ಬೀಜದಲ್ಲಿ ಶತಮಾನಗಳ ಶೋಷಣೆ, ಅಸ್ಪೃಶ್ಯತೆಯ ಕತ್ತಲೆ, ಸಾಮಾಜಿಕ ತಿರಸ್ಕಾರ ಮತ್ತು ಬದುಕಿನ ಕಹಿ ಅನುಭವಗಳು ಅಡಗಿವೆ. ಆದರೆ ಕವಿ ಆ ನೋವನ್ನು ಕೇವಲ ಕಣ್ಣೀರಾಗಿ ಬಿಡುವುದಿಲ್ಲ, ಅದನ್ನು ಜಾಗೃತಿಯ ಚೈತನ್ಯವಾಗಿ ರೂಪಿಸುತ್ತಾರೆ. ಹೀಗಾಗಿ ಈ ಕೃತಿಯ ಕವಿತೆಗಳು ಓದುಗರ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಹುಟ್ಟಿಸುತ್ತವೆ, ಆತ್ಮಾವಲೋಕನಕ್ಕೆ ಪ್ರೇರೇಪಿಸುತ್ತವೆ ಮತ್ತು ಹೊಸ ಸಮಾಜದ ಕನಸನ್ನು ಕಟ್ಟಲು ಆಹ್ವಾನಿಸುತ್ತವೆ. ಆದಕಾರಣದಿಂದಲೇ ಅವರು ಪುನರುಚ್ಚರಿಸುತ್ತಾರೆ. ಇದು ಹಾರುವ ಘೋಷಣೆ ಎಂದು. ಅಸ್ಪೃಶ್ಯತೆಯ ಕತ್ತಲೊಳಗೆ ಮಾನವೀಯತೆಯ ಬೆಳಕನ್ನು ಹುಡುಕುವ ಈ ಕೃತಿ, ಸಮಾನತೆಯ ಸಮಾಜದ ಕನಸಿಗೆ ಸಾಹಿತ್ಯಿಕ ದಾರಿದೀಪವಾಗಿದೆ. ಇಲ್ಲಿ ಕಾವ್ಯವು ಅಲಂಕಾರವಲ್ಲ,ಕೇವಲ ಪ್ರಾಸಗಳಿಗೆ ಮೀಸಲಾಗಿಲ್ಲ, ಬರೆಯಬೇಕೆಂದು ಏನೇನೋ ಬರೆದಿಲ್ಲ, ಇಲ್ಲಿ ಪದಗಳು ಅಕ್ಷರಗಳಲ್ಲ ಅವು ಬದುಕಿನ ಸಾಕ್ಷ್ಯಗಳು. ಇಲ್ಲಿ ಪ್ರತಿಯೊಂದು ಸಾಲೂ ಆತ್ಮಗೌರವದ ಘೋಷಣೆ.ಡಾ. ಎಚ್. ನಟರಾಜ್ ಆರ್ಯ ಅವರು ಹೇಳುವಂತೆ, “ಇದು ಕವನ ಸಂಕಲನ ಮಾತ್ರವಲ್ಲ, ಇದು ಒಂದು ಪ್ರಶ್ನೆ, ಒಂದು ನೋವು, ಒಂದು ಜಾಗೃತಿ ಮತ್ತು ಮತ್ತೆ ಹಾರಬೇಕಾದ ಒಂದು ಕರೆ. ‘ರೆಕ್ಕೆ ಮುರಿದ ಹಕ್ಕಿ’ ಹಾರಲಾರದ ಕಥೆಯಲ್ಲ, ಹಾರಲು ಹುಟ್ಟಿದ ಜೀವಿಯ ಘೋಷಣೆ.” ಈ ಮಾತುಗಳು ಕೃತಿಯ ಸಾರವನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರತಿಬಿಂಬಿಸುತ್ತವೆ.ಈ ಕೃತಿ ದಲಿತ ಸಾಹಿತ್ಯದ ವ್ಯಾಪ್ತಿಯನ್ನು ವಿಸ್ತರಿಸುವುದರ ಜೊತೆಗೆ, ಮಾನವೀಯ ಸಾಹಿತ್ಯದ ಪರಂಪರೆಯನ್ನೂ ಶ್ರೀಮಂತಗೊಳಿಸುತ್ತದೆ. ಇದು ಕೇವಲ ಒಂದು ವರ್ಗದ ಅನುಭವವಲ್ಲ; ಮನುಷ್ಯನ ಘನತೆಯನ್ನು ಕಾಪಾಡುವ ಪ್ರತಿಯೊಬ್ಬರ ಹೃದಯದಲ್ಲಿ ಪ್ರತಿಧ್ವನಿಸುವ ಕಾವ್ಯ.”ರೆಕ್ಕೆ ಮುರಿದ ಹಕ್ಕಿ” ಓದುಗರಿಗೆ ಕೇವಲ ಕವಿತೆಗಳ ರಸಾನುಭವವನ್ನು ನೀಡುವುದಿಲ್ಲ, ಬದುಕಿನ ಹೊಸ ಅರ್ಥವನ್ನು, ಸಮಾಜವನ್ನು ನೋಡುವ ಹೊಸ ದೃಷ್ಟಿಯನ್ನು ಮತ್ತು ಸಮಾನತೆಯ ಕನಸನ್ನು ಕಾಣುವ ಹೊಸ ಮನಸ್ಸನ್ನು ನೀಡುತ್ತದೆ. ನೋವನ್ನು ಶಕ್ತಿಯನ್ನಾಗಿ, ಪ್ರತಿರೋಧವನ್ನು ಘೋಷಣೆಯನ್ನಾಗಿ ಪರಿವರ್ತಿಸುವ ಈ ಕಾವ್ಯಸಂಕಲನ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆಯುವ ಎಲ್ಲಾ ಗುಣಗಳನ್ನು ಹೊಂದಿದೆ.ರೆಕ್ಕೆ ಮುರಿದರೂ ಹಾರುವ ಕನಸನ್ನು ಯಾರೂ ಮುರಿಯಬಾರದು. ಅದನ್ನು ಮರೆತರೆ ಮತ್ತೆ ಸ್ವಾತಂತ್ರ÷್ಯ ಪೂರ್ವದ ಕರಾಳ ದಿನಗಳು ಸಮುದಾಯಕ್ಕೆ ಕಟ್ಟಿಟ್ಟ ಬುತ್ತಿ. ಅದೇ ಈ ಕೃತಿಯ ಜೀವಾಳ, ಅದೇ ಡಾ. ಎಚ್. ನಟರಾಜ್ ಆರ್ಯ ಅವರ ಕಾವ್ಯದ ಮಹತ್ವ.ಈ ಕವನ ಸಂಕಲನದ ಕೃತಿ ಮುಟ್ಟುವಾಗ ಮತ್ತು ಕೈಯಲ್ಲಿ ಹಿಡಿಯುವಾಗ ಹೆಚ್ಚೇನೂ ಭಾರವಿಲ್ಲ. ಆದರೆ ಓದಿದಾಗ ಮನಸ್ಸು ಭಾರವಾಗುತ್ತದೆ. ಕೃತಿಯನ್ನು ಮುಟ್ಟಿದೊಡನೆ ಸಂಪೂರ್ಣ ಓದುವ ಮನಸ್ಸಾಗುತ್ತದೆ. ಇದು ನೋವಿಗೂ, ಅವಮಾನಕ್ಕೂ, ಸಂಕಷ್ಟಕ್ಕೂ, ಸಾಮಾಜಿಕ ಅಸಮಾನತೆಗೂ ಇರುವ ಮೌಲ್ಯದ ಬಗ್ಗೆ ಚಿಂತನಾ ಲಹರಿಗಳ ಪರ್ವವಾಗಿದೆ.
ಇದೊಂದು ಕೃತಿ ಪರ್ವತವೇ ಸರಿ.
ರೆಕ್ಕೆ ಮುರಿದ ಹಕ್ಕಿ
ಗುಡಿಸಿಲಿನ ಗುಬ್ಬಚ್ಚಿ ನಾನು
ತಂದೆ ತಾಯಿಯ ಪ್ರೀತಿ
ಅಪ್ಪನ ದುಡಿಮೆ ದುಡ್ಡಿನಿಂದ
ಮೃಷ್ಟಾನ್ನ ಭೋಜನ
ಅವ್ವನ ಬುದ್ಧಿಮಾತು
ಹಾರಲು ಕಲಿತೆ
ಗೂಡು ಬಿಟ್ಟು
ಗುರುತಿಲ್ಲದ ಕಡೆಗೆ ಸಾಗುತ್ತಿದ್ದೆ
ಸ್ವಚ್ಛಂದ ಹಾರಾಟದಲ್ಲಿ
ಎತ್ತರಕ್ಕೆ ಏರುತ್ತಿದ್ದೆ
ಗುಬ್ಬಚ್ಚಿಯ ಗೂಡಲ್ಲಿ
ಬಡತನ ಇದ್ದರೂ ಬವಣೆ ಇರಲಿಲ್ಲ
ಹಣ ಇರಲಿಲ್ಲ
ಆನಂದ ಇತ್ತು.
ನೋವಿತ್ತು, ನಂಜಿರಲಿಲ್ಲ
ಕೊಳಕು ಇತ್ತು, ಕತ್ತಲೆ ಇರಲಿಲ್ಲ
ಶುಭ್ರ ನೀಲಿ ಆಕಾಶ
ತಣ್ಣನೆಯ ಗಾಳಿ
ತಳಿರಿನ ತಂಪು
ಮಲ್ಲಿಗೆಯ ಕಂಪು
ನನಗೆ ಗುರುವಾಗಿ
ಗುರಿಯವರೆಗೂ ಕರೆದೊಯ್ದವು.
ಆಮೇಲೆ
ಅರಮನೆ ಸೇರಿದೆ
ಅಂದ ಚಂದದ ಮೈಮಾಟ
ಮೋಹ ಮಾಯೆಯ ಪಾಶ :
ಅಲ್ಲಿ ರೆಕ್ಕೆ ಬಿಚ್ಚಲಿಲ್ಲ
ಹಾರಲೂ ಆಗಲಿಲ್ಲ
ಪಂಜರದೊಳಗೆ
ರೆಕ್ಕೆ ಬಡಿಯುತ್ತಾ
ನಿದ್ರೆ ಬಾರದ ರಾತ್ರಿಯಲ್ಲಿ
ನಲಿವು ಕಾಣದೆ
ಕಂಗಾಲಾದೆ
ಹೊಸ ಪ್ರಪಂಚದಲ್ಲಿ
ದಾರಿ ತಪ್ಪಿದೆ;
ದಾರಿ ತೋರಿಸುವವರೇ
ಕತ್ತಲಿನ ಪರದೆ ಕಟ್ಟಿದರು
ಹಾರಲೂ ಆಗದೆ
ಹೊರಳಲೂ ಆಗದೆ
ಸೊರಗಿ ಕುಳಿತೆ ರೆಕ್ಕೆ
ಮುರಿದ ಹಕ್ಕಿಯಂತೆ
ಪAಜರದಿAದ ಬಿಡುಗಡೆ ಯಾವಾಗ?
ನಾನು ಹಾರಬೇಕು
ಮೊದಲಿನಂತೆ ರೆಕ್ಕೆಬಿಚ್ಚಿ
ಶುಭ್ರ ಗಾಳಿಯ ತಂಪಿನಲ್ಲಿ
ಸ್ವಚ್ಛ ನೀಲಿ ಆಕಾಶದ ಕಡೆಗೆ
ಮೌನವೇ ಮಾತಾಗಿದೆ.
ಮಾಡಿದ ತಪ್ಪಿಗೆ
ಪ್ರಾಯಶ್ಚಿತ್ತ ಯಾವಾಗ?
ಒಂದು ದಿನ
ಪಂಜರದ ಸರಳು ಮರುಗಿತು
“ಬಿಡುಗಡೆ ನೀಡುವೆ, ಹೋಗು ನೀನು.”
ಅದೇ ಆಕಾಶ
ಅದೇ ಗಾಳಿ
ಹಾರಲು ರೆಕ್ಕೆ ಅಗಲಿಸಿದೆ
ರೆಕ್ಕೆಗಳಿಲ್ಲ
ರೆಕ್ಕೆ ಮುರಿದಿವೆ
ನಾನು ಇನ್ನೂ ಹಾರಲಾರದ
ರೆಕ್ಕೆ ಮುರಿದ ಹಕ್ಕಿ
ರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ… ಬದಲಾವಣೆಯ ಪರ್ವದತ್ತ” ಡಾ.ಜಿ.ವೈ. ಪದ್ಮನಾಗರಾಜು



