ಹಿಮೋಫಿಲಿಯಾ ಇದು ಒಂದು ಅನುವಂಶೀಯವಾದ ರಕ್ತಸ್ರಾವದ ಕಾಯಿಲೆ. ಸಾಮಾನ್ಯವಾಗಿ ಈ ಕಾಯಿಲೆ ಇದ್ದವರಿಗೆ ರಕ್ತವು ಹೆಪ್ಪುಗಟ್ಟುವುದಿಲ್ಲ. ಬಿದ್ದ ಗಾಯವಾಗಲಿ, ಚರ್ಮ ಕುಯ್ದ ಗಾಯವಾಗಲಿ ಇದು ನಿಲ್ಲುವುದಿಲ್ಲ. ಶಸ್ತ್ರಚಿಕಿತ್ಸೆಯ ನಂತರವೂ ರಕ್ತಸ್ರಾವ ನಿಲ್ಲುವುದಿಲ್ಲ. ಹೀಗಾಗಿ ಇದೊಂದು ಗಂಭೀರ ಸಮಸ್ಯೆಯಾಗಿದೆ. ಮನುಷ್ಯನ ದೇಹದಲ್ಲಿ ರಕ್ತದಲ್ಲಿ ರಕ್ತವನ್ನು ಹೆಪ್ಪುಗಟ್ಟುವ ಪ್ರೊಟೀನ್ಗಳಿರುತ್ತವೆ. ಅವುಗಳು ಗಾಯಗಳು ಅಥವಾ ಶಸ್ತ್ರಚಿಕಿತ್ಸೆಯ ನಂತರ ಹೆಪ್ಪುಗಟ್ಟಿ ರಕ್ತದ ಹರಿಯುವುದನ್ನು ನಿಲ್ಲಿಸಲು ಸಹಾಯ ಮಾಡುತ್ತವೆ. ಆದರೆ ಹಿಮೋಫಿಲಿಯಾ ಇದ್ದವರಿಗೆ ರಕ್ತಸ್ರಾವ ನಿಲ್ಲುವುದಿಲ್ಲ. ಅವರಿಗೆ ಒಂದು ಚಿಕ್ಕ ಗಾಯವಾದರೂ ಬಹಳ ರಕ್ತ ನಷ್ಟವಾಗುತ್ತದೆ. ಕೆಲವೊಮ್ಮೆ ತಿಳಿದಿರುವ ಅಥವಾ ಗುರುತಿಸಬಹುದಾದ ಕಾರಣವಿಲ್ಲದೆ ರಕ್ತಸ್ರಾವವು ಉಂಟಾಗಬಹುದು. ಹಿಮೋಫಿಲಿಯಾ ಇದ್ದವರಿಗೆ ಗಂಟು, ಕೀಲು, ಸ್ನಾಯು ಮತ್ತು ಮಾಂಸಖಂಡಗಳಲ್ಲಿ ರಕ್ತಸ್ರಾವ ಆಗಬಹುದು. ಮೂಗಿನಲ್ಲಿ ರಕ್ತಸ್ರಾವ, ಹಲ್ಲಿನ ವಸಡಿನಲ್ಲಿ ರಕ್ತಸ್ರಾವ, ಸಂಧಿನೋವು, ಊತ, ಕೆಲವರಿಗೆ ಮಲ ಮತ್ತು ಮೂತ್ರದಲ್ಲಿಯೂ ರಕ್ತ ಸ್ರಾವವಾಗಬಹುದು. ಈ ಕಾರಣಗಳಿಗೆ ರಕ್ತಸ್ರಾವವಾದರೆ ತಕ್ಷಣವೇ ವೈದ್ಯರಿಂದ ಚುಚ್ಚುಮದ್ದು ತೆಗೆದುಕೊಳ್ಳಬೇಕು. ಮನೆಯಲ್ಲಿ ರೆಫ್ರಿಜರೇಟರ್ ನಲ್ಲಿ ಇದರ ಔಷಧಿ ಹಾಗು ಚುಚ್ಚುಮದ್ದು ಇಟ್ಟುಕೊಂಡಿರಲೇ ಬೇಕು.ಹಿಮೋಫಿಲಿಯಾ ರೋಗಿಗಳು ಹೊರಹೋಗುವಾಗ ಸದಾ ತಮ್ಮ ರೋಗದ ವಿವರ ಮತ್ತ ಮನೆಯವರ ಫೋನ್ ನಂಬರ್, ಮನೆಯ ವಿಳಾಸ ತಪ್ಪದೇ ಇಟ್ಟುಕೊಂಡಿರಬೇಕು. ಏನಾದರೂ ಅಪಾಯವಾದರೆ ಅಥವಾ ಕಷ್ಟಕರ ಪರಿಸ್ಥಿತಿಯಿದ್ದರೆ ಅವರ ಮನೆಯವರನ್ನು ಸಂಪರ್ಕಿಸಲು ಇದರಿಂದ ಉಪಯೋಗವಾಗುತ್ತದೆ.
ಇವರ ಮಾನಸಿಕ ದೃಢತೆಯನ್ನು ಉಳಿಸುವುದಕ್ಕೆ ಅವರಿಗೆ ಆರೋಗ್ಯಕರ ಜೀವನಶೈಲಿಯ ಬಗ್ಗೆ ಶಿಕ್ಷಣ, ಸಹಾನುಭೂತಿ, ಸಾಂತ್ವಾನ ಮತ್ತು ಧೈರ್ಯದಿಂದ ಇರುವಂತೆ ಸಹಾಯ ಮಾಡಬೇಕು. ಈ ರೋಗಿಗಳು ಅವರ ಕಾಯಿಲೆಯ ಬಗೆಗಿನ ಅರಿವನ್ನು ಹೊಂದಿರುವುದು ಮುಖ್ಯವಾಗಿದೆ. ಸಮಾಜದಲ್ಲಿ ಅವರನ್ನು ಎಲ್ಲರಂತೆ ಅವರನ್ನು ಬೆಳೆಸುವಲ್ಲಿ ಮನೆಯವರ ಹೆಚ್ಚಾಗಿ ತಂದೆ ತಾಯಿಯ ಆದ್ಯ ಕರ್ತವ್ಯವಾಗಿದೆ. ಅವರಿಗೆ ಕಾಯಿಲೆ ಬಗ್ಗೆ ತಿಳಿಸಿ ಮುಂಜಾಗ್ರತೆ ಕ್ರಮವಾಗಿ ಹೇಗಿರಬೇಕೆಂದು ತಿಳಿ ಹೇಳಬೇಕು.ಮಕ್ಕಳನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಎಲ್ಲ ಶಿಕ್ಷಕರ ವೃಂದದವರಿಗೆ, ಮಗುವಿನ ಸಹಪಾಠಿಗಳಿಗೆ ತಿಳಿಸಿರಬೇಕು. ಇಂತಹ ಮಕ್ಕಳಿಗೆ ಆಟ ಆಡುವಾಗ ಬೀಳದಂತೆ ಎಚ್ಚರವಹಿಸಬೇಕು. ಚೂಪಾದ ಆಯುಧಗಳಿಂದ ದೂರವಿರಬೇಕು. ಅವರಿಗೆ ರಕ್ತಸ್ರಾವ ಶುರುವಾದ ತಕ್ಷಣ ಶಾಲೆಯಲ್ಲಿದ್ದರೆ ಅವರ ಶಿಕ್ಷಕರಿಗೆ ತಿಳಿಸಬೇಕು. ಮನೆಯಲ್ಲಿ ಆದರೆ ಕುಟುಂಬದ ಸದಸ್ಯರಿಗೆ ಕೂಡಲೇ ತಿಳಿಸಬೇಕು.
ಹಿಮೋಫಿಲಿಯಾ ರೋಗಿಗಳು ತಮ್ಮ ಆಹಾರ ಪದ್ಧತಿಯನ್ನು ತೀವ್ರವಾಗಿ ಗಮನಿಸಬೇಕು. ಅವರು ಆರಂಭದಲ್ಲೇ ತಿನ್ನಬಾರದ ಆಹಾರಗಳನ್ನು ತ್ಯಜಿಸಬೇಕು. ಹಿಮೋಫಿಲಿಯಾರೋಗಿಗಳು ತಿಂದಿದ್ದ ಆಹಾರವನ್ನು ಹೊಟ್ಟೆಯು ಸುಲಭವಾಗಿ ಜೀರ್ಣವಾಗುವಂತೆ ಸೇವಿಸಬೇಕು.ಗಟ್ಟಿ ಪದಾರ್ಥ ಆಹಾರಗಳನ್ನು ಬಹಳ ಹುಷಾರಾಗಿ ತಿನ್ನಬೇಕು. ಅದು ವಸಡಿಗಾಗಲಿ ಬಾಯಿಯ ಒಳಚರ್ಮಕ್ಕೆ ಗಾಯವಾದರೆ ರಕ್ತ ಬಂದರೆ ನಿಲ್ಲುವುದಿಲ್ಲ. ಮೃದು ಆಹಾರವಾದ ಅನ್ನ, ರೊಟ್ಟಿ, ಚಪಾತಿ, ಮುದ್ದೆ, ತರಕಾರಿ, ಸೊಪ್ಪು ಹಾಗೂ ಹಣ್ಣುಗಳನ್ನು ಸೇವಿಸಬೇಕು. ಹೆಚ್ಚು ಕ್ಯಾಲ್ಸಿಯಂ ಹಾಗೂ ವಿಟಾಮಿನ್ ಡಿ ಹಾಗೂ ಬೇರೆ ಆವಶ್ಯಕ ಮಿನರಲ್ಗಳು ಸಮೃದ್ಧಿಯಾಗಿ ದೇಹಕ್ಕೆ ಸಿಗುವಂಥ ಆಹಾರ ಸೇವಿಸಬೇಕು.
ಇದನ್ನು ರಾಜ ಕಾಯಿಲೆ ಎಂದು ಹೇಳುತ್ತಾರೆ. ವಿಕ್ಟೋರಿಯಾ ರಾಣಿಗೆ ಹಿಮೋಫಿಲಿಯಾ ಇದ್ದು ಅವಳ ಒಂಬತ್ತು ಮಕ್ಕಳಲ್ಲಿ ಮೂರು ಮಕ್ಕಳಿಗೆ ವಂಶವಾಹಿನಿಯಲ್ಲಿ ಬಂದಿದೆ. ಹೆಣ್ಣು ಮಕ್ಕಳಿಗೆ ಈ ಕಾಯಿಲೆ ಇದ್ದರೆ ಅಂಥವರು ತಿಂಗಳಿನ ಮುಟ್ಟು ಆಗುವುದು ನೈಸರ್ಗಿಕವಾದ್ದರಿಂದ ಅದು ಭಯಪಡುವ ಅವಶ್ಯಕತೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದು, ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳಬಹುದು.
ಹಿಮೋಫಿಲಿಯಾ ಇರುವ ಗಂಡು ಅಥವಾ ಹೆಣ್ಣು ಮಕ್ಕಳು ಮದುವೆಯಾಗಬಹುದು. ಆದರೆ ಕೆಲವು ಮುಖ್ಯ ವಿಷಯಗಳನ್ನು ಗಮನದಲ್ಲಿಡಬೇಕು.ಹಿಮೋಫಿಲಿಯಾ ಇದ್ದವರಿಗೂ ಮದುವೆ ಆಗಲು ಯಾವುದೇ ಕಾನೂನು ಅಥವಾ ಸಾಮಾನ್ಯ ನಿರ್ಬಂಧ ಇಲ್ಲ. ಆರೋಗ್ಯದ ಸ್ಥಿತಿ ನೋಡಿಕೊಂಡು, ಸರಿಯಾದ ಚಿಕಿತ್ಸೆ ತೆಗೆದುಕೊಂಡರೆ ಉತ್ತಮ ಜೀವನ ನಡೆಸಬಹುದು.
ಗಮನಿಸಬೇಕಾದ ಮುಖ್ಯ ವಿಷಯಗಳು: ಜಿನಟಿಕ್ ಕೌನ್ಸೆಲ್ಲಿಂಗ್ (ವಂಶಪಾರಂಪರ್ಯ ಸಲಹೆ) ಮದುವೆಗೂ ಮೊದಲು ಡಾಕ್ಟರ್ರನ್ನು ಭೇಟಿ ಮಾಡಿ ಭವಿಷ್ಯದ ಮಕ್ಕಳಿಗೆ ರೋಗ ಹೋಗುವ ಸಾಧ್ಯತೆ ತಿಳಿದುಕೊಳ್ಳಬೇಕು.
ಇದು ಗಂಡು ಮಗುವಿಗೆ ಹೆಚ್ಚು ಪರಿಣಾಮ ಬೀರುತ್ತದೆ. ಹೆಣ್ಣು ಮಕ್ಕಳು ಸಾಮಾನ್ಯವಾಗಿ ಕ್ಯಾರಿಯರ್ (ವಾಹಕ) ಆಗಿರುತ್ತಾರೆ. ಮದುವೆಗೆ ಮುನ್ನ ಈ ವಿಷಯವನ್ನು ಸ್ಪಷ್ಟವಾಗಿ ತಿಳಿಸುವುದು ಬಹಳ ಮುಖ್ಯ. ಇಂದಿನ ಕಾಲದಲ್ಲಿ ಇದಕ್ಕೆ ಉತ್ತಮ ಚಿಕಿತ್ಸೆ ಇದೆ.
ಹೆಣ್ಣು ಕ್ಯಾರಿಯರ್ ಆಗಿದ್ದರೆ, ಗರ್ಭಧಾರಣೆಗೆ ಮುನ್ನ ವೈದ್ಯರ ಸಲಹೆ ಅವಶ್ಯಕ ವಿಶೇಷ ಪರೀಕ್ಷೆಗಳು ಮಾಡಿಸಬೇಕು. ಹಿಮೋಫಿಲಿಯಾ ಇದ್ದರೂ ಮದುವೆ ಮಾಡಿಕೊಳ್ಳಬಹುದು ಮೆಡಿಕಲ್ ಗೈಡೆನ್ಸ್ ಮತ್ತು ಅವೆರ್ನೆಸ್ ತುಂಬಾ ಮುಖ್ಯ.
-ಚಂಪಾ ಚಿನಿವಾರ್ ಆಪ್ತಸಮಾಲೋಚಕಿ.
ಹಿಮೋಫಿಲಿಯಾ?



