ದೆಹಲಿ: ಕರ್ನಾಟಕ ರಾಜ್ಯ ಸಂಪುಟ ವಿಸ್ತರಣೆ ಕಸರತ್ತು ದೆಹಲಿಯಲ್ಲಿ ನಡೆದಿದ್ದು, ಸಚಿವಾಕಾಂಕ್ಷಿಗಳಲ್ಲಿ ಒಂದು ರೀತಿಯಲ್ಲಿ ಆತಂಕ ಮೂಡಿಸಿದೆ.
ತಮಗೆ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ಶಾಸಕರಿದ್ದಾರೆ. ಸಚಿವರ ಸ್ಥಾನ ಬಯಸಿ ಬಹುತೇಕ ಶಾಸಕರು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ತಮ್ಮ ತಮ್ಮ ನೆಚ್ಚಿನ ಪಕ್ಷದ ನಾಯಕರನ್ನು ಭೇಟಿ ಮಾಡಿ ತಮ್ಮ ಅರ್ಹತೆಯ ಆಧಾರ ಮೇಲೆ ಸಚಿವ ಸ್ಥಾನ ದೊರಕಿಸುವಂತೆ ದುಂಬಾಲು ಬೀಳುತ್ತಿದ್ದಾರೆ. ತಮಗೆ ಈ ಬಾರಿ ಸಚಿವ ಸ್ಥಾನ ದೊರೆಯುವುದು ಖಚಿತ ಎಂದು ನಿರೀಕ್ಷೆಯಲ್ಲಿ ಹಲವರಿದ್ದಾರೆ. ತಾವು ಪ್ರತಿನಿಧಿಸುವ ಪ್ರದೇಶ ಸಮುದಾಯ ಮತ್ತಿತರರ ಲೆಕ್ಕಾಚಾರವನ್ನು ತಾವು ಯಾವ ಕಾರಣಕ್ಕಾಗಿ ಸಚಿವರಾಗಬೇಕು ಎಂಬುದು ನಾಯಕರಿಗೆ ಮನವರಿಕೆ ಮಾಡುವ ಪ್ರಯತ್ನದಲ್ಲಿದ್ದಾರೆ. ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಭಾಗಗಳ ಆಧಾರದ ಮೇಲೆ ಸಚಿವ ಸ್ಥಾನ ಕೊಡಿಸಬೇಕು ಎಂಬ ಒತ್ತಾಯ ಪ್ರಬಲವಾಗಿ ವರಿಷ್ಠರ ಮೇಲೆ ಹೇರುತ್ತಿದ್ದಾರೆ. ಈಗಾಗಲೇ ಸಂಪುಟ ವಿಸ್ತರಣೆಗಾಗಿ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಲು ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಮ್ಮ ಮೇಲೆ ಬರುತ್ತಿರುವ ಒತ್ತಡಗಳಿಗಾಗಿ ಯಾರಾ ಕೈಗೂ ಸಿಗದೆ ಓಡಾಡುತ್ತಿದ್ದಾರೆ. ಇಂದು ಮಧ್ಯಾಹ್ನದ ವೇಳೆಗೆ ಪಕ್ಷದ ವರಿಷ್ಟರೊಂದಿಗೆ ಈ ಮೂವರು ನಾಯಕರು ಸಭೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂವರು ನಾಯಕರು ಸಂಪುಟ ವಿಸ್ತರಣೆಗೆ ಸಂಬಂಧಪಟ್ಟಂತೆ ಹಲವು ಶಾಸಕರ ಪಟ್ಟಿ ಸಿದ್ಧಪಡಿಸಿದ್ದು, ತಮ್ಮ ಪಟ್ಟಿಯನ್ನು ವರಿಷ್ಠರಿಗೆ ಸಭೆ ಸಂದರ್ಭದಲ್ಲಿ ನೀಡಲಿದ್ದಾರೆ. ಎಲ್ಲರ ಪಟ್ಟಿಯನ್ನು ಪರಾಮರ್ಶೆ ನಡೆಸಿ ವರಿಷ್ಠರು ಹಲವು ಶಾಸಕರ ಹೆಸರನ್ನು ಅಂತಿಮವಾಗಿ ಸಿದ್ಧಪಡಿಸಲಿದ್ದಾರೆ ಎಂದು ಹೇಳಲಾಗಿದೆ. ಅಂತಿಮ ಪಟ್ಟಿಯಲ್ಲಿ ಯಾರ ಹೆಸರು ಇರುತ್ತದೆ. ಇಲ್ಲವೋ ಎಂಬುದು ಸಹ ಸಚಿವಾಕಾಂಕ್ಷಿಗಳ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಈ ಪ್ರಕ್ರಿಯೆ ಇನ್ನು ಎರಡು ಮೂರು ದಿನ ನಡೆಯ ಬಹುದು ಎಂಬುದು ಹಲವರ ಲೆಕ್ಕಚಾರವಾಗಿದೆ. ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಟಿ.ಬಿ. ಜಯಚಂದ್ರ ಅವರಿಗೆ ಕ್ಯಾಬಿನೆಟ್ ಸ್ಥಾನ ಮಾನದ ಹುದ್ದೆ ಇದ್ದರೂ ಸಹ ಸಚಿವರಾಗಲು ಇಂಗಿತ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಮುಗಿದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಯಾವ ಬೆಳವಣಿಗೆಗಳು ನಡೆಯುತ್ತವೆ ಎಂಬುದು ಕಾದು ನೋಡಬೇಕಿದೆ. ಈ ಮಧ್ಯೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ರಾಜ್ಯ ಉಸ್ತುವಾರಿ ಹೊತ್ತಿರುವ ರಣದೀಪ್ ಸುರ್ಜೆವಾಲ ಅವರ ಜತೆ ದೆಹಲಿಯ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ.
ಆಕಾಂಕ್ಷಿಗಳಲ್ಲಿ ಆತಂಕ ಸದ್ದುಗದ್ದಲಗಳಿಲ್ಲದೆ ನಡೆದಿದೆ ಸಂಪುಟ ವಿಸ್ತರಣೆ ಕಸರತ್ತು



