ನೆಲಮಂಗಲ: “ಮಾನವನ ಜೀವನದಲ್ಲಿ ಅಜ್ಞಾನದ ಕತ್ತಲೆಯನ್ನು ಸರಿಸಿ, ಜ್ಞಾನದ ಬೆಳಕನ್ನು ನೀಡುವ ಗುರುವಿನ ಸ್ಥಾನ ಅತ್ಯುನ್ನತವಾದದ್ದು. ಗುರು ತೋರಿದ ಸನ್ಮಾರ್ಗದಲ್ಲಿ ನಡೆಯುವುದೇ ಜೀವನದ ನಿಜವಾದ ಸಾರ್ಥಕತೆ,” ಎಂದು ನೆಲಮಂಗಲ ತಾಲ್ಲೂಕಿನ ಸೋಲೂರು ಹೋಬಳಿಯ ಪಾಲನಹಳ್ಳಿ ಮಠದ ಪೀಠಾಧಿಪತಿಗಳಾದ ಪೂಜ್ಯ ಡಾ. ಶ್ರೀ ಶ್ರೀ ಶ್ರೀ ಸಿದ್ದರಾಜು ಸ್ವಾಮೀಜಿಯವರು ಮಾರ್ಮಿಕವಾಗಿ ನುಡಿದರು.ಶ್ರೀ ಶನೈಶ್ವರಾಧಿಪತಿ ಕ್ಷೇತ್ರ ಹಾಗೂ ಪಾಲನಹಳ್ಳಿ ಮಠದಲ್ಲಿ ಅತ್ಯಂತ ಭಕ್ತಿ-ಭಾವದಿಂದ ಆಯೋಜಿಸಲಾಗಿದ್ದ “ಗುರು ಪೂರ್ಣಿಮಾ ಮಹೋತ್ಸವ – 2026” ರ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀಗಳು ಆಶೀರ್ವಚನ ನೀಡಿದರು.ಶ್ರೀಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ: ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಮುಂಜಾನೆಯಿAದಲೇ ಲೋಕಕಲ್ಯಾಣಾರ್ಥವಾಗಿ ವಿಶೇಷ ಹೋಮ, ಹವನಗಳು ಹಾಗೂ ಶ್ರೀ ಶನೈಶ್ವರಸ್ವಾಮಿಗೆ ಭವ್ಯ ರುದ್ರಾಭಿಷೇಕ ಪೂಜೆಗಳು ನೆರವೇರಿದವು. ಮಠಕ್ಕೆ ಆಗಮಿಸಿದ ಸಹಸ್ರಾರು ಭಕ್ತರಿಗೆ ಶ್ರೀಗಳು ವೈಯಕ್ತಿಕವಾಗಿ ಆಶೀರ್ವಾದ ನೀಡಿ ಪ್ರಸಾದ ವಿನಿಯೋಗಿಸಿದರು. ಶ್ರೀಗಳ ದರ್ಶನ ಪಡೆಯಲು ಮುಂಜಾನೆಯಿAದಲೇ ಮಠದ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ:ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಕಲೆ ಹಾಗೂ ಸಾಹಿತ್ಯಕ್ಕೆ ಸದಾ ಪ್ರೋತ್ಸಾಹ ನೀಡುವ ಶ್ರೀಗಳ ಆಶಯದಂತೆ ಮಠದಲ್ಲಿ ವಿಶೇಷ “ರಂಗಗೀತೆ ಕಾರ್ಯಕ್ರಮ”ವನ್ನು ಆಯೋಜಿಸಲಾಗಿತ್ತು. ರಂಗಭೂಮಿ ಕಲಾವಿದರ ಗಾಯನವನ್ನು ಆಲಿಸಿದ ಶ್ರೀಗಳು, ಕಲೆ ಮತ್ತು ಸಂಸ್ಕೃತಿಗಳು ಸಮಾಜವನ್ನು ಒಗ್ಗೂಡಿಸುವ ಶಕ್ತಿ ಹೊಂದಿವೆ ಎಂದು ಶ್ಲಾಘಿಸಿದರು.ಕ್ಷೇತ್ರದ ಪೀಠಾಧಿಪತಿಗಳಾದ ಶ್ರೀ ಸಿದ್ದರಾಜು ಸ್ವಾಮೀಜಿಯವರ ಸಮಾಜಮುಖಿ ಚಿಂತನೆ ಹಾಗೂ ಧಾರ್ಮಿಕ ಸತ್ಕಾರ್ಯಗಳಿಗೆ ಸಾಕ್ಷಿಯಾದ ಈ ಮಹೋತ್ಸವದಲ್ಲಿ ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಭಕ್ತರು, ಅಧಿಕಾರಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು, ನಿವೃತ್ತ ಆಧಿಕಾರಿಗಳು, ಸಮುದಾಯದ ಮುಖಂಡರು ಭಕ್ತಾದಿಗಳು ಪಾಲ್ಗೊಂಡು ಶ್ರೀಗಳ ಪಾದಪೂಜೆ ನೆರವೇರಿಸಿ ಧನ್ಯರಾದರು.



