ಬೆಂಗಳೂರು: ಸಾಧಕರು ಬಿಟ್ಟು ಹೋದ ಹೆಜ್ಜೆ ಗುರುತುಗಳು ಸದಾ ನಮ್ಮನ್ನು ಆಕರ್ಷಿಸುತ್ತವೆ. ಹಾಗಾಗಿ ನಾವು ಸದಾ ಅವರನ್ನು ನೆನಪಿಸಿಕೊಳ್ಳುತ್ತೇವೆ. ಅದು ನಮ್ಮ ಕರ್ತವ್ಯ ಕೂಡ. ಆ ಕಾರಣದಿಂದಾಗಿಯೇ ಇಂತಹ ಕಾರ್ಯಕ್ರಮಗಳು ರೂಪುಗೊಳ್ಳುತ್ತವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು ಅಭಿಪ್ರಾಯಪಟ್ಟರು.ಕನ್ನಡ ಸಂಘರ್ಷ ಸಮಿತಿ ಆಯೋಜಿಸಿದ್ದ ಡಾ.ಅನುಪಮಾ ನಿರಂಜನ ಹಾಗೂ ಡಾ.ಕೋ.ವೆಂ.ರಾಮಕೃಷ್ಣೇಗೌಡ ಅವರ ಹುಟ್ಟು ಹಬ್ಬ, ಪ್ರಶಸ್ತಿ ಪ್ರದಾನ ಹಾಗೂ ಕಥಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮಲ್ಲಿ ಸುಕೃತ ಮನಸ್ಸುಳ್ಳವರು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಹಾಗೂ ಶಾಶ್ವತವಾಗಿ ಉಳಿಯುವಂತಹ ಕೆಲಸಗಳನ್ನು ಮಾಡುತ್ತಾರೆ. ಆದರೆ ಇವರು ಸದ್ದು ಗದ್ದಲ ಮಾಡುವವರಲ್ಲ ಹಾಗೂ ಸ್ವಾರ್ಥ ಇವರಲ್ಲಿರುವುದಿಲ್ಲ. ಇವರು ಸಿಕ್ಕ ಅವಕಾಶದಲ್ಲಿ ಏನನ್ನಾದರು ಸಮಾಜಕ್ಕೆ ಕೊಡುಗೆ ಕೊಡಲೇಬೇಕೆಂದು ಶ್ರಮಿಸುತ್ತಾರೆ. ಇಂತಹವರು ಸದಾ ಆದರ್ಶಪ್ರಾಯರಾಗಿ ನೆನಪಲ್ಲಿ ಉಳಿಯುತ್ತಾರೆ.ಇಂತಹ ಸುಕೃತ ಮನಸ್ಸಿನ ಡಾ. ಅನುಪಮಾ ನಿರಂಜನ ಅವರು ವೈದ್ಯ ಲೋಕಕ್ಕೆ ಮಾದರಿ. ಅವರು ವೈದ್ಯರಾಗಿದ್ದುಕೊಂಡು ಸಾಹಿತ್ಯದಲ್ಲಿಯೂ ಸಾಧನೆ ಗೈದವರಾಗಿದ್ದಾರೆ. ಅವರ ಸಾಹಿತ್ಯದಲ್ಲಿ ಮಹಿಳಾ ಪರ ಚಿಂತನೆ ಹಾಗೂ ಮಕ್ಕಳಿಗಾಗಿ ರಚಿಸಿದ ದಿನಕ್ಕೊಂದು ಕಥೆಗಳು ಇಂದಿಗೂ ಪ್ರಸ್ತುತವಾಗಿವೆ. ಆ ಕಾರಣಕ್ಕಾಗಿಯೇ ನಾವು ಅವರುನ್ನು ನೆನೆಯುತ್ತೇವೆ ಎಂದರು.ಕೋ.ವೆಂ. ರಾಮಕೃಷ್ಣೇಗೌಡ ಅವರು ನಿಷ್ಠುರವಾದಿಯೂ ಹಾಗೂ ಉತ್ತಮ ಕನ್ನಡ ಹೋರಾಟಗಾರರಾಗಿದ್ದರು. ಅವರನ್ನು ನೆನಪು ಮಾಡಿಕೊಡುವ ಈ ಕಾರ್ಯಕ್ರಮ ಆಯೋಜನೆ ಮಾಡಿರುವ ಸಂಘರ್ಷ ಸಮಿತಿ ಉತ್ತಮ ಕಾರ್ಯ ಮಾಡುತ್ತಿರುವುದಕ್ಕೆ ಸಾಕ್ಷಿ ಎಂದರು.
ಅAತೆಯೇ ನಮ್ಮಲ್ಲಿ ರೋದಕ ಮನಸ್ನುಳ್ಳವರು ಸದ್ದು ಗದ್ದಲದಲ್ಲಿ ಮುಳುಗಿ, ಸ್ವಾರ್ಥ ಮೆರೆದು ಸಿಕ್ಕ ಅವಕಾಶಗಳನ್ನು ದುರ್ಬಳಕೆ ಮಾಡಿಕೊಂಡು ಕಣ್ಮರೆಯಾಗುತ್ತಾರೆ. ಇವರು ಸಿಕ್ಕ ಅವಕಾಶದಲ್ಲಿ ಏನೆಲ್ಲ ದಕ್ಕಿಸಿಕೊಳ್ಳಲು ಸಾಧ್ಯ ಎಂದು ಹಪಾಹಪಿಸುತ್ತಿರುತ್ತಾರೆ. ಇಂತಹ ರೋದಕ ವರ್ಗ ಜೀವಂತ ಇದ್ದರೂ ನೈಜವಾಗಿ ಅವರು ಸತ್ತಂತೆಯೇ ಸರಿ ಎಂದರು. ಕರ್ನಾಟಕ ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕೆ ಡಾ. ಎಚ್. ಎಲ್. ಪುಷ್ಪ ಅವರು ಮಾತನಾಡಿ, ಡಾ. ಅನುಪಮಾ ನಿರಂಜನ ಅವರು ಅಂತರ್ ಜಾತಿ ವಿವಾಹವಾಗಿ ಸಮಾಜಕ್ಕೆ ಮಾದರಿಯಾದ ಚೇತನ. ಅವರು ಮನೆಯಲ್ಲಿ ಸ್ರೀಗಾಗಿ ಪ್ರತ್ಯೇಕ ಕೊಠಡಿ ಇರಬೇಕು. ಅವರ ಓದು ಬರಹಕ್ಕೆ ಪೂರಕವಾದ ವ್ಯವಸ್ಥೆ ಕಡ್ಡಾಯವಾಗಿ ಇರಬೇಕೆಂದು ಪ್ರತಿಪಾದಿಸಿ, ಮಹಿಳಾಪರವಾದ ಧ್ವನಿಯಾಗಿ ಗುರುತಿಸಿಕೊಂಡಿದ್ದರು. ಅಂತೆಯೇ ಕೋ.ವೆಂ. ರಾಮಕೃಷ್ಣೇಗೌಡ ಅವರು ಪ್ರಾಧ್ಯಪಕರಾಗಿದ್ದುಕೊಂಡು ಕನ್ನಡ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೇ ಸಾಹಿತ್ಯ ಕೃಷಿಯಲ್ಲಿ ತೊಡಿಗಿಕೊಂಡಿದ್ದರು ಹಾಗಾಗಿ ಇವರು ಸಹ ಒಂದು ಚೇತನವೇ ಸರಿ ಎಂದರು. ಸಂಘ ಸಂಸ್ಥೆಗಳನ್ನು ನಡೆಸುವುದು ಕಷ್ಟದ ಕೆಲಸವಾಗಿದೆ. ಅನಿರೀಕ್ಷಿತ ಘಟನೆಗಳು ಜರುಗಿ ಅನಗತ್ಯ ಗೊಂದಲಗಳಿಗೆ ಕಾರಣವಾಗಿ ಸಂಘಟಕರಿಗೆ ಅನಗತ್ಯ ಸಂಕಟ ಉಂಟಾಗುವ ಸಾಧ್ಯತೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಅಂತಹದರಲ್ಲಿ ಕನ್ನಡ ಸಂಘರ್ಷ ಸಮಿತಿ ಸುದೀರ್ಘ 47 ವಸಂತ ಪೂರೈಸಿರುವುದು ಅಭಿನಂದನಾರ್ಹ ಎಂದು ಅಭಿಪ್ರಾಯಪಟ್ಟರು.ದು. ಸರಸ್ವತಿ ಅವರಿಗೆ ಡಾ. ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಆರ್. ಸದಾಶಿವಯ್ಯ ಜರಗನಹಳ್ಳಿ ಅವರಿಗೆ ಡಾ. ಕೋ.ವೆಂ.ರಾ. ಕನ್ನಡ ಪರಿಚಾರಕ ಪ್ರಶಸ್ತಿ ಪ್ರಧಾನ ಮಾಡಲಾಯಿತು. ರಾಜ್ಯ ಮಟ್ಟದ ಮಹಿಳಾ ಕಥಾ ಸ್ಪರ್ಧೆಯ ವಿಜೇತರಾದ ಜ್ಯೋರ್ತಿಲಕ್ಷ್ಮೀ ಅವರಿಗೆ ಪ್ರಥಮ ಬಹುಮಾನ, ರೇಶ್ಮಾ ಗುಳೇದಗುಡ್ಡಾಕರ್ ಅವರಿಗೆ ದ್ವಿತೀಯ ಬಹುಮಾನ ಹಾಗೂ ಆಶಾ ನಾಗರಾಜ್ ಅವರಿಗೆ ತೃತೀಯ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಕನ್ನಡ ಹೋರಾಟಗಾರ ರಾಮಣ್ಣ ಎಚ್. ಕೋಡಿಹೊಸಹಳ್ಳಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಅಧ್ಯಕ್ಷ ಎ.ಎಸ್.ನಾಗರಾಜ ಸ್ವಾಮಿ ಆಶಯ ನುಡಿಯಾಡಿದರು. ಪ್ರಧಾನ ಕಾರ್ಯದರ್ಶಿ ತಾ.ಸಿ. ತಿಮ್ಮಯ್ಯ ಸ್ವಾಗಿತಿಸಿದರು. ಜಂಟಿ ಕಾರ್ಯದರ್ಶಿ ಡಾ. ಇಂದಿರಾ ಶರಣ್ ಜಮ್ಮಲದಿನ್ನಿ ಕಾರ್ಯಕ್ರಮ ನಿರೂಪಿಸಿದರು.
ಸಾಧಕರು ಬಿಟ್ಟು ಹೋದ ಹೆಜ್ಜೆ ಗುರುತುಗಳನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ



