ಗುಂಡ್ಲುಪೇಟೆ: ಬಂಡೀಪುರ ಸಂರಕ್ಷಿತಾರಣ್ಯಗಳಲ್ಲಿ ಆನೆ ಗಣತಿಯು ಎರಡನೇ ದಿನವಾದ ಶುಕ್ರವಾರವೂ ಮುಂದುವರಿಯಿತು.ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು 13 ವಲಯಗಳ 113 ಬೀಟ್ಗಳು, ಕಾವೇರಿ ವನ್ಯ ಜೀವಿಧಾಮದ 43 ಬೀಟ್ಗಳು, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಗಣತಿ ಕಾರ್ಯ ನಡೆಯುತ್ತಿದ್ದು, ಶನಿವಾರದಂದು ಅಂತ್ಯವಾಗಲಿದೆ.
ಮೊದಲನೇ ದಿನ 15 ಕಿ.ಮೀ. ವ್ಯಾಪ್ತಿಯಲ್ಲಿ ಆನೆಗಳ ಗುಂಪು, ಒಂಟಿ ಆನೆಗಳನ್ನು ನೇರವಾಗಿ ಕಂಡು ಗಣತಿ ಮಾಡಲಾಯಿತು. ಎರಡನೇ ದಿನವಾದ ಶುಕ್ರವಾರ ಲದ್ದಿ ಮೂಲಕ ಆನೆಗಳನ್ನು ಲೆಕ್ಕ ಹಾಕುವ ಪ್ರಕ್ರಿಯೆ ನಡೆಯಿತು.
ಆನೆ ಗಣತಿ ಕಾರ್ಯವನ್ನು ಶುಕ್ರವಾರ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್ ಪ್ರಭಾಕರನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್, ರವೀಂದ್ರ ಮತ್ತು ವಲಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕೆಲ ಕಾಲ ಗಣತಿ ಕಾರ್ಯದಲ್ಲಿ ಪಾಲ್ಗೊಂಡು ಸಲಹೆ ಮತ್ತು ಮಾರ್ಗದರ್ಶನ ನೀಡಿದರು.