ಬೆಂಗಳೂರು: ನೂತನವಾಗಿ ಅಸ್ಥಿತ್ವಕ್ಕೆ ಬರಲಿರುವ ರಾಜ್ಯ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಇರಬೇಕೋ ಬೇಡವೋ ಎಂಬ ಬಗ್ಗೆ ಕಾಂಗ್ರೆಸ್ ಪಕ್ಷದ ವರಿಷ್ಠರಲ್ಲಿ ಒಮ್ಮತ ಮೂಡದೇ ಈ ಬಗ್ಗೆ ಮಹತ್ವದ ಚರ್ಚೆ ನಡೆದಿದೆ.
ಈಗಾಗಲೇ ದೆಹಲಿಯಲ್ಲಿ ಪಕ್ಷದ ವರಿಷ್ಠರ ಸಮ್ಮುಖದಲ್ಲಿ ಸಚಿವರ ಆಯ್ಕೆ ಸಂಬಂಧ ಮಹತ್ವದ ಮಾತುಕತೆ ನಡೆದಿದೆ.
ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ರಾತ್ರಿ ಹೈಕಮಾಂಡ್ನ ಪ್ರಮುಖರಾದ ಸುರ್ಜೇವಾಲಾ ಹಾಗೂ ಕೆ.ಸಿ.ವೇಣುಗೋಪಾಲ್ ಜತೆ ಮಾತುಕತೆ ನಡೆಸಿ ಸಂಭವನೀಯ ಸಚಿವರ ಪಟ್ಟಿಯನ್ನು ಪ್ರತ್ಯೇಕವಾಗಿ ನೀಡಿದ್ದಾರೆ ಎನ್ನಲಾಗಿದೆ. ಇಂದು ಬೆಳಿಗ್ಗೆ 11ಗಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆ ನಡೆಯಬೇಕಾಗಿದ್ದರೂ ಇನ್ನು ಆರಂಭಗೊಂಡಿಲ್ಲ. ಈಗಾಗಲೇ ಕಳೆದ ಸಿದ್ದರಾಮಯ್ಯ ಸಂಪುಟದಲ್ಲಿ ಇದ್ದ ಉಪಮುಖ್ಯಮಂತ್ರಿ ಹುದ್ದೆ ಈ ಬಾರಿಯ ಶಿವಕುಮಾರ್ ಸರ್ಕಾರದಲ್ಲಿ ಇರಬೇಕೇ ಬೇಡವೇ ಎಂಬುದರ ಬಗ್ಗೆ ಗಹನವಾದ ಚರ್ಚೆ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಸ್ಥಾನ ಇರಬೇಕು ಎಂದು ಹೇಳಿ ಮೂವರು ಸಂಭವನೀಯರ ಪಟ್ಟಿಯನ್ನು ನೀಡಿದ್ದಾರೆ ಎನ್ನಲಾಗಿದೆ. ಈ ಪಟ್ಟಿಯಲ್ಲಿ ಅವರ ಆಪ್ತರ ಹೆಸರೇ ಇದೆ ಎಂದು ತಿಳಿದುಬಂದಿದೆ. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಗ್ಗೆ ಒಲವು ಹೊಂದಿಲ್ಲ ಎಂದು ಹೇಳಲಾಗುತ್ತಿದೆ. ಈಗಾಗಲೇ ಮೂವರು ಉಪಮುಖ್ಯಮಂತ್ರಿಗಳು ಇರಬೇಕು ಎಂದು ಹಲವರು ಅಭಿಪ್ರಾಯಪಟ್ಟರೇ ಕೆಲವರು ನಾಲ್ಕು ಮಂದಿ ಇರಬೇಕು ಎಂದು ಹೇಳುತ್ತಿದ್ದು, ಮತ್ತೆ ಕೆಲವರು ಉಪಮುಖ್ಯಮಂತ್ರಿ ಹುದ್ದೆ ಬೇಡವೇ ಬೇಡ ಸಚಿವರಸ್ಥಾನ ಸಾಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾದರೆ ಅದಕ್ಕಾಗಿ ಹಲವರ ಹೆಸರೇ ಸಾಕಷ್ಟಿದೆ. ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಹಿರಿಯರಾದ ಕೆ.ಎಚ್. ಮುನಿಯಪ್ಪ, ಎಂ.ಬಿ.ಪಾಟೀಲ್, ಪ್ರಿಯಾಂಕ ಖರ್ಗೆ, ಆರ್. ಬಿ. ತಿಮ್ಮಾಪುರ, ಜಮೀರ್ ಅಹಮ್ಮದ್, ಯು.ಟಿ.ಖಾದರ್ ಈಶ್ವರ ಖಂಡ್ರೆ ಮತ್ತಿತರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಒಟ್ಟಾರೆ ಇಂದು ಸಂಜೆ ನಾಳೆ ಬೆಳಿಗ್ಗೆ ಒಳಗೆ ಸಂಭವನೀಯ ಸಚಿವರ ಪಟ್ಟಿ ಅಂತಿಮವಾಗಿದ್ದು, ಈ ಪಟ್ಟಿಯಲ್ಲಿ ಉಪಮುಖ್ಯಮಂತ್ರಿಗಳ ಸೇರ್ಪಡೆಯಿರುತ್ತದೋ ಇಲ್ಲವೋ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.



