ದಿಲೀಪ್ ರಾಜ್ ಸುಮಾರು 24ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 2005ರಲ್ಲಿ ತೆರೆಕಂಡ ‘ಭಾಯ್ ಫ್ರೆಂಡ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ‘ಮಿಲನ’ ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ಈ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದರು. ಇದರೊಂದಿಗೆ ‘ಯು ಟರ್ನ್’, ‘ಆರ್ಕೆಸ್ಟ್ರಾ ಮೈಸೂರು’, ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’, ‘7 ಓ ಕ್ಲಾಕ್’, ‘ಕ್ಷಣ ಕ್ಷಣ’ ಅಂತಹ ಸಿನಿಮಾಗಳಲ್ಲಿ ನಟಿಸಿದ್ದರು.
ಅವರ ಪ್ರತಿಭೆಗೆ ತಕ್ಕಂತೆ ದಿಲೀಪ್ ರಾಜ್ಗೆ ಸಿನಿಮಾಗಳಲ್ಲಿ ಮನ್ನಣೆ ಸಿಗಲಿಲ್ಲ. ಹೀಗಾಗಿ ಧಾರಾವಾಹಿಗಳ ಕಡೆಗೆ ಮುಖ ಮಾಡಿದ್ದರು. ಅಲ್ಲೂ ನಟರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ‘ಕಂಬದ ಮನೆ’ ಧಾರಾವಾಹಿ ಅವರ ಮೊದಲ ಧಾರಾವಾಹಿ. ಅವರು ನಟಿಸಿದ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಆಗಿತ್ತು. ಈ ಧಾರಾವಾಹಿಯಲ್ಲಿ ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದರು. ಹಾಗೇ ‘ಪಾರು’, ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದರು. ಇತ್ತೀಚೆಗಷ್ಟೇ ದಿಲೀಪ್ ರಾಜ್ ಹೊಚ್ಚ ಹೊಸ ಧಾರಾವಾಹಿ ‘ಕೃಷ್ಣ ರುಕ್ಕು’ ಆರಂಭ ಮಾಡಿದ್ದರು. ಇಷ್ಟೇ ಅಲ್ಲದೇ, ‘ಬ್ರಹ್ಮಗಂಟು’ ಅನ್ನೋ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ.
ದಿಲೀಪ್ ರಾಜ್ ಅವರು ಮೂಲತ: ಅರಸಿಕೆರೆ ಮೂಲದವರು. ಆದರೆ, ಹುಟ್ಟಿದ್ದು ಬೆಂಗಳೂರಲ್ಲಿ. 1978ರ ಸೆಪ್ಟೆಂಬರ್ 2 ರಂದು ಜನಿಸಿದರು. ಆರಂಭದ ದಿನಗಳಿಂದಲೇ ನಟನೆ ಕಡೆಗೆ ಒಲವು ಮೂಡಿಸಿಕೊಂಡಿದ್ದರು. ಮೊದಲು ನಾಟಕಗಳಲ್ಲಿ ಸಕ್ರಿಯರಾಗಿದ್ದರು. ಆನಂತರ ಸಿನಿಮಾಗಳತ್ತ ಮುಖ ಮಾಡಿದ್ದರು. ದಿಲೀಪ್ ರಾಜ್ ಇತ್ತೀಚೆಗೆ ತೆರೆ ಕಂಡಿದ್ದ ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ನಟಿಸಿದ್ದರು. ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿದ್ದ ಈ ಸಿನಿಮಾ ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಬಹುಶ: ಇದೇ ಅವರು ನಟಿಸಿದ ಕೊನೆಯ ಸಿನಿಮಾ ಎಂದು ಹೇಳ ಲಾಗುತ್ತಿದೆ. ದಿಲೀಪ್ ರಾಜ್ ಅವರ ನಿಧನ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ಲೋಕಕ್ಕೆ ತುಂಬಲಾರದ ನಷ್ಟ ಆಗಿದೆ.
ದಿಲೀಪ್ ರಾಜ್ ಸಿನಿ ಜರ್ನಿ



