ಚಾಮರಾಜನಗರ: ಭಾರತ ಚುನಾವಣಾ ಆಯೋಗದ ನಿರ್ದೆಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್.ಐ.ಆರ್) ಜಿಲ್ಲೆಯಲ್ಲೂ ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ ಈಗಾಗಲೇ ವೇಳಾ ಪಟ್ಟಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರ ಹಾಗೂ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಮತದಾರರ ಪಟ್ಟಿ ಸಿದ್ದಪಡಿಸುವಿಕೆಯಲ್ಲಿ ಮತದಾರರ ಪಟ್ಟಿಯಲ್ಲಿ ಎಲ್ಲ ಅರ್ಹ ನಾಗರಿಕರು ಸೇರ್ಪಡೆಗೊಂಡಿರುವುದನ್ನು ಹಾಗೂ ಅರ್ಹರು ಮತದಾರರ ಪಟ್ಟಿಯಿಂದ ಕೈಬಿಡದಿರುವುದನ್ನು ಖಚಿತಪಡಿಸಿಕೊಳ್ಳಲು, ಮುಕ್ತ, ನಿಷ್ಪಕ್ಷಪಾತ ಚುನಾವಣೆ ನಡೆಸಲು ಮತದಾರರ ಪಟ್ಟಿಯ ವಿಶ್ವಾರ್ಹತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಸುತ್ತಿದೆ ಎಂದರು. ದಿನಾಂಕ 01-10-2026 ಅನ್ನು ಅರ್ಹತಾ ದಿನಾಂಕ ಎಂದು ಪರಿಗಣಿಸಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಜೂನ್ 20 ರಿಂದ 29ರವರೆಗೆ ತಯಾರಿ ತರಬೇತಿ, ನಮೂನೆ ಮುದ್ರಣ ಕಾರ್ಯ ನಡೆಯಲಿದೆ. ಜೂನ್ 30 ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಒ) ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಮತಗಟ್ಟೆಗಳ ಪುನರ್ ವಿಂಗಡಣೆ ಜುಲೈ 29ರೊಳಗೆ ನಡೆಯಲಿದೆ. ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 5ರಂದು ಪ್ರಕಟಿಸಲಾಗುತ್ತದೆ. ಆಗಸ್ಟ್ 5 ರಿಂದ ಸೆಪ್ಟೆಂಬರ್ 4ರವರೆಗೆ ಹಕ್ಕು ಆಕ್ಷೇಪಣೆಗಳ ಸಲ್ಲಿಕೆಗೆ ಅವಕಾಶವಿದೆ. ಆಗಸ್ಟ್ 5 ರಿಂದ ಅಕ್ಟೋಬರ್ 3ರವರೆಗೆ ಹಕ್ಕು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುತ್ತದೆ. ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ವಿವರಿಸಿದರು. ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಗಾಗಿ 983 ಬೂತ್ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ದಿನಾಂಕ 01-06-2026ಕ್ಕೆ 8,79,752 ಮತದಾರರಿದ್ದು, ವಿಶೇಷ ಸಮಗ್ರ ಪರಿಷ್ಕರಣೆಯು ಎಲ್ಲ ಮತದಾರರನ್ನು ಒಳಗೊಳ್ಳಲಿದೆ. ಈವರೆಗೆ ಜಿಲ್ಲೆಯಲ್ಲಿ ಶೇ. 96.88ರಷ್ಟು ಮತದಾರರನ್ನು ಮ್ಯಾಪಿಂಗ್ ಮಾಡಲಾಗಿದೆ. ಆಯೋಗದ ಮಾರ್ಗಸೂಚಿಗಳಿಗನುಗುಣವಾಗಿ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ಬೂತ್ ಮಟ್ಟದ ಏಜೆಂಟರನ್ನು ನೇಮಿಸಲು ಕೋರಲಾಗಿದೆ ಎಂದು ತಿಳಿಸಿದರು.
ಮತದಾರರು ಭಾರತದ ನಾಗರಿಕರಾಗಿದ್ದು, ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಕ್ಷೇತ್ರದ ಸಾಮಾನ್ಯ ನಿವಾಸಿಯಾಗಿದ್ದು, ಯಾವುದೇ ಕಾನೂನಿನಡಿಯಲ್ಲಿ ಅನರ್ಹಗೊಂಡಿರಬಾರದು. ಚುನಾವಣೆಗಳಿಗೆ ಮತದಾರರ ಪಟ್ಟಿಯ ಸಮಗ್ರತೆಯನ್ನ ಕಾಪಾಡಿಕೊಳ್ಳುವುದು ಮೂಲಭೂತವಾಗಿದೆ. ಮತದಾರರ ಪಟ್ಟಿಗಳಲ್ಲಿ ಗಮನಾರ್ಹ ಬದಲಾವಣೆಗಳು ಪುನರಾವರ್ತಿತ ನಮೂದುಗಳ ಸಾಧ್ಯತೆ, ಇನ್ನಿತರ ಕಾರಣಗಳಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕೈಗೊಳ್ಳಲಾಗಿದೆ ಎಂದರು. ಬಿ.ಎಲ್.ಒ ಗಳು ಪ್ರತಿ ಮತದಾರರಿಗೆ ನಕಲು ಪ್ರತಿಗಳಲ್ಲಿ ಗಣತಿ ನಮೂನೆ (ಎನ್ಯುಮಿರೇಶನ್ ಫಾರ್ಮ್) ಮತದಾರರಿಗೆ ವಿತರಿಸಲಿದ್ದಾರೆ. ಎರಡನೇ ಭೇಟಿಯಲ್ಲಿ ಬಿ.ಎಲ್.ಒ ಭರ್ತಿ ಮಾಡಿದ ಫಾರಂ ಅನ್ನು ಸಂಗ್ರಹಿಸಿ ಮತ್ತೊಂದು ಫಾರಂ ಅನ್ನು ಸ್ವೀಕೃತಿಯಾಗಿ ಮತದಾರರಿಗೆ ನೀಡುತ್ತಾರೆ. ಮತದಾರರು ಹಿಂದಿನ ಎಸ್.ಐ.ಆರ್ ನ ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ಒದಗಿಸಬೇಕು. ಹಿಂದಿನ ಎಸ್.ಐ.ಆರ್ ನ ಮಾಹಿತಿಯನ್ನು https://voters.eci.gov.in ರಲ್ಲಿ ಪಡೆಯಬಹುದು. ಬಿ.ಎಲ್.ಒ ರವರು ಫಾರಂ ಸಂಗ್ರಹಿಸಲು ಮೂರು ಬಾರಿ ಭೇಟಿ ಮಾಡಲಿದ್ದಾರೆ. ಮನೆ ಲಾಕ್ ಆಗಿದ್ದರೆ ಫಾರಂ ಅನ್ನು ಮನೆಗೆ ಅಂಟಿಸಲಾಗುತ್ತದೆ. ಫಾರಂಗಳನ್ನು ಸ್ವೀಕರಿಸದಿದ್ದಲ್ಲಿ ಮತದಾರರನ್ನು ಪಟ್ಟಿಗೆ ಸೇರಿಸಲಾಗುವುದಿಲ್ಲ. ಹೊಸ ಮತದಾರರು ಘೋಷಣೆ ನಮೂನೆಯೊಂದಿಗೆ (ಡಿಕ್ಲರೇಶನ್ ಫಾರಂ) ನಮೂನೆ 6ರನ್ನು ಸಲ್ಲಿಸಬೇಕು ಜಿಲ್ಲಾಧಿಕಾರಿಯವರು ವಿವರಿಸಿದರು.
ಎನ್ಯುಮಿರೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಿದ ಪ್ರತಿಯೊಬ್ಬ ಮತದಾರರನ್ನು ಕರಡು ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ. ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ. ಸೇರ್ಪಡೆಗಾಗಿ ಫಾರಂ 6, 8ರಲ್ಲಿ ಮತ್ತು ಹೊರಗಿಡುವಿಕೆ, ಅಳಿಸುವಿಕೆ ಆಕ್ಷೇಪಣೆಗಳನ್ನು ಫಾರಂ 7ರಲ್ಲಿ ಸಲ್ಲಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಇದ್ದರು.
ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ ಶ್ರೀರೂಪ



