ದೆಹಲಿ; ಇಂಡಿಯನ್ ಪ್ರೀಮಿಯರ್ ಲೀಗ್ನ 56ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡವು ಹೀನಾಯವಾಗಿ ಸೋಲನುಭವಿಸಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ ಗಳಲ್ಲಿ 168 ರನ್ ಗಳನ್ನು ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 14.5 ಓವರ್ ಗಳಲ್ಲಿ 86 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಎಸ್ ಆರ್ ಹೆಚ್ ತಂಡ ಬರೋಬ್ಬರಿ 82 ರನ್ ಗಳಿಂದ ಸೋಲೊಪ್ಪಿಕೊಂಡಿದೆ.
ಈ ಸೋಲಿನ ಬಳಿಕ ಮಾತನಾಡಿದ ಎಸ್ ಆರ್ ಹೆಚ್ ತಂಡದ ನಾಯಕ ಪ್ಯಾಟ್ ಕಮಿನ್ಸ್, ಎರಡನೇ ಇನ್ನಿಂಗ್ಸ್ನಲ್ಲಿ ಪಿಚ್ ಬ್ಯಾಟಿಂಗ್ ಮಾಡಲು ಸಾಕಷ್ಟು ಕಷ್ಟಕರವಾಗಿತ್ತು. ವಿಶೇಷವಾಗಿ ಎದುರಾಳಿ ಬೌಲರ್ಗಳು `ಬ್ಯಾಕ್ ಆಫ್ ದಿ ಲೆಂತ್’ ಎಸೆತಗಳನ್ನು ನಿರಂತರವಾಗಿ ಹಾಕಿ ನಮಗೆ ರನ್ ಗಳಿಸಲು ಯಾವುದೇ ಅವಕಾಶ ನೀಡಲಿಲ್ಲ. ಇದು ಟಿ20 ಕ್ರಿಕೆಟ್ನಲ್ಲಿ ಕಂಡುಬಂದ ಅತ್ಯುತ್ತಮ ಬೌಲಿಂಗ್ ಪ್ರದರ್ಶನಗಳಲ್ಲಿ ಒಂದಾಗಿದೆ ಎಂದರು.ಎದುರಾಳಿಗಳ ಬೌಲಿಂಗ್ ಶೈಲಿಯನ್ನು ಗಮನಿಸಿದಾಗ, ನಮ್ಮ ಬೌಲಿಂಗ್ ಅವಧಿಯಲ್ಲಿ ನಾವೂ ಕೂಡ ಲೈನ್ ಮತ್ತು ಲೆಂತ್ ಅನ್ನು ಇನ್ನು ಸ್ವಲ್ಪ ದೀರ್ಘಕಾಲ ಕಾಯ್ದುಕೊಳ್ಳಬೇಕಿತ್ತೇನೋ ಎನಿಸುತ್ತದೆ. ಈ ತಪ್ಪುಗಳಿಂದ ನಾವು ಪಾಠ ಕಲಿಯಲಿದ್ದೇವೆ ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.ಈ ಸೋಲಿನ ಹೊರತಾಗಿಯೂ ನಮ್ಮ ಅಗ್ರ ಕ್ರಮಾಂಕದ ಬ್ಯಾಟಿಂಗ್ ಅತ್ಯುತ್ತಮವಾಗಿದೆ. ಅಗ್ರ ನಾಲ್ಕು ಬ್ಯಾಟರ್ಗಳಲ್ಲಿ ಪ್ರತಿಯೊಬ್ಬರೂ ಈಗಾಗಲೇ 400ಕ್ಕೂ ಹೆಚ್ಚು ರನ್ಗಳನ್ನು ಕಲೆಹಾಕಿದ್ದಾರೆ. ಆದ್ದರಿಂದ ಈ ಒಂದು ಪಂದ್ಯದ ಪ್ರದರ್ಶನವನ್ನು ಅತಿಯಾಗಿ ವಿಶ್ಲೇಷಿಸುವ ಅಗತ್ಯವಿಲ್ಲ. ಟಿ20 ಕ್ರಿಕೆಟ್ನಲ್ಲಿ ಇಂತಹ ಏರಿಳಿತಗಳು ಸಹಜ ಎಂದು ಕಮಿನ್ಸ್ ಅಭಿಪ್ರಾಯಪಟ್ಟಿದ್ದಾರೆ.ಇನ್ನು ಪ್ಲೇಆಫ್ ಹಾದಿ ಬಗ್ಗೆ ಮಾತನಾಡಿದ ಪ್ಯಾಟ್ ಕಮಿನ್ಸ್, ಕಳೆದ ಏಳು ಪಂದ್ಯಗಳಲ್ಲಿ ನಾವು 5 ಅಥವಾ 6 ಪಂದ್ಯಗಳನ್ನು ಗೆದ್ದಿರುವುದರಿಂದ ಸದ್ಯಕ್ಕೆ ನಮ್ಮ ತಂಡ ಸುಸ್ಥಿತಿಯಲ್ಲಿದೆ. ಪ್ಲೇಆಫ್ ತಲುಪಲು ಇನ್ನು ಎರಡು ಪಂದ್ಯಗಳು ಬಾಕಿ ಇವೆ. ನಮಗೆ ಪರಿಚಿತವಿರುವ ಕ್ರೀಡಾಂಗಣಗಳಲ್ಲಿ ಮುಂದಿನ ಪಂದ್ಯಗಳು ನಡೆಯಲಿದ್ದು, ಹಳೆಯ ಗೆಲುವಿನ ಸೂತ್ರಕ್ಕೆ ಮರಳಿ, ಈ ಸೋಲನ್ನು ಮರೆತು ಮುನ್ನಡೆಯಲಿದ್ದೇವೆ ಎಂದಿದ್ದಾರೆ.



