ಬೆಂಗಳೂರು: ಮುಖ್ಯಮಂತ್ರಿಗಳ ಅಪ್ತ ಸಹಾಯಕ ಎಂದು ಹೇಳಿಕೊಂಡು ಸರ್ಕಾರಿ ಮಹಿಳಾ ಅಧಿಕಾರಿಗಳ ಮಾಹಿತಿ ಕಲೆ ಹಾಕುತ್ತಿದ್ದ ವ್ಯಕ್ತಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ವಿಕ್ರಂ ಗೋಪಾಲಸ್ವಾಮಿ ಬಂಧಿತ ಆರೋಪಿ. ಆರೋಪಿ ಮುಖ್ಯಮಂತ್ರಿ ಕಾರ್ಯದರ್ಶಿ, ಪಿಎ, ಕಂದಾಯ ಸಚಿವರ ಪಿಎ ಎಂದು ಹೇಳಿಕೊಂಡು ತಿರುಗಾಡುತ್ತಿದ್ದನು.ಈತ ಡಿಜಿ ಕಚೇರಿ, ಕಮಿಷನರ್ ಕಚೇರಿಯಿಂದ ಕರೆ ಮಾಡ್ತಿದ್ದೇನೆಂದು ಹೇಳಿ ಕಂದಾಯ ಇಲಾಖೆಯ ಮಹಿಳಾ ಅಧಿಕಾರಿಗಳ ಬಗ್ಗೆ ವಿವರ ಕಲೆ ಹಾಕುತ್ತಿದ್ದನು.
ಈತನ ನಿಜ ಬಣ್ಣ ತಿಳಿದು, ಓರ್ವ ಅಧಿಕಾರಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ಪೊಲೀಸರು ವಿಕ್ರಂ ಗೋಪಾಲಸ್ವಾಮಿಯನ್ನು ಬಂಧಿಸಿದರು. ವಿಚಾರಣೆ ವೇಳೆ ವಿಕ್ರಂ ಗೋಪಾಲಸ್ವಾಮಿಯು ನಿವೃತ್ತ ಅಧಿಕಾರಿಯೊಬ್ಬರ ಮಗ ಎಂಬುದು ತಿಳಿದುಬಂದಿದೆ.
ವಿಕ್ರಂ ಗೋಪಾಲಸ್ವಾಮಿ ವಿಧಾನಸೌಧ, ಎಂಎಸ್ ಬಿಲ್ಡಿಂಗ್ನಲ್ಲಿ ಓಡಾಡುತ್ತಿದ್ದನು. ಈತ ಸರ್ಕಾರಿ ಅಧಿಕಾರಿಗಳ ವಿವರ ತಿಳಿದುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ವಿಧಾನಸೌಧ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.