ಬೆಂಗಳೂರು: ಪುಟ್ಟೇನಹಳ್ಳಿ ಪೊಲೀಸರು ಐದು ಜನ ಸರಗಳ್ಳರನ್ನು ಬಂಧಿಸಿರುತ್ತಾರೆ. ಮಾರ್ಚ್ 5 ರಂದು ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ 17ನೇ ಕ್ರಾಸ್ ನಲ್ಲಿ ಓರ್ವ ಮಹಿಳೆ ನಡೆದುಕೊಂಡು ಹೋಗುತ್ತಿರುವ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಹಿಂಬದಿಯಿಂದ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಉಮಾ ಗೋಲ್ಡ್ ಸರವನ್ನು ಕಸಿದು ಪರಾರಿಯಾಗಿದ್ದರು.
ಈ ಪ್ರಕರಣವನ್ನು ದಾಖಲಿಸಿಕೊಂಡು ಬೆನ್ನತ್ತಿದ ಪೊಲೀಸರು, ಇವರುಗಳಿಂದ ಆರು ಚಿನ್ನದ ಸರಗಳು, ಎರಡು ಚಿನ್ನದ ತಾಳಿ, ಮೂರು ಚಿನ್ನದ ಲಕ್ಷ್ಮಿಕಾಸು, ಒಂದು ಜೊತೆ ಚಿನ್ನದ ಓಲೆ, ಒಂದು ಚಿನ್ನದ ಮಾಟಿ ಮತ್ತು ಒಂದು ಆಟೋರಿಕ್ಷಾ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿರುತ್ತಾರೆ. ಇವುಗಳ ಮೌಲ್ಯ ಒಟ್ಟು 5 ಲಕ್ಷ ರೂಪಾಯಿ ಆಗಿರುತ್ತದೆ.
ಆರೋಪಿಗಳಾದ ಪುನೀತ್ ನಾಗೇಶ್ , ಶಿವಲಿಂಗೇಗೌಡ, ಪ್ರತಾಪ್ ಮತ್ತು ಆಕಾಶ್ ಎಂಬುವರನ್ನು ಬಂಧಿಸಿರುತ್ತಾರೆ. ಇವರುಗಳಿಂದ ಪುಟ್ಟೇನಹಳ್ಳಿ ಮೂರು, ಬಗಲ್ಗುಂಟೆ ಒಂದು ಮತ್ತು ಕನಕಪುರದಲ್ಲಿ 1 ದಾಖಲಾಗಿದ್ದ ಪ್ರಕರಣಗಳು ಪತ್ತೆಯಾಗಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.