ಸುತ್ತೂರು: ಮನಸ್ಸು-ದೇಹದ ಸಮತೋಲನಕ್ಕೆ ಉತ್ತಮ ಹವ್ಯಾಸಗಳು ಅವಶ್ಯಕ ಎಂದು ಯೋಗ ಹಾಗೂ ಧ್ಯಾನ ಸಲಹೆಗಾರರಾದ ಶ್ರೀ ಶರತ್ ಕೃಷ್ಣನ್ರವರು ಶ್ರೀ ಸುತ್ತೂರು ಕ್ಷೇತ್ರದಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ವೈದ್ಯಕೀಯ ಸ್ನಾತ್ತಕೋತ್ತರ ವಿದ್ಯಾರ್ಥಿಗಳು ಹಾಗೂ ದಂತವೈದ್ಯ ಹೌಸ್ ಸರ್ಜನ್ಗಳ ಶಿಬಿರದಲ್ಲಿ ಉಪನ್ಯಾಸ ನೀಡುತ್ತಾ ತಿಳಿಸಿದರು. ಮಾನವನು ಸಂಘ ಹಾಗೂ ಸಂಕೀರ್ಣ ಜೀವಿ. ಸಾಮಾಜಿಕ ಜೀವನವು ಸಂಕೀರ್ಣವಾಗಿದುದು, ಕುಟುಂಬದ ಸದಸ್ಯ ಹಾಗೂ ಸಹದ್ಯೋಗಿಗಳೊಂದಿಗೆ ಹೊಂ ದಿಕೊಳ್ಳುವಾಗ ಒತ್ತಡಕ್ಕೆ ಒಳಗಾಗುತ್ತಾನೆ. ಇದು ಆರೋಗ್ಯ ಮತ್ತು ಜೀವನ ನಿರ್ವಹಣೆ ಮೇಲೆ ಪ್ರತಿಕೂಲ ಪ್ರಭಾವ ಬೀರುತ್ತದೆ. ಇದರಿಂದ ಮುಂಗೋಪ ಮತ್ತು ಹೆಚ್ಚು ಕಿರಿಕಿರಿಯನ್ನು ಅನುಭವಿಸಬಹುದು. ಮನಸ್ಸನ್ನು ಶಾಂತಿಯುತವಾಗಿ ಇಟ್ಟು ಕೊಳ್ಳುವುದರಿಂದ ಒತ್ತಡದ ಬದುಕಿನಿಂದ ಹೊರಬರಬಹುದು. ಇದಕ್ಕಾಗಿ ಕೆಲವು ಮಾರ್ಗಗಳೆಂದರೆ ಯೋಗಾಭ್ಯಾಸ, ವ್ಯಾಯಾ ಮ, ಸಂಗೀತ, ಅಗತ್ಯ ನಿದ್ರೆ, ಸಮತೋಲಿನ ಆಹಾರ ಹಾಗೂ ಸ್ವಾಧ್ಯಾಯಗಳು ಎಂದರು. ಯೋಗ ಸಾಧಕರು ಹಾಗೂ ಸಲಹೆಗಾರರಾದ ಡಾ. ಶ್ರೀಧರ್ ದೇಶ್ಮುಖ್ರವರು ಹೃದಯ ಹಾಗೂ ಮನಸ್ಸಿನಲ್ಲಿ ವಿಶಾಲ ಮನೋಭಾವವಿರಬೇಕು. ಮನಸ್ಥಿತಿ ಹಾಗೂ ಪರಿಸ್ಥಿತಿಗಳನ್ನು ಅರಿತು ನಡೆಯುವ ಗುಣವನ್ನು ಬೆಳೆಸಿಕೊಳ್ಳಬೇಕು. ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷದ ಅರ್ಥವನ್ನು ಸ್ಪಷ್ಟವಾಗಿ ಗ್ರಹಿಸಬೇಕು. ಮನೋನಿಗ್ರಹದೊಂದಿಗೆ ಕಾಮ-ಕ್ರೋದಾಧಿಗಳನ್ನು ಜಯಿಸಬೇಕು. ಗುರುವಿನ ಆರ್ಶೀವಾದದಿಂದ ಜೀವನದ ಸತ್ಯವನ್ನು ಅರಿತು ಮೋಕ್ಷ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು. ಶಿಬಿರಾರ್ಥಿಗಳು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸದಲ್ಲಿ ಭಾಗಿಯಾಗಿದ್ದರು. ನಂತರ ಸುತ್ತೂರು ದರ್ಶನದಲ್ಲಿ ಶ್ರೀಮಠದ ಗುರುಪರಂಪರೆಯ ಅನಿಮೇಷನ್ ಸಾಕ್ಷ್ಯಚಿತ್ರವನ್ನು ವೀಕ್ಷಿಸಿ ಶ್ರೀಮಠದ ಭವ್ಯ ಇತಿಹಾಸ ಅರಿತರು. ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೆಳೆಗಳ ಮಾಹಿತಿಯನ್ನು ಪಡೆದು, ಬೀಜ ಸಂಸ್ಕರಣಾ ಘಟಕವನ್ನು ವೀಕ್ಷಿಸಿದರು. ನಂತರ ಕ್ಷೇತ್ರದ ಯಾತ್ರಾ ಸ್ಥಳಗಳಾದ ಮೂಲಮಠ, ಚೋಳರ ಕಾಲದ ಶ್ರೀ ಸೋಮೇಶ್ವರ ದೇವಸ್ಥಾನ, ಶ್ರೀ ಮಹದೇಶ್ವರರು ಕ್ಷೇತ್ರಕ್ಕೆ ಆಗಮಿಸಿ ರಾಗಿ ಬೀಸಿದ ಕಲ್ಲು ಹಾಗೂ ಪುರಾತನ ಶ್ರೀ ವೀರಭದ್ರೇಶ್ವರ ದೇವಸ್ಥಾನಗಳ ದರ್ಶನ ಪಡೆದರು.
ಅಮವಾಸ್ಯೆ ಪ್ರಯುಕ್ತ ಕ್ಷೇತ್ರದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು. ಈ ಸಂದರ್ಭದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದರ್ಶನ ಮತ್ತು ಆರ್ಶೀವಾದವನ್ನು ಎಲ್ಲ ಶಿಬಿರಾರ್ಥಿಗಳು ಪಡೆದು ಧನ್ಯತಾಭಾವ ಹೊಂದಿದರು. ದಂತವೈದ್ಯ ಹೌಸ್ಸರ್ಜನ್ ಡಾ. ವಿನಯರವರು ಪರಮಪೂಜ್ಯರ ಸಾನ್ನಿಧ್ಯದಲ್ಲಿ ಭಕ್ತಿ ಗೀತೆಯನ್ನು ಹಾಡಿದರು. ಸಂಜೆ ಕಪಿಲಾ ನದಿ ತೀರದಲ್ಲಿ ಪ್ರಾರ್ಥನೆ ಹಾಗೂ ಕಪಿಲಾರತಿ ಕಾರ್ಯಕ್ರಮವು ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ನಂತರ ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.ಚ
ಮನಸ್ಸು-ದೇಹದ ಸಮತೋಲನಕ್ಕೆ ಉತ್ತಮ ಹವ್ಯಾಸಗಳು ಅವಶ್ಯಕ’



