ಬೆಂಗಳೂರು: ನಾಳೆ ರಾಜ್ಯ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈಗಾಗಲೇ ಪ್ರಮಾಣ ವಚನಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಪ್ರಮಾಣವಚನಕ್ಕೆ ವ್ಯವಸ್ಥೆ ಕಲ್ಪಿಸಿ ಸಾಕಷ್ಟು ಮಂದಿ ಅಭಿಮಾನಿಗಳನ್ನು ಸೇರಿಸಲು ಸಿದ್ಧತೆ ಆರಂಭ ಮಾಡಲಾಗಿತ್ತಾದರೂ ನಂತರ ನಡೆದ ಬೆಳವಣಿಗೆಗಳಲ್ಲಿ ಜನ ಸೇರಿದರೆ ಆಗುವ ಬೆಳವಣಿಗೆಗಳ ಬಗ್ಗೆ ಮುಂದಾಲೋಚನೆ ನಡೆಸಿ ಇದೀಗ ಲೋಕಭವನದಲ್ಲಿ ಪ್ರಮಾಣ ವಚನ ಸಮಾರಂಭ ನಡೆಸಲು ಕಳೆದ 2 ದಿನಗಳಿಂದ ಸಿದ್ಧತೆ ನಡೆಸಲಾಗುತ್ತಿದೆ. ಲೋಕಭವನದ ಗಾಜಿನ ಮನೆಯಲ್ಲಿ ಸಮಾರಂಭಕ್ಕೆ ಏರ್ಪಾಡು ಮಾಡಲಾಗುತ್ತಿದ್ದು, ಇಂದು ಬೆಳಿಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರು ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಇದಕ್ಕೂ ಮುನ್ನಾ ಡಿ.ಕೆ.ಸಹೋದರ ಹಾಗೂ ಬಮೂಲ್ ಅಧ್ಯಕ್ಷ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ವ್ಯವಸ್ಥೆ ಬಗ್ಗೆ ಖುದ್ದಾಗಿ ಹಾಜರಿದ್ದು, ವೀಕ್ಷಣೆ ನಡೆಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ರಾಜಭವನದಲ್ಲಿ ಆಹ್ವಾನಿತರು ಆಸೀನರಾಗಲು ಆಸನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಗಾಜಿನ ಮನೆಯನ್ನು ಸಿಂಗಾರಗೊಳಿಸಲಾಗಿದೆ. ಲೋಕಭವನದ ಮುಂದಿನ ರಸ್ತೆ ಹಾಗೂ ವಿಧಾನಸೌಧದ ಮುಂದಿನ ರಸ್ತೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರಗಳು ಮತ್ತು ಕಾಂಗ್ರೆಸ್ ಪಕ್ಷದ ಭಾವುಟಗಳಿಂದ ರಾರಾಜಿಸುತ್ತಿವೆ. ಲೋಕಭವನದೊಳಗೆ ಪ್ರವೇಶವಿಲ್ಲದೆ ಸಮಾರಂಭ ವೀಕ್ಷಿಸಲು ಸಾಧ್ಯವಾಗದವರಿಗೆ ಲೋಕಭವನದ ಮುಂದಿನ ರಸ್ತೆ ಮತ್ತು ಅಂಬೇಡ್ಕರ್ ಬೀದಿಯಲ್ಲಿ ಎಲ್ಇಡಿ ಸ್ಕ್ರೀನ್ಗಳನ್ನು ಅಳವಡಿಸಲಾಗುವುದು. ಈಗಾಗಲೇ ತಿಳಿದುಬಂದಂತೆ ರಾಜ್ಯದ ವಿವಿಧ ಧಾರ್ಮಿಕ ಮಠಗಳ 55ಕ್ಕೂ ಹೆಚ್ಚು ಮಂದಿ ಮಠಾಧೀಶರು ಹಿಂದು ಮತ್ತು ಮುಸ್ಲೀಂ ಹಾಗೂ ಕ್ರೈಸ್ತ ಸಮುದಾಯದ ಫಾದರ್ ಮತ್ತು ಧರ್ಮಗುರುಗಳು ಅವರನ್ನು ಸಮಾರಂಭಕ್ಕಾಗಿ ವಿಶೇಷವಾಗಿ ಆಹ್ವಾನಿಸಲಾಗಿದೆ. ಇಂದು ಮಧ್ಯಾಹ್ನ 3ಗಂಟೆಗೆ ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಬಗ್ಗೆ ಸಮಾಲೋಚನಾ ಸಭೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ನಡೆಯಲಿದೆ. ಒಟ್ಟಾರೆ ಸಮಾರಂಭದ ಯಶಸ್ಸಿಗಾಗಿ ಸಕಲ ಸಿದ್ಧತೆಗಳು ನಡೆದಿದ್ದು, ನಾಳೆ 4ಗಂಟೆ 5ನಿಮಿಷಕ್ಕೆ ಸಮಾರಂಭ ನಡೆಯಲಿದೆ.
ನೂತನ ಸಿಎಂ ಪ್ರಮಾಣ ವಚನಕ್ಕೆ ನಡೆದಿದೆ ಭರ್ಜರಿ ಸಿದ್ಧತೆ



