ಮುಳಬಾಗಿಲು: ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರದ ವತಿಯಿಂದ ಅನುದಾನ ಬಿಡುಗಡೆ ಆಗುವುದು ತುಂಬಾ ವಿಳಂಬವಾಗುತ್ತಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಗೋಪಾಲಗೌಡ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಕಸಾಪ ನೂತನ ಅಧ್ಯಕ್ಷರಾಗಿ ಎನ್.ಜಗದೀಶ್ ಅವರ ಪದ ಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನ್ನಡ ಕಾರ್ಯಕ್ರಮಗಳಿಗೆ ಎಲ್ಲಾ ಸದಸ್ಯರನ್ನು ಆಹ್ವಾನ ಮಾಡುವ ಕುರಿತು ತುಂಬಾ ಗೊಂದಲಗಳಿವೆ. ನಮಗೆ ರಾಜ್ಯಾಧ್ಯಕ್ಷರು ಈಗಾಗಲೇ ಸೂಚನೆಗಳನ್ನು ನೀಡಿದ್ದಾರೆ. ಆ ನಿಟ್ಟಿನಲ್ಲಿ ನಾವೂ ಸಹ ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ ಎಂದರು.
ಕಸಾಪ ನೂತನ ಅಧ್ಯಕ್ಷ ಎನ್.ಜಗದೀಶ್ ಮಾತನಾಡಿ, ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸ ಇದೆ. ಅಂತಹ ಚಾರಿತ್ರಿಕ, ಐತಿಹಾಸಿಕ ಹಿನ್ನೆಲೆ ಹೊಂದಿರುವ ನಮ್ಮ ನಾಡು, ನುಡಿಗೆ ಯಾರೂ ಸಹ ಧಕ್ಕೆ ತರದಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಕನ್ನಡ ಪರ ಕಾರ್ಯಕ್ರಮಗಳು ನಿಂತ ನೀರಲ್ಲ ಸದಾ ಹರಿಯುವ ನೀರಿನಂತೆ ಆದ ಕಾರಣದಿಂದ ಎಲ್ಲರೂ ಕೈ ಜೋಡಿಸಿದರೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ ಎಂದರು.
ನಿಕಟ ಪೂರ್ವ ಅಧ್ಯಕ್ಷ ಹರೀಶ್ ಮಾತನಾಡಿ, ಕನ್ನಡ ಸೇವೆಯು ವ್ಯಾಪಾರ, ವ್ಯವಹಾರ ಮತ್ತು ರಾಜಕೀಯದಿಂದ ಬಹು ದೂರ. ಇಲ್ಲಿ ಸೇವೆಯೆ ಅತಿ ಮುಖ್ಯ. ಅಷ್ಟೇ ಅಲ್ಲ ಇಲ್ಲಿ ಯಾರೂ ಸಹ ಲಾಭದಾಯಕ ಮನಸ್ಸನ್ನು ಹೊಂದಿರುವುದಿಲ್ಲ. ಆದ್ದರಿಂದ ಜವಬ್ದಾರಿಯುತ ಸ್ಥಾನಕ್ಕೆ ನಾವೆಲ್ಲರೂ ಸಹಕಾರವನ್ನು ನೀಡುವ ಮೂಲಕ ಕನ್ನಡ ಕಾರ್ಯಕ್ರಮಗಳಿಗೆ ಸಹಕಾರವನ್ನು ನೀಡಬೇಕೆಂದು ಕೋರಿದರು. ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಎಂ.ವಿ.ಜನಾರ್ಧನ್, ಶಂಕರಪ್ಪ, ಕನ್ನಡ ಪರ ಸಂಘಟನೆಗ ಒಕ್ಕೂಟ ಅಧ್ಯಕ್ಷ ಶಂಕರ್ ಕೇಸರಿ, ದಲಿತ ಮುಖಂಡ ಮೆಕಾನಿಕ್ ಶ್ರೀನಿವಾಸ್ ಸೇರಿದಂತೆ ಕಸಾಪ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.