ಮೈಸೂರು/ಬೆಂಗಳೂರು: ಅಸ್ಸಾಂನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಮೇಲಿನ ದಾಳಿ ಹಾಗೂ ದೇವಾಲಯ ಪ್ರವೇಶಕ್ಕೆ ನಿರಾಕರಿಸಿದ್ದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ವತಿಯಿಂದ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಲಾಗಿದೆ.
ಬೆಂಗಳೂರಿನಲ್ಲಿಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನಾ ಧರಣಿ ನಡೆಸಿ ಅಸ್ಸಾಂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಈ ಪ್ರತಿಭಟನೆಯಲ್ಲಿ ಉಪಮುಖ್ಯಮಂತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖಂಡರಾದ ಬಿ.ಕೆ.ಹರಿಪ್ರಸಾದ್, ಕೆ.ಜೆ.ಜಾರ್ಜ್, ಸಲೀಂ ಅಹಮದ್ ಮೊದಲಾದವರು ಪಾಲ್ಗೊಂಡರು.
ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಸಮಾಜದ ಎಲ್ಲರಿಗೂ ಸಮಾನತೆ, ಸೌಲಭ್ಯ, ನ್ಯಾಯ ದೊರೆತಾಗ ಮಾತ್ರ ರಾಮರಾಜ್ಯ ಆಗುತ್ತದೆ, ಆದರೆ, ರಾಹುಲ್ ಗಾಂಧೀ ಅವರ ನ್ಯಾಯ ಯಾತ್ರೆಯ ಮೇಲೆ ದಾಳಿ ನಡೆಯುತ್ತಿರುವಾಗ ನ್ಯಾಯ ಸಿಗಲು ಹೇಗೆ ಸಾಧ್ಯ, ರಾಮರಾಜ್ಯ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ರಾಜಕೀಯ ಸ್ವಾರ್ಥಕ್ಕಾಗಿ ಇಂದು ದೇಶವನ್ನು ಧರ್ಮ, ಜಾತಿ ಹೆಸರಲ್ಲಿ ಒಡೆಯಲಾಗುತ್ತಿದೆ. ಇದು ದೇಶದ ಸಮಗ್ರತೆ, ಸಾರ್ವಭೌಮತ್ವಕ್ಕೆ ಮಾರಕವಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.ರಾಹುಲ್ ಜೀ ಅವರ ನ್ಯಾಯ ಯಾತ್ರೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಘೋಷಣೆ ಕೂಗಿ, ದಾಳಿ ಮಾಡುತ್ತಿರುವುದು ಅಕ್ಷಮ್ಯ ಎಂದರು.
ಇದು ಪ್ರಜಾಪ್ರಭುತ್ವ ನೀತಿಗೆ ವಿರುದ್ಧವಾಗಿದೆ. ಬಾಯಲ್ಲಿ ಶಾಂತಿ ಮಂತ್ರ ಬಗಲಲ್ಲಿ ಬಡಿಗೆ: ಬಿಜೆಪಿ ಬಾಯಲ್ಲಿ ಶಾಂತಿ ಮಂತ್ರ ಪಠಿಸುತ್ತದೆ. ಬಗಲಲ್ಲಿ ದೊಣ್ಣೆ ಹಿಡಿದು ಹಲ್ಲೆಗೆ ಹೋಗುತ್ತದೆ. 25 ಬಿಜೆಪಿ ಕಾರ್ಯಕರ್ತರು ಬಡಿಗೆ ಹಿಡಿದು ತಮ್ಮ ನ್ಯಾಯ ಯಾತ್ರೆಯ ಬಸ್ ಹಿಂದೆ ಬಂದಿದ್ದರು ಎಂದು ನಾಗಾಂವ್ ನಲ್ಲಿ ಸ್ವತಃ ರಾಹುಲ್ ಗಾಂಧೀ ಅವರೇ ಹೇಳಿದ್ದಾರೆ. ಜೊತೆಗೆ ಅಸ್ಸಾಂನ ಬಿಜೆಪಿ ಸರ್ಕಾರ ನ್ಯಾಯ ಯಾತ್ರೆಯಲ್ಲಿ ಭಾಗಿಯಾಗದಂತೆ ಆ ರಾಜ್ಯದ ಜನತೆಗೆ ಬೆದರಿಕೆ ಹಾಕುತ್ತಿದೆ. ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೋ ಅಥವಾ ಸರ್ವಾಧಿಕಾರಿ ರಾಷ್ಟ್ರದಲ್ಲಿದ್ದೇವೆಯೋ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಬಾವುಟ ಹಿಡಿದು ಬಂದ ಗುಂಪು ನ್ಯಾಯ ಯಾತ್ರೆಗೆ ಅಡ್ಡಿಪಡಿಸುತ್ತಿದೆ. ಆದರೆ ನ್ಯಾಯ ಯಾತ್ರೆ ನಿಲ್ಲುವುದಿಲ್ಲ. ರಾಹುಲ್ ಗಾಂಧೀ ಅವರ ಭಾರತ್ ಜೋಡೋ ಯಾತ್ರೆಗೆ ಮತ್ತು ನ್ಯಾಯಯಾತ್ರೆಗೆ ದೇಶಾದ್ಯಂತ ದೊರಕುತ್ತಿರುವ ಜನ ಬೆಂಬಲದಿಂದ ಬಿಜೆಪಿ ವಿಚಲಿತವಾಗಿದೆ. ಹೀಗಾಗಿಯೇ ಈ ರೀತಿ ದಾಳಿ ಮಾಡುತ್ತಿದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲ ಪಕ್ಷಗಳಿಗೂ ಸಮಾನವಾದ ಅವಕಾಶ ಇರಬೇಕು. ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಮುಜರಾಯಿ ಇಲಾಖೆ ಮತ್ತು ಪುರಾತತ್ವ ಸರ್ವೇಕ್ಷಣಾ ಇಲಾಖೆ ವತಿಯಿಂದ ಹಲವಾರು ದೇವಾಲಯಗಳು ಸಂರಕ್ಷಣೆ ಮಾಡಲಾಗಿದೆ, ಆದರೆ ಅದನ್ನು ಕಾಂಗ್ರೆಸ್ ಎಂದಿಗೂ ರಾಜಕೀಯಕ್ಕೆ ಬಳಸಿಕೊಳ್ಳಲಿಲ್ಲ, ಆದರೆ ನಕಲಿ ದೇಶಭಕ್ತರು ಇದನ್ನೇ ಚುನಾವಣಾ ತಂತ್ರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.