ಬೆಂಗಳೂರು: ಇತ್ತೀಚೆಗೆ ರಾಜ್ಯ ಬಿಜೆಪಿ ಘಟಕದಲ್ಲಿ ಕಾಣಿಸಿಕೊಂಡಿರುವ ಮುಖಂಡರ ಪರಸ್ಪರ ಜಗಳ ಇದೀಗ ಪಕ್ಷದ ಹೈಕಮಾಂಡ್ಗೆ ತಲುಪಿದೆ.
ಪಕ್ಷದ ರಾಜ್ಯ ಉಸ್ತುವಾರಿ ಹೊತ್ತಿರುವ ರಾಧಾಮೋಹನ್ ದಾಸ್ ಅಗರ್ವಾಲ್ ಅವರು ಇಂದು ಜಗಳವಾಡಿದ್ದ ಮುಖಂಡರನ್ನು ರಾಜ್ಯ ಕಚೇರಿಗೆ ಬರುವಂತೆ ಕರೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಸಂಸದ ಡಾ. ಕೆ.ಸುಧಾಕರ್, ಶಾಸಕ ಎಸ್.ಆರ್. ವಿಶ್ವನಾಥ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರುಗಳನ್ನು ಬರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಈ ಮುಖಂಡರು ಪರಸ್ಪರ ಮೂದಲಿಕೆ ಮಾತುಗಳನ್ನು ಬಹಿರಂಗವಾಗಿ ಆಡಿದ್ದರು. ಕಳೆದ 27ರಂದು ನಡೆದ ಕೆಂಪೇಗೌಡ ದಿನಾಚರಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಹಾಗೂ ಸಂಸದ ಡಾ. ಕೆ.ಸುಧಾಕರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಡಾ. ಸುಧಾಕರ್ ಆಡಿದ ಮಾತುಗಳಿಗೆ ಸದಾನಂದಗೌಡರು ಬಹಿರಂಗವಾಗಿಯೇ ತಿರುಗೇಟು ನೀಡಿದ್ದರು. ಮತ್ತೊಂದೆಡೆ ಸುಧಾಕರ್ ಹಾಗೂ ಎಸ್.ಆರ್. ವಿಶ್ವನಾಥ್ ನಡುವೆ ಸಹ ಇದೇ ವಿಷಯಕ್ಕೆ ಸಂಬAಧಪಟ್ಟAತೆ ಮಾತುಕತೆ ನಡೆದು ಪರಸ್ಪರರು ಚುನಾವಣೆ ಸ್ಪರ್ಧಿಸುವ ಸಂಬAಧ ಸವಾಲುಗಳನ್ನು ಹಾಕಿದ್ದರು. ಈ ಹಿನ್ನಲೆಯಲ್ಲಿ ಇವರ ಜಗಳ ಪಕ್ಷಕ್ಕೆ ಮುಜುಗರ ತರಿಸುವಂತಾಗಿತ್ತು. ಈ ವಿಷಯ ಸಂಘ ಪರಿವಾರಕ್ಕೂ ಸಹ ಒಂದು ರೀತಿಯಲ್ಲಿ ಇರಿಸು ಮುರಿಸು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸಂಘಪರಿವಾರ ಹಾಗೂ ಬಿಜೆಪಿ ನಡುವೆ ಸಮನ್ವಯ ಸಭೆ ನಡೆದು ಜಗಳವಾಡಿದ ಮುಖಂಡರನ್ನು ಕರೆದು ಸಂಧಾನವನ್ನು ಸಹ ಮಾಡಲಾಗಿತ್ತು ಎನ್ನಲಾಗಿದೆ. ಇದೇ ವಿಷಯ ಭಾನುವಾರ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪವಾಗಿ ಮುಖಂಡರಿಗೆ ತಿಳಿ ಹೇಳಲಾಗಿತ್ತು. ಇಂದು ರಾಧಾಮೋಹನ್ ದಾಸ್ಅವರು ಕರೆದಿರುವ ಮುಖಂಡರನ್ನು ಪ್ರತ್ಯೇಕವಾಗಿ ಮಾತುಕತೆ ನಡೆಸಿ ಅವರಿಗೆ ಪಕ್ಷದ ವತಿಯಿಂದ ರವಾನಿಸಿರುವ ಸಂದೇಶವನ್ನು ಮುಟ್ಟಿಸಲಿದ್ದಾರೆ ಎಂದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಮುಜುಗರ ಉಂಟಾಗುವ ಹೇಳಿಕೆಗಳನ್ನು ಯಾರೇ ಬಹಿರಂಗವಾಗಿ ನೀಡಿದರೂ ಅವರ ವಿರುದ್ಧ ಶಿಸ್ತು ಕ್ರಮವನ್ನು ಜರುಗಿಸುವ ಎಚ್ಚರಿಕೆಯ ಮಾತುಗಳನ್ನು ಹೇಳಲಿದ್ದಾರೆ ಎಂದು ತಿಳಿದುಬಂದಿದೆ.



