ನೆಲಮಂಗಲ: ಬಡವರ ಮತ್ತು ಸಾಮಾನ್ಯ ಜನರ ಕೆಲಸ ಮಾಡಿಕೊಡಬೇಕಾದ ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಸಿಕ್ಕಂತಾಗಿದೆ. ನಿವೇಶನದ ಖಾತೆ ವರ್ಗಾವಣೆ ಮಾಡಿಕೊಡಲು ಬರೋಬ್ಬರಿ 1.20 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಹೋಬಳಿಯ ಕಳಲುಘಟ್ಟ ಗ್ರಾಮ ಪಂಚಾಯಿತಿಯ ಪಿಡಿಒ ಗೀತಾಮಣಿ ಹಾಗೂ ಅವರ ಅಣತಿಯಂತೆ ಹಣ ಪಡೆಯುತ್ತಿದ್ದರೆನ್ನಲಾದ ಯೂಟ್ಯೂಬರ್ ಗಂಗಾಧರ್ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ಬೆಂಗಳೂರಿನ ಹೆಗ್ಗನಹಳ್ಳಿಯ ನಿವಾಸಿಯಾದ ಫಯಾಜ್ ಉಲ್ಲಾಸಬ್ ಅವರು ಕಳಲುಘಟ್ಟ ಗ್ರಾಮದಲ್ಲಿ ನಿವೇಶನವೊಂದನ್ನು ಹೊಂದಿದ್ದರು. ಈ ನಿವೇಶನದ ಖಾತೆಯನ್ನು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ನಿಯಮಾನುಸಾರ ಕೆಲಸ ಮಾಡಿಕೊಡಬೇಕಾದ ಪಿಡಿಒ ಫಯಾಜ್ ಅವರ ಬಳಿ 1,20,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆನ್ನಲಾಗಿದ್ದು ತಾನು ನೇರವಾಗಿ ಸಿಕ್ಕಿಬೀಳಬಾರದೆಂಬ ಬುದ್ದಿವಂತಿಕೆಯಿಂದ ಯೋಚಿಸಿ ಹಣವನ್ನು ತನಗೆ ನೀಡುವ ಬದಲು ತನ್ನ ಆಪ್ತರೆನ್ನಲಾದ ಗಂಗಾಧರ್ ಎಂಬುವವನಿಗೆ ನೀಡುವಂತೆ ಸೂಚಿಸಿದ್ದರು. ಲಂಚ ನೀಡಲು ಇಷ್ಟವಿಲ್ಲದ ಫಯಾಜ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಲೋಕಾಯುಕ್ತ ಎಸ್ಪಿ ಮಹಾಂತೇಶ್ವರ ಜಿದ್ದಿ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಗೌತಮ್ ಮತ್ತು ತಂಡ ಬಲೆ ಬೀಸಿತ್ತು. ಪಿ ಡಿ ಓ ಆಪ್ತ ಗಂಗಾಧರ್ ನಿಗದಿಪಡಿಸಿದ ಸ್ಥಳದಲ್ಲಿ ಫಯಾಜ್ ಅವರಿಂದ ಹಣ ಸ್ವೀಕರಿಸುತ್ತಿದ್ದಂತೆಯೇ ಹೊಂಚು ಹಾಕಿದ್ದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ದಾಳಿ ನಡೆಸಿ ಆತನನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.ವಿಚಾರಣೆಯ ವೇಳೆ ಪಿಡಿಒ ಅವರ ಸೂಚನೆಯ ಮೇರೆಗೆ ಹಣ ಪಡೆಯುತ್ತಿರುವುದಾಗಿ ಗಂಗಾಧರ್ ಒಪ್ಪಿಕೊಂಡ ಬೆನ್ನಲ್ಲೇ ಪೊಲೀಸರು ಇಬ್ಬರನ್ನೂ ಬಂಧಿಸಿ ಹಣವನ್ನು ವಶಪಡಿಸಿಕೊಂಡಿದ್ದಾರೆನ್ನಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ದಾಖಲೆಗಳ ಪರಿಶೀಲನೆ ಮುಂದುವರಿದಿದೆ.ಈ ಘಟನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಗ್ರಾಮ ಪಂಚಾಯಿತಿಗಳAತಹ ಕಚೇರಿಗಳಲ್ಲಿ ಪಿಡಿಒಗಳು ದಲ್ಲಾಳಿಗಳ ಮೂಲಕವೇ ವ್ಯವಹಾರ ನಡೆಸುತ್ತಿದ್ದು, ಸಾಮಾನ್ಯ ಜನರು ಕೆಲಸಕ್ಕಾಗಿ ತಿಂಗಳುಗಟ್ಟಲೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ನಾಗರೀಕರು ಸಿಟ್ಟಾಗಿದ್ದಾರೆ.ಇತ್ತೀಚೆಗೆ ಹಲವರು ಯೂಟ್ಯೂಬ್ ಮಾಡಿಕೊಂಡು ಪತ್ರಿಕೋದ್ಯಮದ ಹೆಸರಲ್ಲಿ ಅಧಿಕಾರಿಗಳ ಬೆದರಿಕೆ ಅಥವಾ ಅಧಿಕಾರಿಗಳ ಜೊತೆ ಕೈಜೋಡಿಸಿ ಹಣ ಮಾಡುವ ಇಂತಹ ‘ನಕಲಿ’ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನ ಆಗ್ರಹಿಸಿದ್ದಾರೆ.



